ಮತ್ತೆ ಒಂದಾಗಲಿದ್ದಾರೆ ರೆಹಮಾನ್​-ಸಾಯಿರಾ!? ವೈರಲ್​ ಆಯ್ತು ವಕೀಲೆ ವಂದನಾ ಶಾ ಹೇಳಿದ ಮಾತು! A R Rahman

A R Rahman
Published on

A R Rahman : ಸುದೀರ್ಘ 29 ವರ್ಷಗಳ ವೈವಾಹಿಕ ಜೀವನ ನಡೆಸಿ, 30ನೇ ವರ್ಷಕ್ಕೆ ಕಾಲಿಡುವ ಮುನ್ನವೇ ಸಂಗೀತ ಮಾಂತ್ರಿಕ ಎ.ಆರ್​. ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ನ.19ರಂದು ಡಿವೋರ್ಸ್​ ಘೋಷಣೆ ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ವಿಚಾರ ಸಿನಿ ಅಂಗಳದಲ್ಲಿ ಮಾತ್ರವಲ್ಲ ಎಲ್ಲೆಡೆ ಭಾರಿ ಚರ್ಚೆಯಾಯಿತು. ಇಬ್ಬರು ದಿಢೀರನೇ ದೂರವಾಗಿದ್ದು, ಅಭಿಮಾನಿಗಳಿಗೆ ಶಾಕ್​ ಆಗಿದೆ. ಆದರೆ, ಇದೀಗ ಖುಷಿಯ ಸಂಗತಿ ಒಂದು ತಿಳಿದುಬಂದಿದೆ.

ತಾಜಾ ಸಂಗತಿ ಏನೆಂದರೆ, ರೆಹಮಾನ್​ ಮತ್ತು ಸಾಯಿರಾ ಮತ್ತೆ ಒಂದಾಗಲಿದ್ದಾರಂತೆ. ಇಬ್ಬರ ನಡುವೆ ಸಂಧಾನ ನಡೆಯುವ ಸಾಧ್ಯತೆ ಇದೆ ಎಂಬ ವರದಿಗಳು ಬಂದಿವೆ. ಸಾಯಿರಾ ಪರ ವಕೀಲೆ ವಂದನಾ ಶಾ ಅವರು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಇಬ್ಬರ ನಡುವೆ ರಾಜಿಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇಬ್ಬರ ನಡುವೆ ರಾಜಿ ಸಾಧ್ಯವಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ನಾನು ಯಾವುದೇ ವಿಚಾರವನ್ನು ಆಶಾವಾದದಿಂದ ನೋಡುತ್ತೇನೆ. ಇಬ್ಬರ ಜಂಟಿ ಹೇಳಿಕೆಯ ಪ್ರಕಾರ ಸಾಕಷ್ಟು ಚಿಂತನೆ ನಡೆಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ, ಈಗಲೂ ಇಬ್ಬರು ಒಂದಾಗಲು ಸಾಧ್ಯವಿಲ್ಲ ಎಂದು ನಾನು ಹೇಳುತ್ತಿಲ್ಲ. ಇಬ್ಬರು ಮತ್ತೆ ಒಂದಾಗುವ ಸಾಧ್ಯತೆಯು ಇದೆ ಎಂದು ವಂದನಾ ಸುಳಿವು ನೀಡಿದರು.

ಇದೇ ಸಂದರ್ಭದಲ್ಲಿ ಜೀವನಾಂಶ ಕುರಿತಾದ ಪ್ರಶ್ನೆಗಳಿಗೂ ವಂದನಾ ಶಾ ಸ್ಪಷ್ಟವಾಗಿ ಪ್ರತಿಕ್ರಿಯಿಸಲಿಲ್ಲ. ಸಾಯಿರಾಗೆ ಯಾವುದೇ ಹಣಕಾಸಿನ ಗುರಿಗಳಿಲ್ಲ ಎಂದರು. ಅಲ್ಲದೆ, ಮಕ್ಕಳ ರಕ್ಷಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಕೆಲವು ಮಕ್ಕಳು ವಯಸ್ಕರಾಗಿದ್ದು, ಯಾರೊಂದಿಗೆ ಇರಬೇಕೆಂದು ಅವರೇ ನಿರ್ಧರಿಸಬಹುದು ಎಂದು ಹೇಳಿದರು. ರೆಹಮಾನ್-ಸಾಯಿರಾ ದಂಪತಿಗೆ ಖದೀಜಾ, ರಹೀಮಾ ಮತ್ತು ಅಮೀನ್ ಹೆಸರಿನ ಮೂವರು ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ಖದೀಜಾಳ ವಿವಾಹವಾಗಿದೆ.

