ಲುಡೋ ಗೇಮ್​ ಆಡಿ 50 ಸಾವಿರ ರೂ. ಕಳ್ಕೊಂಡ ಮಹಿಳೆ! ಅದೇ ನೋವಲ್ಲಿ ಪತಿಗೆ ಕರೆ ಮಾಡಿ ಸಾವಿಗೆ ಶರಣು | Ludo game

Ludo game
Published on

Ludo game: ಇತ್ತೀಚಿನ ದಿನಗಳಲ್ಲಿ ಸಾಲದ ಆ್ಯಪ್​ಗಳು​ ಮತ್ತು ರಮ್ಮಿ, ಲುಡೋನಂತಹ ಆನ್​ಲೈನ್​ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್​ಲೈನ್​ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಹಣ, ಮನೆ ಹಾಗೂ ಜಮೀನು ಮಾರಿಕೊಂಡು ಬೀದಿಗೆ ಬಿದ್ದಿದ್ದಾರೆ. ಅಲ್ಲದೆ, ಸಾಲದ ಕಿರುಕುಳ ತಾಳಲಾರದೇ ಬಲಿಯಾಗುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕದಿದ್ದರೆ, ಇನ್ನುಷ್ಟು ಅಮಾಯಕ ಜೀವಗಳು ಬಲಿಯಾಗುತ್ತವೆ.

ಕೆಲವರು ಕಿರುಕುಳ ತಾಳಲಾರದೆ ಸಾವಿನ ಮನೆ ಕದ ತಟ್ಟಿದರೆ, ಇನ್ನೂ ಕೆಲವರು ಹಣ ಕಳೆದುಕೊಂಡ ಹತಾಶೆಯಲ್ಲಿ ಕಳ್ಳತನದ ಹಾದಿಯನ್ನು ಹುಡುಕಿಕೊಳ್ಳುತ್ತಾರೆ. ಇದೀಗ ಅಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲುಡೋ ಗೇಮ್​ನಲ್ಲಿ 50 ಸಾವಿರ ರೂ. ಹಣ ಕಳೆದುಕೊಂಡ ಮಹಿಳೆಯೊಬ್ಬಳು ಸಾವಿಗೆ ಶರಣಾಗಿದ್ದಾಳೆ.

ಮೃತ ಮಹಿಳೆಯನ್ನು ಪಲ್ಲವಿ ಶರ್ಮಾ (25) ಎಂದು ಗುರುತಿಸಲಾಗಿದೆ. ಈಕೆ ಉತ್ತರಾಖಂಡದ ಉಧಮಸಿಂಗ್ ನಗರದ ಬಾಜ್‌ಪುರ ನಿವಾಸಿ.

ಪಲ್ಲವಿ ಆನ್‌ಲೈನ್ ಗೇಮ್‌ಗಳ ಚಟ ಹೊಂದಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಪಲ್ಲವಿ ಆನ್‌ಲೈನ್‌ನಲ್ಲಿ ಲುಡೋ ಆಡುತ್ತಿದ್ದಾಗ 10,000 ರೂ. ಕಳೆದುಕೊಂಡಿದ್ದರು. ಇದರಿಂದ ಹೆದರಿದ ಆಕೆ ಕೆಲವು ದಿನಗಳವರೆಗೆ ಆಡುವುದನ್ನು ನಿಲ್ಲಿಸಿದರು. ಆದರೆ, ಆಕೆಯ ಚಟ ಮತ್ತೆ ಆಡಲು ಪ್ರಚೋದಿಸಿತು. ಪರಿಣಾಮ ಮತ್ತೆ ಆಟವಾಡಲು ಪಲ್ಲವಿ ಪ್ರಾರಂಭಿಸಿದರು.

ಕಳೆದ ಶುಕ್ರವಾರ ಮತ್ತೆ 40 ಸಾವಿರ ರೂ. ಹಣ ಕಳೆದುಕೊಂಡ ಪಲ್ಲವಿ ಪತಿಗೆ ಕರೆ ಮಾಡಿ ಇನ್ನು ಮುಂದೆ ನಾನು ಬದುಕುವುದು ಬೇಡ ಎಂದು ಹೇಳಿದ್ದಾಳೆ. ಪತಿ ಫೋನ್ ಮೂಲಕ ಸಮಾಧಾನಪಡಿಸಿ ಸ್ವಲ್ಪ ಹೊತ್ತಿನಲ್ಲಿ ಮನೆಗೆ ತಲುಪಿದಾಗ ಪಲ್ಲವಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net