

ಪಾಟ್ನಾ: ಅಪ್ರಾಪ್ತ ಪ್ರೇಮಿಗಳಿಬ್ಬರು ಜೋಳದ ಹೊಲದಲ್ಲಿ ಕುಳಿತು ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಇದನ್ನ ನೋಡಿದ ಗ್ರಾಮದ ಕೆಲ ವ್ಯಕ್ತಿಗಳು ಪ್ರೇಮಿಗಳ ಸಲ್ಲಾಪದ ದೃಶ್ಯವನ್ನು ದೂರದಲ್ಲಿ ನಿಂತು ಮೊಬೈಲ್ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ಪ್ರೇಮಿಗಳಿಬ್ಬರನ್ನೂ ಬಿದಿರಿನ ಬೊಂಬಿಗೆ ಕಟ್ಟಿ ಮನಬಂದಂತೆ ನಿಂದಿಸಿ ಥಳಿಸಿ ಅದನ್ನೂ ಚಿತ್ರೀಕರಿಸಿದ್ದಾರೆ. ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ, ಅಸಹ್ಯವಾಗಿ ನಿಂದಿಸಬೇಡಿ, ನಾವಿಬ್ಬರೂ ಒಟ್ಟಾಗಿ ಬಾಳುತ್ತೇವೆ ಎಂದು ಕಣ್ಣೀರು ಹಾಕುತ್ತಾ ಕೈ ಮುಗಿದರೂ ಈ ಕ್ರೂರ ಜನರು ಹಿಂಸೆ ಕೊಟ್ಟು ವಿಕೃತಿ ಮೆರೆದಿದ್ದಾರೆ.
ಇಂತಹ ಅಮಾನವೀಯ ಘಟನೆ ಬಿಹಾರದ ಸಮಸ್ತಿಪುರ ಜಿಲ್ಲೆಯ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಿರ್ಜಾಪುರ ಗ್ರಾಮದ ಬಾಲಕನೊಬ್ಬ ಮಹಿಳೆಯರ ಮೇಕಪ್ ಸಾಮಗ್ರಿ ಮಾರಾಟ ಮಾಡಲು ಅಂಜನಾ ಪಂಚಾಯತ್ ವ್ಯಾಪ್ತಿಗೆ ಬರುತ್ತಿದ್ದ. ಈ ವೇಳೆ ಅಂಜನಾ ಗ್ರಾಮದ ಬಾಲಕಿ ಜತೆ ಸ್ನೇಹ ಬೆಳೆದಿದ್ದು, ಪ್ರೇಮಾಂಕುರವಾಗಿತ್ತು. ಕೆಲ ದಿನಗಳಿಂದ ಪ್ರೇಮಿಗಳಿಬ್ಬರೂ ಊರಾಚೆಯ ಹೊಲದಲ್ಲಿ ರಹಸ್ಯವಾಗಿ ಭೇಟಿಯಾಗುತ್ತಿದ್ದರಂತೆ. ಜೂ.27ರಂದು ಇವರಿಬ್ಬರೂ ಜೋಳದ ಹೊಲದಲ್ಲಿ ಮೈಮರೆತು ಕೂತಿದ್ದರು. ಇದನ್ನು ಕಂಡ ಸ್ಥಳೀಯರು ಖುದ್ದಾಗಿ ಆ ದೃಶ್ಯವನ್ನ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನೂ ಓದಿರಿ ಮರ್ಯಾದೆಗೆ ಅಂಜಿ ವಿಜಯಪುರ ಮೂಲದ ಮೂವರು ಗೋವಾದಲ್ಲಿ ಆತ್ಮಹತ್ಯೆ! ಪ್ರಕರಣ ದಿಕ್ಕುತಪ್ಪಿಲು ಪೊಲೀಸರ ಯತ್ನ
ಅಪ್ರಾಪ್ತ ಪ್ರೇಮಿಗಳಿಬ್ಬರ ಸರಸ-ಸಲ್ಲಾಪದ ವಿಡಿಯೋ ನೋಡುತ್ತಿದ್ದಂತೆ ಗ್ರಾಮದ ಜನ ಸ್ಥಳಕ್ಕೆ ದೌಡಾಯಿಸಿದ್ದಾರೆ. ಪ್ರೇಮಿಗಳನ್ನು ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ಪ್ರೇಮಿಗಳು ಮದುವೆ ಆಗುತ್ತೇವೆ ಎಂದರೂ ಆ ಊರಿನವರು ಒಪ್ಪಿಲ್ಲ. ಅವರಿಬ್ಬರೂ ಇನ್ನೂ ಅಪ್ರಾಪ್ತರು. ಅಲ್ಲದೆ, ಬೇರೆ ಬೇರೆ ಜಾತಿಯವರು. ಗ್ರಾಮದಲ್ಲೇ ಹಿರಿಯರ ಸಮ್ಮುಖದಲ್ಲಿ ನ್ಯಾಯಪಂಚಾಯಿತಿ ನಡೆದಿದ್ದು, ಇವರಿಬ್ಬರ ಮದುವೆ ಆಗಬಾರದು ಎಂದು ತೀರ್ಮಾನ ಕೊಡಲಾಗಿದೆ. ಬಾಲಕನಿಗೆ ದಂಡ ವಿಧಿಸಿ ಊರಿಂದ ಆಚೆ ಕಳುಹಿಸಿದ್ದಾರೆ.