ಮದ್ವೆಗೂ ಮುನ್ನವೇ ಆಗಿತ್ತು ಈ ಒಪ್ಪಂದ! ರೆಹಮಾನ್-ಸಾಯಿರಾ ಡಿವೋರ್ಸ್​ ಬೆನ್ನಲ್ಲೇ ಅಚ್ಚರಿ ಸಂಗತಿ ಬಹಿರಂಗ | A R Rahman

A R Rahman
Published on

A R Rahman : ಸುದೀರ್ಘ 29 ವರ್ಷಗಳ ವೈವಾಹಿಕ ಜೀವನ ನಡೆಸಿ, 30ನೇ ವರ್ಷಕ್ಕೆ ಕಾಲಿಡುವ ಮುನ್ನವೇ ಸಂಗೀತ ಮಾಂತ್ರಿಕ ಎ.ಆರ್​. ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ನ.19ರಂದು ಡಿವೋರ್ಸ್​ ಘೋಷಣೆ ಮಾಡಿರುವುದು ಸಿನಿ ಅಂಗಳದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇಬ್ಬರು ದಿಢೀರನೇ ದೂರವಾಗಿದ್ದು, ಅಭಿಮಾನಿಗಳಿಗೆ ಶಾಕ್​ ಆಗಿದೆ. ಕಳೆದ ಕೆಲವು ದಿನಗಳಿಂದ ಈ ವಿಚಾರ ಚರ್ಚೆಯಾಗುತ್ತಿದ್ದು, ರೆಹಮಾನ್​ ಕುರಿತು ಸಾಕಷ್ಟು ಮಾಹಿತಿಗಳು ಬೆಳಕಿಗೆ ಬರುತ್ತಿವೆ.

ಬಾಲಿವುಡ್​ ನಟಿ ಹಾಗೂ ನಿರ್ದೇಶಕಿ ಸಿಮಿ ಗರೆವಾಲ್ ಅವರಿಗೆ ಈ ಹಿಂದೆ ಎ.ಆರ್. ರೆಹಮಾನ್ ಸಂದರ್ಶನ ನೀಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ವೇಳೆ ಪತ್ನಿ ಸಾಯಿರಾ ಬಗ್ಗೆ ರೆಹಮಾನ್​ ಆಡಿದ್ದ ಮಾತುಗಳು ಅಭಿಮಾನಿಗಳ ಗಮನ ಸೆಳೆದಿದೆ.

ತುಂಬಾ ಬಿಜಿ ಸಂಗೀತಗಾರರಾಗಿದ್ದ ರೆಹಮಾನ್ ಅವರಿಗೆ ತಮ್ಮ ಜೀವನ ಸಂಗಾತಿಯನ್ನು ಹುಡುಕಲೂ ಸಮಯವಿರಲಿಲ್ಲ. ಹಾಗಾಗಿ ತನಗೆ ಸೂಕ್ತ ವಧುವನ್ನು ಹುಡುಕುವಂತೆ ತಾಯಿಯನ್ನು ಕೇಳಿಕೊಂಡಿದ್ದರಂತೆ. ತನ್ನ ಸಂಗೀತ ವೃತ್ತಿಯನ್ನು ಬೆಂಬಲಿಸುವ ವಿದ್ಯಾವಂತ, ಸುಂದರ ಮತ್ತು ವಿನಮ್ರ ಹುಡುಗಿಯನ್ನು ಹುಡುಕುವಂತೆ ತಾಯಿಗೆ ಹೇಳಿದ್ದರಂತೆ. ಸಾಯಿರಾ ಅವರು ನೀವು ಅಂದುಕೊಂಡತೆ ಇದ್ದರಾ ಎಂದು ರೆಹಮಾನ್​ ಅವರನ್ನು ಪ್ರಶ್ನೆ ಮಾಡಿದಾಗ, ತಮ್ಮ ಪತ್ನಿಯ ವ್ಯಕ್ತಿತ್ವದ ಎರಡು ಅಂಶಗಳ ಬಗ್ಗೆ ರೆಹಮಾನ್​ ಮಾತನಾಡಿದರು.

ಸಾಯಿರಾ ಶಾಂತವಾಗಿದ್ದಾಗ ತುಂಬಾ ಶಾಂತಿಯುತವಾಗಿಯೇ ವರ್ತಿಸುತ್ತಾರೆ. ಆದರೆ, ಸಿಟ್ಟು ಬಂದರೆ ಎಲ್ಲಕ್ಕೂ ಸಿಟ್ಟು ಬರುತ್ತದೆ ಎಂದರು. ಮದುವೆಯಾದ ಆರಂಭದ ದಿನಗಳಲ್ಲಿ ತನಗೆ ಬೇಕನಿಸಿದ್ದನ್ನು ಮಾಡಲಾಗದೆ ಸಾಯಿರಾ ತುಂಬಾ ನಿರಾಸೆಗೊಂಡಿದ್ದರು. ಪತಿಯ ಸೆಲೆಬ್ರಿಟಿ ಸ್ಟೇಟಸ್​ನಿಂದಾಗಿ ತನಗೆ ಅನಿಸಿದಾಗಲೆಲ್ಲ ಶಾಪಿಂಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಮದುವೆಯ ಬಳಿಕ ಇಂತಹ ಕಷ್ಟಗಳು ಎದುರಾಗುತ್ತವೆ ಎಂದು ಮೊದಲೇ ಹೇಳಿದ್ದೆ ಎಂದು ಎಆರ್ ರೆಹಮಾನ್ ಹೇಳಿದ್ದಾರೆ. ಮದುವೆಗೂ ಮುನ್ನ ಹೇಳಿದ್ದ ಈ ಒಪ್ಪಂದಕ್ಕೆ ಸಾಯಿರಾ ಒಪ್ಪಿಗೆ ಸೂಚಿಸಿದ್ದರು ಎಂದು ರೆಹಮಾನ್​ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ಮದುವೆಯ ನಂತರ ಮನೆಗೆ ಬರುವ ಹೊಸ ವ್ಯಕ್ತಿಗೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟ ಎಂದು ರಹಮಾನಿಯಾಕ್ ಡಾಟ್ ಕಾಮ್​ಗೆ ನೀಡಿದ ಸಂದರ್ಶನದಲ್ಲಿ ರೆಹಮಾನ್​ ಹೇಳಿದ್ದರು. ತಮ್ಮದು ಅವಿಭಕ್ತ ಕುಟುಂಬವಾದ್ದರಿಂದ ಮೊದಲಿಗೆ ಒಂದಿಷ್ಟು ತೊಂದರೆಗಳಿದ್ದರೂ ಮೊದಲ ಮಗುವಿನ ಜನನದ ನಂತರ ಎಲ್ಲವೂ ಯಥಾಸ್ಥಿತಿಗೆ ಬಂದಿತು ಎಂದು ರೆಹಮಾನ್ ಸಂದರ್ಶನದಲ್ಲಿ ಹೇಳಿದ್ದರು.

