ಎ.ಆರ್​. ರೆಹಮಾನ್​ ನನಗೆ... ಮದ್ವೆ ವದಂತಿಯ ನಡುವೆ ಕೊನೆಗೂ ಮೌನ ಮುರಿದ ಮೋಹಿನಿ ಡೇ! A R Rahman

A R Rahman
Published on

A R Rahman : ಸುದೀರ್ಘ 29 ವರ್ಷಗಳ ವೈವಾಹಿಕ ಜೀವನ ನಡೆಸಿ, 30ನೇ ವರ್ಷಕ್ಕೆ ಕಾಲಿಡುವ ಮುನ್ನವೇ ಸಂಗೀತ ಮಾಂತ್ರಿಕ ಎ.ಆರ್​. ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ನ.19ರಂದು ಡಿವೋರ್ಸ್​ ಘೋಷಣೆ ಮಾಡಿರುವುದು ಸಿನಿ ಅಂಗಳದಲ್ಲಿ ಭಾರಿ ಸಂಚಲನ ಮೂಡಿಸಿದೆ. ಅಲ್ಲದೆ, ಅದೇ ದಿನ ರೆಹಮಾನ್ ತಂಡದ ಬ್ಯಾಂಡ್ ಸದಸ್ಯೆ ಮೋಹಿನಿ ಡೇ ಕೂಡ ತಮ್ಮ ಪತಿಗೆ ವಿಚ್ಛೇದನ ನೀಡಿದರು. ಹೀಗಾಗಿ ಇಬ್ಬರ ನಡುವೆ ಏನೋ ಇದೆ? ಇಬ್ಬರು ಮದುವೆಯಾಗಲಿದ್ದಾರೆ ಎಂಬ ವದಂತಿಯು ಕೂಡ ಹುಟ್ಟಿಕೊಂಡಿತು. ಇದೀಗ ಆ ವದಂತಿಗೆ ಮೋಹಿನಿ ಸ್ಪಷ್ಟನೆ ನೀಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಮೋಹಿನಿ ಡೇ, ನನ್ನ ಮತ್ತು ಎ.ಆರ್. ರೆಹಮಾನ್ ವಿರುದ್ಧ ಕೇಳಿಬರುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು. ಇದೆಲ್ಲವೂ ಆಧಾರರಹಿತ ಸುದ್ದಿಗಳಾಗಿವೆ. ಮಾಧ್ಯಮಗಳು ಎರಡೂ ಘಟನೆಗಳನ್ನು ಅಶ್ಲೀಲಗೊಳಿಸಿರುವುದು ನನಗೆ ಅಪರಾಧವೆನಿಸುತ್ತದೆ. ನಾನು ಬಾಲ್ಯದಿಂದ ರೆಹಮಾನ್​ ಅವರೊಂದಿಗೆ ಸಿನಿಮಾಗಳು ಹಾಗೂ ಪ್ರವಾಸಗಳು ಸೇರಿದಂತೆ 8.5 ವರ್ಷಗಳ ಕಾಲ ಕೆಲಸ ಮಾಡಿದ ಸಮಯವನ್ನು ಗೌರವಿಸುತ್ತೇನೆ ಎಂದಿದ್ದಾರೆ.

ಈ ರೀತಿಯ ಭಾವನಾತ್ಮಕ ವಿಷಯಗಳ ಬಗ್ಗೆ ಜನರಿಗೆ ಗೌರವ ಹಾಗೂ ಸಹಾನುಭೂತಿ ಇಲ್ಲ ಎಂದು ನೋಡುವುದು ನಿರಾಶಾದಾಯಕವಾಗಿದೆ. ಜನರ ಮನಸ್ಥಿತಿಯನ್ನು ನೋಡಿ ಬೇಸರವಾಗುತ್ತಿದೆ. ರೆಹಮಾನ್​ ಓರ್ವ ಲೆಜೆಂಡ್​ ಮತ್ತು ಅವರು ನನಗೆ ತಂದೆ ಸಮಾನ ಎಂದಿರುವ ಮೋಹಿನಿ, ನನ್ನ ಜೀವನದಲ್ಲಿ ಅನೇಕ ರೋಲ್ ಮಾಡೆಲ್‌ಗಳು ಮತ್ತು ತಂದೆಯ ಸಮಾನರಾದ ವ್ಯಕ್ತಿಗಳು ನನ್ನ ವೃತ್ತಿಜೀವನ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಲ್ಲಿ ನನಗೆ ಸಂಗೀತ ಕಲಿಸಿದ ನನ್ನ ತಂದೆ ಮತ್ತು ನಂತರ ನನಗೆ ಸಂಗೀತವನ್ನು ಪರಿಚಯಿಸಿದ ರಂಜಿತ್ ಬಾರೋಟ್, ನನ್ನನ್ನು ರೂಪಿಸಿದ ಲೂಯಿಸ್ ಬ್ಯಾಂಕ್ ಹಾಗೂ ನನಗೆ ಶೋಗಳಲ್ಲಿ ಮಿಂಚಲು ಸ್ವಾತಂತ್ರ್ಯ ನೀಡಿದ ಎ.ಆರ್. ರೆಹಮಾನ್ ಅವರನ್ನು ಗೌರವಿಸುತ್ತೇನೆ ಎಂದು ಮೋಹಿನಿ ಹೇಳಿದ್ದಾರೆ.

