ಯೂಟ್ಯೂಬ್​ ಲೈವ್​ನಲ್ಲೇ ಮಹಿಳೆ ಮೇಲೆ ಅತ್ಯಾಚಾರ: ವೈರಲ್​ ಆಯ್ತು ಬೆಚ್ಚಿಬೀಳಿಸೋ ದೃಶ್ಯ!

Russia Woman
Published on

ಮಾಸ್ಕೋ: ಯೂಟ್ಯೂಬ್​ ಲೈವ್​ನಲ್ಲಿ ಮಹಿಳೆಯೊಬ್ಬಳನ್ನು ರೇಪ್​ ಮಾಡುತ್ತಿರುವಂತೆಯೂ ಮತ್ತು ಆಕೆಯ ಅಪಾರ್ಟ್​ಮೆಂಟ್ ಫ್ಲ್ಯಾಟ್​ ಅನ್ನು ಧ್ವಂಸಗೊಳಿಸಿರುವ ರಷ್ಯಾದ ಯೂಟ್ಯೂಬ್​ ಸ್ಟ್ರೀಮರ್ಸ್​ ಗ್ಯಾಂಗ್​ ವಿರುದ್ಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಯೂಟ್ಯೂಬರ್ಸ್​ ದಾಳಿಯು ರಷ್ಯಾ ರಾಜಧಾನಿ ಮಾಸ್ಕೋದಿಂದ 150 ಮೈಲಿ ದೂರದಲ್ಲಿರುವ ಯಾರೋಸ್ಲಾವ್ಲ್​ದಲ್ಲಿ ನಡೆದಿದೆ ಎನ್ನಲಾಗಿದೆ. ದಾಳಿಯ ವಿಡಿಯೋ ತುಣುಕು ಯೂಟ್ಯೂಬ್​ ಲೈವ್​ ಮತ್ತು ಟೆಲಿಗ್ರಾಮ್​ನಲ್ಲಿ ಪ್ರದರ್ಶನವೂ ಆಗಿದೆ. ಆತಂಕಕಾರಿ ಸಂಗತಿಯೆಂದರೆ ಯೂಟ್ಯೂಬರ್ಸ್​ ಕೃತ್ಯಕ್ಕೆ ಕೆಲ ವೀಕ್ಷಕರು ಆನ್​ಲೈನ್​ನಲ್ಲಿಯೇ ಹಣವನ್ನು ನೀಡಿದ್ದಾರೆ.

ಸಂತ್ರಸ್ತೆ ಮಹಿಳೆ ವಯಸ್ಸು 30 ವರ್ಷ ಎಂದು ನಂಬಲಾಗಿದೆ. ಮೂರು ಮಕ್ಕಳ ತಾಯಿ ಆಗಿರುವ ಮಹಿಳೆ, 18 ವರ್ಷದ ಅರ್ತೆಮ್​ ಎಸ್​ ಎಂಬಾತನೊಂದಿಗೆ ಡೇಟಿಂಗ್​ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ದಾಳಿಯ ವಿಡಿಯೋ ಆನ್​ಲೈನ್​ನಲ್ಲಿ ಹರಿದಾಡುತ್ತಿದ್ದು, ಅದರಲ್ಲಿರುವ ಯುವಕರ ಗ್ಯಾಂಗ್​ ಗಹಗಹಿಸಿ ನಗುವುದು ಮತ್ತು ಹಣಕ್ಕಾಗಿ ಬೇಡಿಕೆ ಇಡುವುದು ಹಾಗೂ ಅಪಾರ್ಟ್​ಮೆಂಟ್​ ಫ್ಲ್ಯಾಟ್​ ಅನ್ನು ನಾಶ ಮಾಡುತ್ತಿರುವ ದೃಶ್ಯವಿದೆ.

