

ಬ್ಯಾಂಕಾಕ್: ಕೆಲವು ಕಳ್ಳರು ತಮ್ಮ ಮುಠ್ಠಾಳತನದಿಂದ ಹೇಗೆಲ್ಲ ಸಿಕ್ಕಿ ಬಿಳ್ಳುತ್ತಾರೆ ಎಂಬುದನ್ನು ನಾವು ಆಗಾಗ ನೋಡುತ್ತೇವೆ. ಇಂತಹದೇ ಒಂದು ಘಟನೆ ಥೈಲ್ಯಾಂಡ್ನಲ್ಲಿ ನಡೆದಿದೆ.
ತೈಲ್ಯಾಂಡ್ನ ಪೆಚ್ಚಾಬುನ್ ಎಂಬಲ್ಲಿ Athit Kin Khunthud ಎಂಬ 28 ವರ್ಷದ ಕಳ್ಳನೊಬ್ಬ ಮಧ್ಯರಾತ್ರಿ ಮನೆಯೊಂದಕ್ಕೆ ನುಗ್ಗಿ, ಕಳ್ಳತನ ಮಾಡಿ, ಆ ಮನೆಯಲ್ಲೇ ಹಾಯಾಗಿ ನಿದ್ದೆ ಮಾಡುವಾಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ಈ ಕಳ್ಳ ನುಗ್ಗಿದ್ದು ಹೋಗಿ ಹೋಗಿ ಪೊಲೀಸ್ ಅಧಿಕಾರಿ ಮನೆಗೆ! ಮಧ್ಯರಾತ್ರಿ 2 ಗಂಟೆಗೆ ಬಾಗಿಲು ಮುರಿದು ಒಳ ನುಗ್ಗಿದ್ದಾನೆ. ಹಣ ದೋಚಿ, ಇನ್ನೊಂದು ರೂಮ್ಗೆ ಹೋಗಿದ್ದಾನೆ. ಅದು ಆ ಪೊಲೀಸ್ ಅಧಿಕಾರಿ ಮಗಳು ತಂಗುವ ಕೊಠಡಿ. ಆ ವೇಳೆ ಆ ಕೊಠಡಿಯಲ್ಲಿ ಪೊಲೀಸ್ ಅಧಿಕಾರಿಯ ಮಗಳು ಇರಲಿಲ್ಲವಂತೆ. ಎಸಿ ಅಳವಡಿಸಿದ ರೂಮ್ನಲ್ಲಿ ಕದಿಯಲು ತಡಕಾಡಿದ್ದಾನೆ. ಆದರೆ ಅಲ್ಲಿ ಏನೂ ಸಿಕ್ಕಿಲ್ಲ. ಅಲ್ಲೇ ಬೆಡ್ ಮೇಲೆ ಹಾಯಾಗಿ ಮಲಗಿ ನಿದ್ರಿಸಿದ್ದಾನೆ.
ಬೆಳಿಗ್ಗೆ ಪೊಲೀಸ್ ಅಧಿಕಾರಿ ಬಾಗಿಲು ತೆಗೆಯಲು ಹೋದಾಗ ಕಳ್ಳ ಹಾಯಾಗಿ ಮಲಗಿರುವುದು ಗೊತ್ತಾಗಿದೆ. ಆ ಘಟನೆಯನ್ನು ಚಿತ್ರಿಕರಿಸಿಕೊಂಡ ಪೊಲೀಸ್ ಕಳ್ಳನನ್ನು ಎಬ್ಬಿಸಿದ್ದಾರೆ. ಆತ ಏನಾಗುತ್ತಿದೆ ಎಂದು ಕಣ್ಣು ಕಣ್ಣು ಬಿಟ್ಟು ನೋಡುವಾಗಲೇ ಇನ್ನಿತರ ಪೊಲೀಸ್ ಸಿಬ್ಬಂದಿ ಬಂದು ಆತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.