

ನವದೆಹಲಿ: ಕಾರು ತಯಾರಿಕಾ ಕಂಪನಿಗಳು ಮಾರಾಟ ಹೆಚ್ಚಿಸಲು ದೀಪಾವಳಿ ಪ್ರಯುಕ್ತ ಸಾವಿರಗಳಲ್ಲಿ ಅಲ್ಲ, ಲಕ್ಷ ರೂ.ಗಳಲ್ಲಿ ರಿಯಾಯಿತಿ ನೀಡುತ್ತಿವೆ! ಇದಕ್ಕೆ ಕಾರಣವೂ ಇಲ್ಲದಿಲ್ಲ. ಇತ್ತೀಚಿನ ಕೆಲ ತಿಂಗಳುಗಳಲ್ಲಿ ಕಾರು ಇಂಡಸ್ಟ್ರಿಗೆ ಮಂಕು ಕವಿದಿದ್ದು, ಮಾರಾಟ ಪ್ರಮಾಣ ತೀವ್ರವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಹಬ್ಬದ ಋತುವಿನಲ್ಲಿ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಮಾರುತಿ ಸುಜುಕಿ, ಹೊಂಡಾ, ಜೆಎಸ್ಡಬ್ಲ್ಯು ಎಂಜಿ, ಮಹೀಂದ್ರಾ ಆಂಡ್ ಮಹೀಂದ್ರಾ, ಟಾಟಾ ಮೋಟರ್ಸ್ ಸೇರಿದಂತೆ ಹಲವು ಕಾರು ತಯಾರಿಕಾ ಕಂಪನಿಗಳು ಭರ್ಜರಿ ಡಿಸ್ಕೌಂಟ್ ಘೋಷಿಸಿವೆ. ಐಷಾರಾಮಿ ಕಾರು ತಯಾರಕ ಕಂಪನಿಗಳಾದ ಆಡಿ, ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಜ್ ಕೂಡ ರಿಯಾಯಿತಿ ಘೋಷಿಸಿವೆ.
ಆಡಿ ಕ್ಯು-8 ಇ-ಟ್ರಾನ್ ಕಾರ್ ಮೇಲೆ 10 ಲಕ್ಷ ರೂ., ಕಿಯಾ ಇವಿ6 ಮೇಲೆ 12 ಲಕ್ಷ ರೂ., ಸುಜುಕಿ ಜಿಮ್ನಿ ಮೇಲೆ 2.3 ಲಕ್ಷ ರೂ., ಟೊಯೋಟಾ, ಇನೋವಾದ ಕೆಲ ಕಾರುಗಳ ಮೇಲೆ 1.5 ಲಕ್ಷ ರೂ.ಗಳವರೆಗೆ ರಿಯಾಯಿತಿ ಘೋಷಿಸಲಾಗಿದೆ. ಮಹೀಂದ್ರಾದ ಎಕ್ಸ್ಯುವಿ 400 ಎಲೆಕ್ಟ್ರಿಕ್ ಕಾರ್ ಮೇಲೆ 3 ಲಕ್ಷ ರೂ. ಡಿಸ್ಕೌಂಟ್ ನೀಡಲಾಗಿದೆ. ಮಹೀಂದ್ರಾ ಕಂಪನಿ ತನ್ನ ಎಕ್ಸ್ಯುವಿ 700 ಮಾದರಿಗಳ ಮೇಲೆ ಈ ಜುಲೈನಿಂದಲೇ 2 ಲಕ್ಷ ರೂ.ಗಳ ರಿಯಾಯಿತಿ ನೀಡುತ್ತಿದೆ. ಇನ್ನುಳಿದಂತೆ ಮಾರುತಿ ಬಲೇನೋ 1.1 ಲಕ್ಷ ರೂ., ಮಾರುತಿ ಗ್ರಾ್ಯಂಡ್ ವಿತಾರಾ 1.1ರಿಂದ 1.4 ಲಕ್ಷ ರೂ., ಟೊಯೋಟಾ ಫಾರ್ಚುನರ್ 2 ಲಕ್ಷ ರೂ., ಜೀಪ್ ಕಂಪಾಸ್ 2.5 ಲಕ್ಷ ರೂ., ಎಂಜಿ ಗ್ಲೊಸ್ಟೆರ್ 4.9 ಲಕ್ಷ ರೂ. ರಿಯಾಯಿತಿಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿವೆ ಇನ್ನು, ಐಷಾರಾಮಿ ಕಾರುಗಳಾದ ಬಿಎಂಡಬ್ಲ್ಯುವಿನ ಎಕ್ಸ್5 ಸರಣಿ ಮೇಲೆ 7ರಿಂದ 10 ಲಕ್ಷ ರೂ., ಆಡಿ (ಎ4) ಮೇಲೆ 8 ಲಕ್ಷ ರೂ., ಕಿಯಾ ಇವಿ 6 ಮೇಲೆ 12 ಲಕ್ಷ ರೂ.ಗಳ ರಿಯಾಯಿತಿ ನೀಡಲಾಗುತ್ತಿದೆ.