

ನವದೆಹಲಿ: ಚಿನ್ನ, ಬೆಳ್ಳಿಯಿಂದ ಮಾಡಲ್ಪಟ್ಟ ಆಭರಣಗಳು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಒಡವೆಗಳು ಅನ್ನುವುದಕ್ಕಿಂತ ಮೊದಲು ಚಿನ್ನ (Gold) ಎಂಬ ಪದ ಕೇಳಿದ್ರೆ ಸಾಕು ಜನಸಾಮಾನ್ಯರ ಕಿವಿಗಳು ನೆಟ್ಟಗಾಗುತ್ತವೆ. ಏಕೆಂದರೆ, ಬಂಗಾರ ಎಂಬುದು ಪ್ರತಿಯೊಬ್ಬರ ಒಲಿವಿನ ಗುರುತು ಎಂದೇ ಹೇಳಬಹುದು. ಯಾವುದಾದರೂ ಒಂದು ಕಾರ್ಯಕ್ರಮ, ತುಂಬಿದ ಸಭೆ ಅಥವಾ ಸ್ನೇಹಿತರೊಂದಿಗಿನ ಔತಣಕೂಟ ಹೀಗೆ ನಾನಾ ಸಮಾರಂಭಗಳಲ್ಲಿ ಚಿನ್ನಾಭರಣಗಳನ್ನು ಧರಿಸಿ, ಮಿಂಚುವುದು ಕೆಲವರ ಆಸೆಯಾದರೆ, ಅದೇ ಒಡವೆಗಳನ್ನು ತಮ್ಮ ಆಸ್ತಿಯ ಮೌಲ್ಯವನ್ನಾಗಿ ಪರಿವರ್ತಿಸಿಕೊಳ್ಳುವವರು ಒಂದಷ್ಟು ಜನ ಎಂಬುದರಲ್ಲಿ ಅನುಮಾನವೇ ಬೇಡ. ಇದಕ್ಕೆ ಇಲ್ಲೊಂದು ಸಮೀಕ್ಷೆ ಅದ್ಭುತ ನಿದರ್ಶನ ಎಂದೇ ಹೇಳಬಹುದು.
10 ಭಾರತೀಯರಲ್ಲಿ ಏಳು ಮಂದಿ ಚಿನ್ನವನ್ನು ಸುರಕ್ಷಿತ ಆಸ್ತಿ ಎಂದು ಪರಿಗಣಿಸುತ್ತಾರೆ ಎಂದು ಹೊಸ ಸಮೀಕ್ಷೆಯೊಂದು (Survery) ಬಹಿರಂಗಪಡಿಸಿದೆ. ಅದು ಅವರ ಉಳಿತಾಯದ ಅಭ್ಯಾಸವನ್ನು ಧನಾತ್ಮಕವಾಗಿ ಹೆಚ್ಚಿಸುತ್ತದೆ ಎನ್ನಲಾಗಿದೆ. ಸಮೀಕ್ಷೆ ಪ್ರಕಾರ, 85% ಕ್ಕಿಂತ ಹೆಚ್ಚು ಜನರು ಬಂಗಾರವನ್ನು ಸಂಪತ್ತಿನ ಸಂರಕ್ಷಣೆಯ ಅಮೂಲ್ಯ ಹಾಗೂ ಮೂಲ ಆಸ್ತಿ ಎಂದು ನಂಬಿದ್ದಾರೆ. ಈ ರೀತಿ ನಂಬಿಕೆ ಇಟ್ಟುಕೊಳ್ಳಲು ಕಾರಣ, ಅಂದಿನಿಂದ ಇಂದಿನವರೆಗೂ ಚಿನ್ನದ ಬೆಲೆಯಲ್ಲಿ ಇರುವ ಗರಿಷ್ಠ ಏರಿಕೆ. ಬಂಗಾರದ ಮೌಲ್ಯದಲ್ಲಿ ಕುಸಿತಕ್ಕಿಂತ ಹೆಚ್ಚಳವೇ ಅಧಿಕ. ಸದ್ಯ ಈ ಎಲ್ಲಾ ಅಂಶವು ಜನಸಾಮಾನ್ಯರಲ್ಲಿ ಬೇರೂರಿ ಕುಳಿತಿದ್ದು, ಗೋಲ್ಡ್ ಕೊಳ್ಳುವಿಕೆಯಲ್ಲಿ ತಾವು ಮುಗಿಬೀಳುವಂತೆ ಮಾಡಿದೆ.
