ಕ್ರಿಕೆಟ್​ ಕಿರಿಕ್​ಗೆ ಉರುಳಿತು ಜೀವಂತ ವಿಕೆಟ್​; ಕಾರ್​ ಡಿಕ್ಕಿ ಹೊಡೆಸಿ, ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ!

Wicket
Published on

ಮಂಡ್ಯ: ಕ್ರಿಕೆಟ್​ ವಿಚಾರವಾಗಿ ನಡೆದ ಕಿರಿಕ್​ಗೆ ಒಂದು ಜೀವಂತ ವಿಕೆಟ್​ ಉರುಳಿದೆ. ಅರ್ಥಾತ್, ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುವ ವಿಷಯವಾಗಿ ಗೆಳೆಯರ ಮಧ್ಯೆ ನಡೆದ ಘರ್ಷಣೆ ಒಬ್ಬನ ಭೀಕರ ಕೊಲೆಗೆ ಕಾರಣವಾಗಿದೆ. ಪರಿಣಾಮವಾಗಿ ಯುವಕನೊಬ್ಬ ಬರ್ಬರವಾಗಿ ಹತ್ಯೆಯಾಗಿದ್ದಾನೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲೆಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗೆಜ್ಜಲಗೆರೆ ಗ್ರಾಮದ ಹೇಮಂತ್ (25) ಕೊಲೆಯಾದ ಯುವಕ. ಈತ ಸೋಮವಾರ ರಾತ್ರಿ ಬೈಕ್​ನಲ್ಲಿ ಮನೆಗೆ ಮರಳುತ್ತಿದ್ದಾಗ, ಮಾರ್ಗಮಧ್ಯೆ ದಾಳಿ ನಡೆಸಿದ ದುಷ್ಕರ್ಮಿಗಳು ಮೊದಲಿಗೆ ಕಾರ್ ಡಿಕ್ಕಿ ಹೊಡೆಸಿದ್ದಾರೆ. ನಂತರ ಹೇಮಂತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಅಷ್ಟು ಸಾಲದು ಎಂದು ಬಳಿಕ ತಲೆ ಮೇಲೆ ಕಲ್ಲು ಕೂಡ ಎತ್ತಿ ಹಾಕಿದ್ದಾರೆ. ಇದರಿಂದ ಹೇಮಂತ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಈ ಕೊಲೆ ಹಿಂದೆ ಹಳೇ ವೈಷಮ್ಯವೂ ಇದೆ ಎನ್ನಲಾಗಿದ್ದು, ಮತ್ತೊಂದೆಡೆ ಕ್ರಿಕೆಟ್ ಟೂರ್ನಿ ಕುರಿತ ವಿವಾದವೂ ಕಾರಣ ಎನ್ನಲಾಗಿದೆ. ಕ್ರಿಕೆಟ್​ ಟೂರ್ನಿ ವಿವಾದ ವಿಕೋಪಕ್ಕೆ ತೆರಳಿ ಸ್ನೇಹಿತರಾದ ಇಂದ್ರಕುಮಾರ್ ಹಾಗೂ ಸ್ವರೂಪ್ ಕೊಲೆ ಮಾಡಿಸಿದ್ದಾರೆ ಎನ್ನಲಾಗಿದೆ. ಕೊಲೆ ಹಿನ್ನೆಲೆಯಲ್ಲಿ ಗೆಜ್ಜಲಗೆರೆಯಲ್ಲಿ ಆತಂಕದ ವಾತವಾರಣ ಉಂಟಾಗಿದ್ದು, ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net