ಅಂದಹಾಗೆ ನ.19ರಂದು ಸಾಯಿರಾ ಪರ ವಕೀಲರಾದ ವಂದನಾ ಶಾ, ದಂಪತಿಯ ಡಿವೋರ್ಸ್​ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಮದುವೆಯಾಗಿ ಹಲವು ವರ್ಷಗಳ ನಂತರ ಸಾಯಿರಾ ಅವರು ಎ.ಆರ್. ರೆಹಮಾನ್‌ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಬ್ಬರ ಸಂಬಂಧದಲ್ಲಿ ಗಮನಾರ್ಹ ಭಾವನಾತ್ಮಕ ಒತ್ತಡದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಬ್ಬರ ನಡುವಿನ ಆಳವಾದ ಪ್ರೀತಿಯ ಹೊರತಾಗಿಯೂ, ದಂಪತಿಗೆ ಎದುರಾಗಿರುವ ತೊಂದರೆಗಳು ಅವರ ನಡುವೆ ಅಂತರ ಸೃಷ್ಟಿಸಿವೆ. ಸಾಯಿರಾ ಅವರು ತುಂಬಾ ನೋವು ಮತ್ತು ಸಂಕಟದಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಜೀವನದ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿರುವಾಗ ಸಾರ್ವಜನಿಕರು ಖಾಸಗಿತನವನ್ನು ಗೌರವಿಸಬೇಕೆಂದು ಸಾಯಿರಾ ಬಯಸಿರುವುದಾಗಿ ವದಂನಾ ಶಾ ತಿಳಿಸಿದರು.

ರೆಹಮಾನ್​ ಹೇಳಿದ್ದೇನು?

ರೆಹಮಾನ್ ಕೂಡ ಡಿವೋರ್ಸ್​ ಅನ್ನು ಖಚಿತಪಡಿಸಿದ್ದಾರೆ. ನಾವು 30 ವರ್ಷ ವೈವಾಹಿಕ ಜೀವನ ಪೂರೈಸಲು ಆಶಿಸಿದ್ದೆವು. ಆದರೆ, ಎಲ್ಲವೂ ಕಾಣದ ಅಂತ್ಯವನ್ನು ಹೊಂದಿದೆ ಎಂದು ತೋರುತ್ತದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಈ ಬೇರ್ಪಡಿಕೆಯಲ್ಲಿ ನಾವು ಅರ್ಥವನ್ನು ಹುಡುಕಿದರೂ ಮುರಿದ ತುಣುಕುಗಳು ಮತ್ತೆ ತಮ್ಮ ಸ್ಥಾನವನ್ನು ಕಂಡುಕೊಳ್ಳುವುದಿಲ್ಲ. ಈ ದುರ್ಬಲವಾದ ಅಧ್ಯಾಯದ ಮೂಲಕ ನಾವು ನಡೆಯುತ್ತಿರುವಾಗ ನಿಮ್ಮ ದಯೆ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ರೆಹಮಾನ್​ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಅಂದಹಾಗೆ ರೆಹಮಾನ್ ಮತ್ತು ಸಾಯಿರಾ 1995ರಲ್ಲಿ ವಿವಾಹವಾದರು. ಇದೀಗ 29 ವರ್ಷಗಳ ವೈವಾಹಿಕ ಬದುಕಿಗೆ ಕೊನೆಯಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ, ರೆಹಮಾನ್ ಕೊನೆಯದಾಗಿ ಧನುಷ್ ಅವರ ಎರಡನೇ ನಿರ್ದೇಶನದ ರಾಯನ್​ಗೆ ಸಂಗೀತ ಸಂಯೋಜಿಸಿದರು. ಚಾವಾ ಹಾಗೂ ಥಗ್ ಲೈಫ್ ಸೇರಿದಂತೆ ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧವಾಗಿರುವ ಗಾಂಧಿ ಟಾಕ್ಸ್ ಹಾಗೂ ಹಲವು ಭಾಷೆಯ ಹಲವು ಚಿತ್ರಗಳಿಗೂ ಸಂಗೀತ ನೀಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net