ಈವರೆಗೂ ನೋಡಿರದ ವಿಚಿತ್ರ ಬ್ಯಾಟಿಂಗ್ ಇದು!​ ಪೊಲ್ಲಾರ್ಡ್ ಬ್ಯಾಟ್​ ಬೀಸಿದ ಶೈಲಿಗೆ ದಂಗಾದ್ರೂ ಫ್ಯಾನ್ಸ್​ | Kieron Pollard

Kieron Pollard
Published on

Kieron Pollard : ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳಲ್ಲಿ ಬ್ಯಾಟ್ಸ್​ಮನ್​ಗಳು ವಿಕೆಟ್ ಮುಂದೆ ನಿಂತು ಬ್ಯಾಟ್ ಬೀಸುತ್ತಾರೆ. ಆದರೆ, ವಿಕೆಟ್​ ಹಿಂದೆ ಹೋಗಿ ಬ್ಯಾಟಿಂಗ್​ ಮಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ? ನೋಡಿಲ್ಲ ಅಂದರೆ, ಇಲ್ಲಿದೆ ನೋಡಿ. ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಕೈರಾನ್​ ಪೊಲ್ಲಾರ್ಡ್ ವಿಕೆಟ್‌ಗಳ ಹಿಂದೆ ಹೋಗಿ ಹೆಚ್ಚು ಬ್ಯಾಟಿಂಗ್​ ಮಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ಅಬುಧಾಬಿ ಟಿ10 ಟೂರ್ನಿಯಲ್ಲಿ ನಡೆದಿದೆ. ಬುಧವಾರ (ನ.27) ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಯುಪಿ ನವಾಬ್ಸ್ ಮತ್ತು ನ್ಯೂಯಾರ್ಕ್ ಸ್ಟ್ರೈಕರ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕೈರನ್ ಪೊಲ್ಲಾರ್ಡ್ ನೇತೃತ್ವದ ನ್ಯೂಯಾರ್ಕ್ ಸ್ಟ್ರೈಕರ್ಸ್ ಮೊದಲು ಬ್ಯಾಟ್ ಮಾಡಿತು. ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತು. ಈ ಪಂದ್ಯದಲ್ಲಿ ಪೊಲ್ಲಾರ್ಡ್ ಬ್ಯಾಟಿಂಗ್​ನಲ್ಲಿ ಸಂಪೂರ್ಣ ವಿಫಲರಾದರು. ಅವರು 21 ಎಸೆತಗಳಲ್ಲಿ 12 ರನ್ ಗಳಿಸಿ ಅಜೇಯರಾಗಿ ಉಳಿದರು.

ಈ ಪಂದ್ಯದಲ್ಲಿ ಪೊಲ್ಲಾರ್ಡ್ ಬ್ಯಾಟಿಂಗ್​ನಲ್ಲಿ ತೀವ್ರ ಸಂಕಷ್ಟ ಎದುರಿಸಿದರು. ಚೆಂಡನ್ನು ಬ್ಯಾಟ್‌ನಿಂದ ಸ್ಪರ್ಶಿಸಲೂ ತಡಕಾಡಿದರು. ಅವರಿಂದ ಒಂದೇ ಒಂದು ಬೌಂಡರಿ ಬಾರಿಸಲೂ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಪೊಲ್ಲಾರ್ಡ್​ ವಿಚಿತ್ರವಾಗಿ ಬ್ಯಾಟಿಂಗ್​ ಮಾಡಿದರು. ಬೌಲರ್ ಬೌಲಿಂಗ್ ಮಾಡುವ ಮುಂಚೆಯೇ ವಿಕೆಟ್ ಹಿಂದೆ ಹೋದರು. ಆದರೆ, ಬೌಲರ್ ಕೂಡ ಜಾಣ್ಮೆಯಿಂದ ಚೆಂಡನ್ನು ಆಪ್ ಸೈಡ್​ನಲ್ಲಿ ವೈಡ್ ಬೌಲ್ ಮಾಡಿದರು. ಪೊಲಾರ್ಡ್ ಆ ಚೆಂಡನ್ನು ಬೌಂಡರಿಗೆ ಬಾರಿಸಲು ಯತ್ನಿಸಿದರು. ಆದರೆ, ವಿಫಲರಾದರು.

ಪೊಲ್ಲಾರ್ಡ್ ಅವರ ವಿಚಿತ್ರ ಬ್ಯಾಟಿಂಗ್​ ಶೈಲಿಯ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸರಿಯಾಗಿ ವಿಕೆಟ್ ಮುಂದೆ ಬ್ಯಾಟ್ ಮಾಡಿದ್ದರೆ ಖಂಡಿತ ಚೆಂಡು ಬೌಂಡರಿಗೆ ಹೋಗುತ್ತಿತ್ತು ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

ಅಂದಹಾಗೆ ಈ ಪಂದ್ಯದಲ್ಲಿ ಪೊಲ್ಲಾರ್ಡ್​ ತಂಡ ಸೋಲುಂಡಿತು. 75 ರನ್‌ಗಳ ಗುರಿ ಬೆನ್ನತ್ತಿದ ಯುಪಿ ನವಾಬ್ಸ್ 6.1 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಭಾಜ್ (21 ಎಸೆತಗಳಲ್ಲಿ 31 ರನ್) ಮತ್ತು ಆಂಡ್ರೆ ಫ್ಲೆಚರ್ (6 ಎಸೆತಗಳಲ್ಲಿ 18 ರನ್) ಗಳಿಸಿ ಮಿಂಚಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net