ಅಂದಹಾಗೆ ನ.19ರಂದು ಸಾಯಿರಾ ಪರ ವಕೀಲರಾದ ವಂದನಾ ಶಾ, ದಂಪತಿಯ ಡಿವೋರ್ಸ್​ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಮದುವೆಯಾಗಿ ಹಲವು ವರ್ಷಗಳ ನಂತರ ಸಾಯಿರಾ ಅವರು ಎ.ಆರ್. ರೆಹಮಾನ್‌ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಬ್ಬರ ಸಂಬಂಧದಲ್ಲಿ ಗಮನಾರ್ಹ ಭಾವನಾತ್ಮಕ ಒತ್ತಡದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಬ್ಬರ ನಡುವಿನ ಆಳವಾದ ಪ್ರೀತಿಯ ಹೊರತಾಗಿಯೂ, ದಂಪತಿಗೆ ಎದುರಾಗಿರುವ ತೊಂದರೆಗಳು ಅವರ ನಡುವೆ ಅಂತರ ಸೃಷ್ಟಿಸಿವೆ. ಸಾಯಿರಾ ಅವರು ತುಂಬಾ ನೋವು ಮತ್ತು ಸಂಕಟದಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಜೀವನದ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿರುವಾಗ ಸಾರ್ವಜನಿಕರು ಖಾಸಗಿತನವನ್ನು ಗೌರವಿಸಬೇಕೆಂದು ಸಾಯಿರಾ ಬಯಸಿರುವುದಾಗಿ ವದಂನಾ ಶಾ ತಿಳಿಸಿದರು.

ರೆಹಮಾನ್​ ಹೇಳಿದ್ದೇನು?

ರೆಹಮಾನ್ ಕೂಡ ಡಿವೋರ್ಸ್​ ಅನ್ನು ಖಚಿತಪಡಿಸಿದ್ದಾರೆ. ನಾವು 30 ವರ್ಷ ವೈವಾಹಿಕ ಜೀವನ ಪೂರೈಸಲು ಆಶಿಸಿದ್ದೆವು. ಆದರೆ, ಎಲ್ಲವೂ ಕಾಣದ ಅಂತ್ಯವನ್ನು ಹೊಂದಿದೆ ಎಂದು ತೋರುತ್ತದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಈ ಬೇರ್ಪಡಿಕೆಯಲ್ಲಿ ನಾವು ಅರ್ಥವನ್ನು ಹುಡುಕಿದರೂ ಮುರಿದ ತುಣುಕುಗಳು ಮತ್ತೆ ತಮ್ಮ ಸ್ಥಾನವನ್ನು ಕಂಡುಕೊಳ್ಳುವುದಿಲ್ಲ. ಈ ದುರ್ಬಲವಾದ ಅಧ್ಯಾಯದ ಮೂಲಕ ನಾವು ನಡೆಯುತ್ತಿರುವಾಗ ನಿಮ್ಮ ದಯೆ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ರೆಹಮಾನ್​ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಅಂದಹಾಗೆ ರೆಹಮಾನ್ ಮತ್ತು ಸಾಯಿರಾ 1995ರಲ್ಲಿ ವಿವಾಹವಾದರು. ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಹೆಸರಿನ ಮೂವರು ಮಕ್ಕಳಿದ್ದಾರೆ. ಇದೀಗ 29 ವರ್ಷಗಳ ವೈವಾಹಿಕ ಬದುಕಿಗೆ ಕೊನೆಯಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ, ರೆಹಮಾನ್ ಕೊನೆಯದಾಗಿ ಧನುಷ್ ಅವರ ಎರಡನೇ ನಿರ್ದೇಶನದ ರಾಯನ್​ಗೆ ಸಂಗೀತ ಸಂಯೋಜಿಸಿದರು. ಚಾವಾ ಹಾಗೂ ಥಗ್ ಲೈಫ್ ಸೇರಿದಂತೆ ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧವಾಗಿರುವ ಗಾಂಧಿ ಟಾಕ್ಸ್ ಹಾಗೂ ಹಲವು ಭಾಷೆಯ ಹಲವು ಚಿತ್ರಗಳಿಗೂ ಸಂಗೀತ ನೀಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net