ಲೈವ್​ ನಡುವೆಯೇ ಯೂಟ್ಯೂಬ್​ ವೀಕ್ಷಕರ ಬಳಿ ದೇಣಿಗೆ ಕೇಳಿರುವ ದಾಳಿಕೋರರು ಪ್ರತಿ ದೇಣಿಗೆಗೆ ಒಂದೊಂದು ಹಾನಿ ಮಾಡುವುದಾಗಿಯೂ ಆಣೆ ಮಾಡಿದ್ದಾರೆ. ಅದರಂತೆಯೇ ಬಾಗಿಲನ್ನು ಸೀಳುವುದು, ಫ್ರಿಡ್ಜ್​ ಅನ್ನು ಮುರಿದುಹಾಕುವುದು, ಟಾಯ್ಲೆಟ್​ ಒಡೆದು ಹಾಕುವುದು ಮತ್ತು ಹೂಕುಂಡ ಸೇರಿದಂತೆ ಅನೇಕ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.

ಸದ್ಯ ಆನ್​ಲೈನ್​ನಿಂದ ತೆಗೆದು ಹಾಕಿರುವ ಹೆಚ್ಚುವರಿ ವಿಡಿಯೋವೊಂದರಲ್ಲಿ ಒಂದು ಗುಂಪಿನ ಸದಸ್ಯರು ಮಹಿಳೆಯ ಮೇಲೆ ಬಲತ್ಕಾರ ಮಾಡಿದ್ದಾರೆ. ಆ ಗುಂಪಿನಲ್ಲಿ ಆಕೆ ಡೇಟಿಂಗ್​ ಮಾಡುತ್ತಿದ್ದ ಅರ್ತೆಮ್​ ಸಹ ಭಾಗಿಯಾಗಿದ್ದಾನೆ. ಅಂದಹಾಗೆ ಮಹಿಳೆ ಗಂಡನಿಂದ ದೂರಾಗಿ ಅರ್ತೆಮ್​ ಜತೆ ಡೇಟಿಂಗ್​ ಮಾಡುತ್ತಿದ್ದಳು.

ಇದೊಂದು ಡೇಟ್​ ರೇಪ್ (ಸಲುಗೆ ಬೆಳೆಸಿಕೊಂಡು ಹಿಂಸಿಸುವುದು)​ ಎಂದು ವೈದ್ಯಕೀಯ ಪರಿಣಿತರು ತಿಳಿಸಿದ್ದಾರೆ. ಅರ್ತೆಮ್​ ಮಹಿಳೆಯೊಂದಿಗೆ ಸಲುಗೆ ಬೆಳೆಸಿ ಡೇಟಿಂಗ್​ ನಡೆಸಿ ತನ್ನ ಸ್ನೇಹಿತರೊಂದಿಗೆ ಸೇರಿ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಮಹಿಳೆಯ ಪಾಲಕರು ವಿಡಿಯೋದಲ್ಲಿ ಅರ್ತೆಮ್​ನನ್ನು ಪತ್ತೆಹಚ್ಚಿದ್ದಾರೆ. ಆತ ಸ್ನೇಹಿತರೊಂದಿಗೆ ಸೇರಿ ಮಹಿಳೆಗೆ ಥಳಿಸುತ್ತಿರುವ ದೃಶ್ಯವಿದೆ.

ವಿಡಿಯೋ ಕುರಿತು ಪೊಲೀಸರಿಗೂ ಮಾಹಿತಿ ನೀಡಿದ್ದು, ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣ ಕುರಿತು ತನಿಖೆಯು ಆರಂಭವಾಗಿದೆ. ಈ ದಾಳಿಯಿಂದ ಫ್ಲ್ಯಾಟ್​ಗೆ ಆಗಿರುವ ಹಾನಿಯನ್ನು ಅರ್ತೆಮ್​ ಭರಿಸಬೇಕೆಂದು ಮಹಿಳೆಯ ಪಾಲಕರು ಒತ್ತಾಯಿಸಿದ್ದಾರೆ. ಈ ಗ್ಯಾಂಗ್​ ಹಣ ಗಳಿಸಲು ಈ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮೇಲ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net