ಇಂದಿನ ಕಾಲಘಟ್ಟದಲ್ಲಿ ಖರ್ಚು ಹೆಚ್ಚಾಗುತ್ತಿದೆಯೇ ವಿನಃ ಉಳಿತಾಯಕ್ಕೆ ಅಂದುಕೊಂಡಷ್ಟು ಹಣ ಮೀಸಲಿಡುವುದು ಕಷ್ಟಸಾಧ್ಯವಾಗಿದೆ. ಪ್ರತ್ಯೇಕವಾಗಿ ಇಂದಿನ ಯುವಜನತೆ ಹಣವನ್ನು ನೀರಿನಂತೆ ವ್ಯಯಿಸುವುದನ್ನು ನಾವೆಲ್ಲ ದಿನನಿತ್ಯ ಒಂದಲ್ಲ ಒಂದು ರೀತಿಯಲ್ಲಿ ನೋಡುತ್ತಲೇ ಇದ್ದೀವಿ. ಖರ್ಚು-ವೆಚ್ಚಗಳ ನಡುವೆಯೂ ವಿಶೇಷವಾಗಿ 25ರಿಂದ 40 ವರ್ಷ ವಯಸ್ಸಿನ ಒಂದಷ್ಟು ಭಾರತೀಯರು ತಮ್ಮ ಭವಿಷ್ಯಕ್ಕೆ ಮಾಡಬೇಕಾದ ಉಳಿತಾಯವನ್ನು ಈಗಾಗಲೇ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರೆಲ್ಲ ತಮ್ಮ ಬಹುತೇಕ ಹಣವನ್ನು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಿದ್ದು, ಮುಂದಿನ ತಮ್ಮ ನಿವೃತ್ತಿ ಹಾಗೂ ದೀರ್ಘಾವಧಿಯ ಆರ್ಥಿಕ ಪ್ಲ್ಯಾನಿಂಗ್ನ ಭಾಗವಾಗಿ ಭೌತಿಕ ಮತ್ತು ಡಿಜಿಟಲ್ನಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡುತ್ತಿದ್ದಾರೆ ಎಂದು ಸಮೀಕ್ಷೆ ಎತ್ತಿ ತೋರಿಸಿದೆ.
ಸಮೀಕ್ಷೆಯ ಪ್ರಕಾರ, ಶೇ. 70ರಷ್ಟು ಜನರು ಚಿನ್ನವನ್ನು ಸುರಕ್ಷಿತ ಆಸ್ತಿ ಎಂದೇ ಪರಿಗಣಿಸಿದ್ದಾರೆ. ಇಂದಿನ ಡಿಜಿಟಲ್ ಯುಗವು ಈ ಹೂಡಿಕೆಗಳಿಗೆ ಹೆಚ್ಚು ಪುಷ್ಠಿ ನೀಡಿದ್ದು, ಡಿಜಿಟಲ್ ಪ್ಲಾಟ್ಫಾರ್ಮ್ಗಳ ಏರಿಕೆಯು ಯುವಜನತೆಯಲ್ಲಿ ಚಿನ್ನದ ಹೂಡಿಕೆಯ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹೂಡಿಕೆದಾರರು ಬಂಗಾರವನ್ನು ಖರೀದಿಸಲು ಇದೀಗ ಅಧುನಿಕ ತಂತ್ರಜ್ಞಾನದತ್ತ ಹೆಚ್ಚು ಮುಖ ಮಾಡಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಎಸ್ಐಪಿ ಆಯ್ಕೆಗಳ ಮೂಲಕ ಕೈಗೆಟುಕುವಿಕೆ ಮತ್ತು ವರ್ಧಿತ ಸುರಕ್ಷತೆಯು ಭಾರತದಾದ್ಯಂತ ಡಿಜಿಟಲ್ ಚಿನ್ನದ ಹೂಡಿಕೆಗಳನ್ನು ಪ್ರೇರೇಪಿಸುವ ಪ್ರಮುಖ ಅಂಶಗಳಾಗಿವೆ ಎಂದು ಸಮೀಕ್ಷೆ ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).