ಚೀನಾದ ಸಾವಿರಾರು ಶಿಶುವಿಹಾರಕ್ಕೆ ಬಿತ್ತು ಬೀಗ! ಅಚ್ಚರಿ ಮೂಡಿಸುವಂತಿದೆ ಈ ವರದಿ |China

CHINA
Published on

ಬೀಜಿಂಗ್​: ಚೀನಾ ದೇಶದಲ್ಲಿ ಯಾವಾಗ ಒಂದೇ ಮಗುವಿನ ನೀತಿ ಜಾರಿಗೊಳಿಸಲಾಯಿತೋ ಅಂದಿನಿಂದ ಜನನ ಪ್ರಮಾಣದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಹಂತ ಹಂತವಾಗಿ ಜನಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಒಂದು ಮಗು ಎಂಬ ನೀತಿ ಸದ್ಯ ಆಳವಾದ ಜನಸಂಖ್ಯಾ ಬಿಕ್ಕಟ್ಟಿಗೆ ದೂಡಿರುವುದು ಇದೀಗ ದೇಶವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಜನನ ಪ್ರಮಾಣದಲ್ಲಿ ಗಮನಾರ್ಹ ಕುಸಿತದಿಂದಾಗಿ ಇದೀಗ ದೇಶಾದ್ಯಂತ ಮಕ್ಕಳ ದಾಖಲಾತಿ ಕೂಡ ಗಣನೀಯವಾಗಿ ಇಳಿದಿದೆ. ಹೀಗಾಗಿ ಚೀನಾದ ಸಾವಿರೂರು ಅದರಲ್ಲೂ ಹೆಸರಾಂತ ಶಿಶುವಿಹಾರಗಳಿಗೆ (Kindergartens closed in China) ಸದ್ಯ ಬೀಗ ಜಡಿಯುವಂತ ಪರಿಸ್ಥಿತಿ ಎದುರಾಗಿದೆ.

ಅಧಿಕೃತ ವರದಿಯೊಂದರ ಪ್ರಕಾರ, 2023ರಲ್ಲಿ, ಶಿಶುವಿಹಾರಗಳ ಸಂಖ್ಯೆ 14,808ರಿಂದ 274,400ಕ್ಕೆ ಇಳಿದಿದೆ ಎಂದು ಚೀನಾದ ಶಿಕ್ಷಣ ಸಚಿವಾಲಯದ ವಾರ್ಷಿಕ ವರದಿ ಉಲ್ಲೇಖಿಸಿದೆ. ಚೀನಾದಲ್ಲಿ ಜನನ ಪ್ರಮಾಣ ಕುಸಿತದ ಇತ್ತೀಚಿನ ಸೂಚಕದಲ್ಲಿ ಇದು ಸತತ ಎರಡನೇ ವಾರ್ಷಿಕ ಕುಸಿತ ಎಂದು ಹೇಳಲಾಗಿದೆ. ಶಿಶುಗಳ ಡೇ ಕೇರ್​ಗೆ​ ದಾಖಲಾದ ಮಕ್ಕಳ ಸಂಖ್ಯೆ ಸತತ ಮೂರನೇ ವರ್ಷಕ್ಕೆ ಕುಸಿದಿದ್ದು, ಕಳೆದ ವರ್ಷ ಶೇ. 11.55ರಷ್ಟು ಅಥವಾ 5.35 ಮಿಲಿಯನ್ ಕಡಿಮೆಯಾಗಿದೆ. 2023ರಲ್ಲಿ, 40.9 ಮಿಲಿಯನ್‌ಗೆ ಇಳಿದಿದೆ ಎಂದು ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಭಾನುವಾರ (ಅ.27) ವರದಿ ಮಾಡಿದೆ,

