

A R Rahman : ಸುದೀರ್ಘ 29 ವರ್ಷಗಳ ವೈವಾಹಿಕ ಜೀವನ ನಡೆಸಿ, 30ನೇ ವರ್ಷಕ್ಕೆ ಕಾಲಿಡುವ ಮುನ್ನವೇ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ನ.19ರಂದು ಡಿವೋರ್ಸ್ ಘೋಷಣೆ ಮಾಡಿರುವುದು ಸಿನಿ ಅಂಗಳದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇಬ್ಬರು ದಿಢೀರನೇ ದೂರವಾಗಿದ್ದು, ಅಭಿಮಾನಿಗಳಿಗೆ ಶಾಕ್ ಆಗಿದೆ. ಕಳೆದ ಮೂರು ದಿನಗಳಿಂದ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದ್ದು, ರೆಹಮಾನ್ ಕುರಿತು ಸಾಕಷ್ಟು ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಇದರ ನಡುವೆ ಸಾಯಿರಾ ಬಾನು ಪರ ವಕೀಲ ವಂದನಾ ಶಾ ಅವರು ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಿದ್ದು, ಜೀವನಾಂಶ ಸೇರಿದಂತೆ ಹಲವು ಮಾಹಿತಿ ಬಹಿರಂಗವಾಗಿದೆ.
ವಿವಿಧ ಭಾಷೆಗಳಲ್ಲಿ ಸಂಗೀತ ನಿರ್ದೇಶನ ಮಾಡಿರುವ ಎ.ಆರ್.ರೆಹಮಾನ್, ಚಿತ್ರರಂಗದ ಶ್ರೀಮಂತರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತರೂ ಆಗಿರುವ ರೆಹಮಾನ್, ಸುಮಾರು 1,728 ರಿಂದ 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ. ಪತ್ನಿ ಸಾಯಿರಾ ಜೀವನಾಂಶ ಕೇಳಿದರೆ ಅದರಲ್ಲಿ ಅರ್ಧದಷ್ಟು ಕೊಡಬೇಕಾಗುತ್ತದೆ. ಆದರೆ, ಇನ್ನೂ ಜೀವನಾಂಶ ಚರ್ಚಿಸುವ ಹಂತಕ್ಕೆ ಬಂದಿಲ್ಲ. ಇಬ್ಬರೂ ಸೌಹಾರ್ದಯುತವಾಗಿ ಬೇರೆಯಾಗಲು ಬಯಸಿದ್ದಾರೆ. ಹೀಗಾಗಿ ಸಾಯಿರಾ ಜೀವನಾಂಶವನ್ನು ಕೇಳಿಲ್ಲ ಎಂದು ವಂದನಾ ಶಾ ಬಹಿರಂಗಪಡಿಸಿದರು. ಭಾವನಾತ್ಮಕ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರೂ ಬೇರೆಯಾಗಲು ನಿರ್ಧರಿಸಿದರು. ಆದ್ದರಿಂದ, ವಿಚ್ಛೇದನವು ಸೌಹಾರ್ದಯುತ ರಾಜಿಯಾಗಿದೆ ಎಂದರು.
ಇನ್ನು ಎ.ಆರ್. ರೆಹಮಾನ್ ಡಿವೋರ್ಸ್ ಘೋಷಣೆ ಮಾಡಿದ ಬೆನ್ನಲ್ಲೇ ಅವರ ತಂಡದ ಸದಸ್ಯೆ ಮೋಹಿನಿ ಡೇ ಕೂಡ ತಮ್ಮ ಗಂಡನಿಗೆ ವಿಚ್ಛೇದನ ನೀಡಿರುವ ಸುದ್ದಿಯನ್ನು ಜಾಲತಾಣದ ಮೂಲಕ ಹಂಚಿಕೊಂಡರು. ಇದು ಭಾರೀ ಚರ್ಚೆಗೆ ಹಾಗೂ ಅನುಮಾನಕ್ಕೆ ಕಾರಣವಾಗಿತ್ತು. ಇದಕ್ಕೂ ವಕೀಲೆ ವಂದನಾ ಶಾ ಉತ್ತರಿಸಿದ್ದು, ಇವೆರಡಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಯಾವುದೇ ಊಹಾಪೋಹಗಳನ್ನು ಹರಿಬಿಡುವ ಮೂಲಕ ಅವರಿಗೆ ತೊಂದರೆ ಕೊಡಬೇಡಿ. ಸಾಕಷ್ಟು ಯೋಚಿಸಿದ ಬಳಿಕ ದಂಪತಿ ವಿಚ್ಛೇದನದ ನಿರ್ಧಾರ ಕೈಗೊಂಡಿದ್ದಾರೆ ಎಂದು ವಂದನಾ ಶಾ ತಿಳಿಸಿದ್ದಾರೆ.