ಜನರ ಮನಸ್ಸಿನ ಮೇಲೆ ಮತ್ತು ಜೀವನದ ಮೇಲೆ ಬೀರುವ ಪ್ರಭಾವವನ್ನು ಮಾಧ್ಯಮಗಳು ಅರ್ಥಮಾಡಿಕೊಳ್ಳುವುದಿಲ್ಲ. ಇಲ್ಲಿ ನಾನು ಯಾರಿಗೂ ವಿವರಣೆಯನ್ನು ನೀಡಬೇಕಾಗಿಲ್ಲ ಮತ್ತು ನನ್ನ ದಿನವನ್ನು ಹಾಳುಮಾಡಲು ಬಯಸುವುದಿಲ್ಲ. ದಯವಿಟ್ಟು ಸುಳ್ಳು ಸುದ್ದಿಗಳನ್ನು ಮಾಡುವುದನ್ನು ನಿಲ್ಲಿಸಿ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿ ಎನ್ನುವ ಮೂಲಕ ವದಂತಿಗೆ ಮೋಹಿನಿ ತೆರೆಎಳೆದಿದ್ದಾರೆ.

ಮೋಹಿನಿ ಮತ್ತು ಮಾರ್ಕ್ ತಮ್ಮ ಜಂಟಿ ಪೋಸ್ಟ್‌ನಲ್ಲಿ ಭಾರವಾದ ಹೃದಯದಿಂದ ಮಾರ್ಕ್ ಮತ್ತು ನಾನು ನಾವು ಬೇರ್ಪಟ್ಟಿದ್ದೇವೆ ಎಂದು ಘೋಷಿಸುತ್ತೇವೆ. ಮೊದಲನೆಯದಾಗಿ ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಬದ್ಧರಾಗಿ, ನಾವು ಪರಸ್ಪರ ಒಪ್ಪಿಗೆಯೊಂದಿಗೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ನ.19ರಂದು ವಿಚ್ಛೇದನ ಘೋಷಿಸಿದರು.

ಇದಕ್ಕೂ ಮೊದಲು ಸಾಯಿರಾ ಪರ ವಕೀಲರಾದ ವಂದನಾ ಶಾ, ದಂಪತಿಯ ಡಿವೋರ್ಸ್​ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಮದುವೆಯಾಗಿ ಹಲವು ವರ್ಷಗಳ ನಂತರ ಸಾಯಿರಾ ಅವರು ಎ.ಆರ್. ರೆಹಮಾನ್‌ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಬ್ಬರ ಸಂಬಂಧದಲ್ಲಿ ಗಮನಾರ್ಹ ಭಾವನಾತ್ಮಕ ಒತ್ತಡದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಬ್ಬರ ನಡುವಿನ ಆಳವಾದ ಪ್ರೀತಿಯ ಹೊರತಾಗಿಯೂ, ದಂಪತಿಗೆ ಎದುರಾಗಿರುವ ತೊಂದರೆಗಳು ಅವರ ನಡುವೆ ಅಂತರ ಸೃಷ್ಟಿಸಿವೆ. ಸಾಯಿರಾ ಅವರು ತುಂಬಾ ನೋವು ಮತ್ತು ಸಂಕಟದಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಜೀವನದ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿರುವಾಗ ಸಾರ್ವಜನಿಕರು ಖಾಸಗಿತನವನ್ನು ಗೌರವಿಸಬೇಕೆಂದು ಸಾಯಿರಾ ಬಯಸಿರುವುದಾಗಿ ವದಂನಾ ಶಾ ತಿಳಿಸಿದರು.

ರೆಹಮಾನ್​ ಹೇಳಿದ್ದೇನು?

ರೆಹಮಾನ್ ಕೂಡ ಡಿವೋರ್ಸ್​ ಅನ್ನು ಖಚಿತಪಡಿಸಿದ್ದಾರೆ. ನಾವು 30 ವರ್ಷ ವೈವಾಹಿಕ ಜೀವನ ಪೂರೈಸಲು ಆಶಿಸಿದ್ದೆವು. ಆದರೆ, ಎಲ್ಲವೂ ಕಾಣದ ಅಂತ್ಯವನ್ನು ಹೊಂದಿದೆ ಎಂದು ತೋರುತ್ತದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಈ ಬೇರ್ಪಡಿಕೆಯಲ್ಲಿ ನಾವು ಅರ್ಥವನ್ನು ಹುಡುಕಿದರೂ ಮುರಿದ ತುಣುಕುಗಳು ಮತ್ತೆ ತಮ್ಮ ಸ್ಥಾನವನ್ನು ಕಂಡುಕೊಳ್ಳುವುದಿಲ್ಲ. ಈ ದುರ್ಬಲವಾದ ಅಧ್ಯಾಯದ ಮೂಲಕ ನಾವು ನಡೆಯುತ್ತಿರುವಾಗ ನಿಮ್ಮ ದಯೆ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ರೆಹಮಾನ್​ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಅಂದಹಾಗೆ ರೆಹಮಾನ್ ಮತ್ತು ಸಾಯಿರಾ 1995ರಲ್ಲಿ ವಿವಾಹವಾದರು. ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಹೆಸರಿನ ಮೂವರು ಮಕ್ಕಳಿದ್ದಾರೆ. ಇದೀಗ 29 ವರ್ಷಗಳ ವೈವಾಹಿಕ ಬದುಕಿಗೆ ಕೊನೆಯಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ, ರೆಹಮಾನ್ ಕೊನೆಯದಾಗಿ ಧನುಷ್ ಅವರ ಎರಡನೇ ನಿರ್ದೇಶನದ ರಾಯನ್​ಗೆ ಸಂಗೀತ ಸಂಯೋಜಿಸಿದರು. ಚಾವಾ ಹಾಗೂ ಥಗ್ ಲೈಫ್ ಸೇರಿದಂತೆ ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧವಾಗಿರುವ ಗಾಂಧಿ ಟಾಕ್ಸ್ ಹಾಗೂ ಹಲವು ಭಾಷೆಯ ಹಲವು ಚಿತ್ರಗಳಿಗೂ ಸಂಗೀತ ನೀಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net