china

2023ರಲ್ಲಿ ದೇಶದಲ್ಲಿನ ಪ್ರಾಥಮಿಕ ಶಾಲೆಗಳ ಸಂಖ್ಯೆಯು 5,645ರಿಂದ 143,500ಕ್ಕೆ ಇಳಿದಿದೆ, ಇದು ಶೇ.3.8 ರಷ್ಟು ಕುಸಿತ ಕಂಡಿದೆ. ಈ ಕುಸಿತವು ಚೀನಾದಲ್ಲಿ ವ್ಯಾಪಕ ಜನಸಂಖ್ಯಾ ಬದಲಾವಣೆಯನ್ನು ತಂದಿದೆ. ಜನನ ಪ್ರಮಾಣದಲ್ಲಿ ಹೆಚ್ಚಳ ಏನಾದರೂ ಕಾಣಿಸುತ್ತಿದೆಯೇ ಎಂದು ನೋಡುವುದಾದರೆ, ಹಿಂದಿನ ಕುಸಿತಕ್ಕಿಂತ ಹೆಚ್ಚಾಗಿ ಇಳಿಕೆಯೇ ವರದಿಯಾಗುತ್ತಿರುವುದು ಇದೀಗ ಚೀನಾದಲ್ಲಿ ತೀವ್ರ ಆತಂಕ ಮೂಡಿಸಿದೆ. ಇದು ಕೇವಲ ಜನಸಂಖ್ಯೆ ಇಳಿಕೆಗೆ ಮಾತ್ರ ಹೊಡೆತ ನೀಡದೆ, ಭವಿಷ್ಯದ ಆರ್ಥಿಕ ಬೆಳವಣಿಗೆಗೆ ಗಂಭೀರ ಅಪಾಯ ತಂದೊಡ್ಡಿದೆ.

ಚೀನಾಗೆ 'ಅವ' ಬಿಕ್ಕಟ್ಟು

ಕೇವಲ ಜನನ ಪ್ರಮಾಣ ಕುಸಿತ ಮಾತ್ರ ದೊಡ್ಡ ತೊಂದರೆಯಾಗಿ ಕಾಡದ ಚೀನಾಗೆ ವೃದ್ಧಾಪ್ಯ ಸಂಖ್ಯೆಯಲ್ಲಿ ಗಣನೀಯ ಏರಿಕೆ ಹೊಸ ಸಮಸ್ಯೆಯಾಗಿ ಮಾರ್ಪಟ್ಟಿದೆ. ಒಂದೆಡೆ ಕ್ಷಿಣಿಸುತ್ತಿರುವ ಜನಸಂಖ್ಯೆ ಮತ್ತು ಫಲವತ್ತತೆ ದರಗಳು ಕುಸಿದಿದ್ದರೆ, ವೃದ್ಧಾಪ್ಯ ಜನಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿರುವುದು ಮತ್ತೊಂದೆಡೆ. 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ಒಳಗೊಂಡ ಚೀನಾದ ಜನಸಂಖ್ಯೆಯು 2023ರ ಅಂತ್ಯದ ವೇಳೆಗೆ 300 ಮಿಲಿಯನ್ ತಲುಪಿದೆ. ಇದು 2035ರ ವೇಳೆಗೆ 400 ಮಿಲಿಯನ್ ಮೀರಬಹುದು ಮತ್ತು 2050ರ ವೇಳೆಗೆ 500 ಮಿಲಿಯನ್ ತಲುಪುವ ಸಾಧ್ಯತೆಗಳು ಹೆಚ್ಚಿವೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಈ ತಿಂಗಳ ಆರಂಭದಲ್ಲಿ ರಿಪೋರ್ಟ್​ ಮಾಡಿರುವುದಾಗಿ ವರದಿಯಾಗಿದೆ.

ಉದ್ಯೋಗ ಬದಲಾವಣೆ

ಈ ಬೆಳವಣಿಗೆಗಳ ನಡುವೆ ಹೆಚ್ಚಿನ ಸಂಖ್ಯೆಯ ಶಿಶುವಿಹಾರಗಳನ್ನು ಹಿರಿಯ ನಾಗರಿಕರ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದ್ದು, ಅಲ್ಲಿನ ಅನೇಕ ಸಿಬ್ಬಂದಿಗಳು ವೃದ್ಧರನ್ನು ನೋಡಿಕೊಳ್ಳುವ ಸಲುವಾಗಿ ತಮ್ಮ ಉದ್ಯೋಗಗಳನ್ನು ಬದಲಾಯಿಸಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಶಿಶುಗಳು ಜನಿಸದೆ ಚೀನಾದ ಜನನ ಪ್ರಮಾಣ ಸಂಖ್ಯೆ ಕುಸಿತವಾದರೆ, ಅತ್ತ ವೃದ್ಧಾಪ್ಯ ಸಂಖ್ಯೆಯಲ್ಲಿ ನಿರೀಕ್ಷೆಗೂ ಮೀರಿದ ಏರಿಕೆ ಕಂಡುಬಂದಿರುವುದು ದೇಶದ ಹಲವು ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿ ನಿಂತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net