ನ.19ರಂದು ಸಾಯಿರಾ ಪರ ವಕೀಲರಾದ ವಂದನಾ ಶಾ, ದಂಪತಿಯ ಡಿವೋರ್ಸ್ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಮದುವೆಯಾಗಿ ಹಲವು ವರ್ಷಗಳ ನಂತರ ಸಾಯಿರಾ ಅವರು ಎ.ಆರ್. ರೆಹಮಾನ್ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಬ್ಬರ ಸಂಬಂಧದಲ್ಲಿ ಗಮನಾರ್ಹ ಭಾವನಾತ್ಮಕ ಒತ್ತಡದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಬ್ಬರ ನಡುವಿನ ಆಳವಾದ ಪ್ರೀತಿಯ ಹೊರತಾಗಿಯೂ, ದಂಪತಿಗೆ ಎದುರಾಗಿರುವ ತೊಂದರೆಗಳು ಅವರ ನಡುವೆ ಅಂತರ ಸೃಷ್ಟಿಸಿವೆ. ಸಾಯಿರಾ ಅವರು ತುಂಬಾ ನೋವು ಮತ್ತು ಸಂಕಟದಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಜೀವನದ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿರುವಾಗ ಸಾರ್ವಜನಿಕರು ಖಾಸಗಿತನವನ್ನು ಗೌರವಿಸಬೇಕೆಂದು ಸಾಯಿರಾ ಬಯಸಿರುವುದಾಗಿ ವದಂನಾ ಶಾ ತಿಳಿಸಿದರು.
ರೆಹಮಾನ್ ಕೂಡ ಡಿವೋರ್ಸ್ ಅನ್ನು ಖಚಿತಪಡಿಸಿದ್ದಾರೆ. ನಾವು 30 ವರ್ಷ ವೈವಾಹಿಕ ಜೀವನ ಪೂರೈಸಲು ಆಶಿಸಿದ್ದೆವು. ಆದರೆ, ಎಲ್ಲವೂ ಕಾಣದ ಅಂತ್ಯವನ್ನು ಹೊಂದಿದೆ ಎಂದು ತೋರುತ್ತದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಈ ಬೇರ್ಪಡಿಕೆಯಲ್ಲಿ ನಾವು ಅರ್ಥವನ್ನು ಹುಡುಕಿದರೂ ಮುರಿದ ತುಣುಕುಗಳು ಮತ್ತೆ ತಮ್ಮ ಸ್ಥಾನವನ್ನು ಕಂಡುಕೊಳ್ಳುವುದಿಲ್ಲ. ಈ ದುರ್ಬಲವಾದ ಅಧ್ಯಾಯದ ಮೂಲಕ ನಾವು ನಡೆಯುತ್ತಿರುವಾಗ ನಿಮ್ಮ ದಯೆ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ರೆಹಮಾನ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ ರೆಹಮಾನ್ ಮತ್ತು ಸಾಯಿರಾ 1995ರಲ್ಲಿ ವಿವಾಹವಾದರು. ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಹೆಸರಿನ ಮೂವರು ಮಕ್ಕಳಿದ್ದಾರೆ. ಇದೀಗ 29 ವರ್ಷಗಳ ವೈವಾಹಿಕ ಬದುಕಿಗೆ ಕೊನೆಯಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ, ರೆಹಮಾನ್ ಕೊನೆಯದಾಗಿ ಧನುಷ್ ಅವರ ಎರಡನೇ ನಿರ್ದೇಶನದ ರಾಯನ್ಗೆ ಸಂಗೀತ ಸಂಯೋಜಿಸಿದರು. ಚಾವಾ ಹಾಗೂ ಥಗ್ ಲೈಫ್ ಸೇರಿದಂತೆ ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧವಾಗಿರುವ ಗಾಂಧಿ ಟಾಕ್ಸ್ ಹಾಗೂ ಹಲವು ಭಾಷೆಯ ಹಲವು ಚಿತ್ರಗಳಿಗೂ ಸಂಗೀತ ನೀಡುತ್ತಿದ್ದಾರೆ. (ಏಜೆನ್ಸೀಸ್)