

Marriage : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಜೀವನ ಸಂಗಾತಿಯನ್ನು ಹುಡುಕಲು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೊರೆ ಹೋಗುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಇಂದು ಆನ್‌ಲೈನ್ ಡೇಟಿಂಗ್ ಮತ್ತು ಮ್ಯಾಟ್ರಿಮೊನಿಯಲ್ ಉದ್ಯಮವು ವೇಗವಾಗಿ ಬೆಳೆಯುತ್ತಿದೆ. ಆದರೆ, ಕೆಲವರು ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದು, ವಂಚನೆಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ವಿಶೇಷವಾಗಿ ಚೀನಾದಲ್ಲಿ ಈ ಒಂದು ಸಮಸ್ಯೆ ಗಂಭೀರವಾಗಿದೆ.
ಮ್ಯಾಟ್ರಿಮೋನಿಯಲ್ ಸೇವೆಗಳ ಮೂಲಕ ಒಂಟಿ ಪುರುಷರನ್ನು ಗುರಿಯಾಗಿಸಿಕೊಂಡು ಅನೇಕ ವಂಚನೆಗಳು ಚೀನಾದಲ್ಲಿ ನಡೆಯುತ್ತಿವೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ದಕ್ಷಿಣ ಚೀನಾದ ಪೊಲೀಸರು ಮ್ಯಾಟ್ರಿಮೋನಿಯಲ್ ಕಂಪನಿಗಳ ವಿರುದ್ಧ ಕೇಳಿಬಂದಿರುವ ವಂಚನೆಯ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಕೆಲ ಮ್ಯಾಟ್ರಿಮೋನಿಯಲ್ ಕಂಪನಿಗಳು ಮಹಿಳೆಯರನ್ನು ನೇಮಿಸಿಕೊಂಡು ಬ್ಯಾಚುಲರ್ಗಳಿಗೆ ವಂಚನೆ ಮಾಡುತ್ತಿವೆ. ಇಲ್ಲಿ ಪುರುಷರನ್ನು ಮದುವೆಯಾಗುವುದು ಹಣಕ್ಕಾಗಿಯೇ ಹೊರತು ಲೈಂಗಿಕತೆಗಾಗಿ ಅಲ್ಲ. ನಿಜವಾಗಿಯೂ ಪ್ರೀತಿಸುತ್ತಿರುವಂತೆ ನಟಿಸಿ, ಮದುವೆಯಾಗುತ್ತಾರೆ. ಆನಂತರ ಹಣ ಪಡೆದು ಅರ್ಧದಲ್ಲೇ ಕೈಕೊಡುತ್ತಾರೆ. ಈ ರೀತಿಯಾಗಿ ಮಹಿಳೆಯರು ಅನೇಕ ಜನರನ್ನು ವಂಚಿಸಿ ಕೇವಲ 3 ತಿಂಗಳಲ್ಲಿ 3,00,000 ಯುವಾನ್ (ಸುಮಾರು 35 ಲಕ್ಷ ರೂ.) ವರೆಗೆ ಗಳಿಸಿದ್ದಾರೆಂದು ತಿಳಿದುಬಂದಿದೆ.
ಚೀನಾದ ಗುಯಾಂಗ್ ನಗರದ ಹುವಾಗುವಾನ್ ಪ್ರದೇಶದ ಪೊಲೀಸ್ ಠಾಣೆಗೆ ಕಳೆದ ವರ್ಷ ಮಾರ್ಚ್‌ನಿಂದ ಮದುವೆ ಹಗರಣಗಳಿಗೆ ಸಂಬಂಧಿಸಿದಂತೆ 180 ದೂರುಗಳು ಬಂದಿವೆ. ಈ ರೀತಿಯ ಮದುವೆಗಳನ್ನು 'ಫ್ಲ್ಯಾಶ್' ಮದುವೆಗಳು ಎಂದು ಕರೆಯಲಾಗುತ್ತದೆ. ಇಷ್ಟವಾದ ಮಹಿಳೆಯರನ್ನು ನೋಡುವ ವರ, ಆಕೆಯನ್ನು ಮದುವೆಯಾಗಲು ಏಜೆಂಟರಿಗೆ ಸಾಕಷ್ಟು ಹಣ ನೀಡಬೇಕಾಗುತ್ತದೆ. ಮದುವೆಯಾದ ಕೆಲವೇ ದಿನಗಳಲ್ಲಿ ವಧು ಕಣ್ಮರೆಯಾಗುತ್ತಾಳೆ. ಕೆಲವು ಕಾರಣಗಳಿಗಾಗಿ ಮನೆ ಬಿಟ್ಟು ಹೋಗುತ್ತಾರೆ. ಕೆಲವು ಸಂದರ್ಭಗಳಲ್ಲಿ ಉದ್ದೇಶಪೂರ್ವಕವಾಗಿ ವರನ ಜತೆ ಜಗಳವಾಡುತ್ತಾರೆ ಮತ್ತು ವಿಚ್ಛೇದನ ಪಡೆಯುತ್ತಾರೆ. ಇಂಥದ್ದೊಂದು ಹಗರಣ ಇದೀಗ ಬಯಲಿಗೆ ಬಂದಿದೆ.
ಈ ಹಗರಣದ ಜಾಲಕ್ಕೆ ಬಿದ್ದ ಅನೇಕ ಪುರುಷರು ಲಕ್ಷ ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಪ್ರತಿದಿನ ಏಜೆಂಟ್‌ಗಳು ಸುಮಾರು 40 ರಿಂದ 50 ವರಗಳನ್ನು ಬಹಳ ಸುಲಭವಾಗಿ ಹುಡುಕುತ್ತಿದ್ದಾರೆ. ಹಿಂದೆ-ಮುಂದೆ ಯೋಚಿಸಿದೇ ಅನೇಕರು ವಂಚನೆ ಜಾಲಕ್ಕೆ ಸುಲಭವಾಗಿ ಸಿಲುಕಿಕೊಳ್ಳುತ್ತಿದ್ದಾರೆ. ಕೆಲವು ಏಜೆಂಟ್ರನ್ನು ಬಲೆಗೆ ಬೀಳಿಸಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್)