ಅಮರನ್​ ಚಿತ್ರತಂಡದ ಎಡವಟ್ಟಿನಿಂದ ವಿದ್ಯಾರ್ಥಿಯ ನೆಮ್ಮದಿ ಹಾಳು: 1 ಕೋಟಿ ರೂ. ಪರಿಹಾರಕ್ಕೆ ಆಗ್ರಹ! Amaran

Amaran
Published on

Amaran : ಕಾಲಿವುಡ್​ ಸೂಪರ್​ಸ್ಟಾರ್​ ಶಿವಕಾರ್ತಿಕೇಯನ್​ ಹಾಗೂ ಸರಳ ಸುಂದರಿ ಸಾಯಿ ಪಲ್ಲವಿ ನಟನೆಯ ಅಮರನ್​ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಕಡಿಮೆ ಬಜೆಟ್​ನಲ್ಲಿ ತಯಾರಾದ ಈ ಸಿನಿಮಾ ಇಂದು 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡಿ ತಮಿಳು ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

ತಾಜಾ ಸಂಗತಿ ಏನೆಂದರೆ, ಅಮರನ್ ಸಿನಿಮಾದ ನಿರ್ಮಾಪಕರ ವಿರುದ್ಧ ಚೆನ್ನೈನ ಇಂಜಿನಿಯರಿಂಗ್ ವಿದ್ಯಾರ್ಥಿ ವಿವಿ ವಾಗೀಶನ್ ಎಂಬುವರು ಲಾಯರ್​ ನೋಟಿಸ್ ಕಳುಹಿಸಿದ್ದಾರೆ. ಚಿತ್ರದಲ್ಲಿ ತನ್ನ ಮೊಬೈಲ್​ ನಂಬರ್ ಅನ್ನು ಸಾಯಿ ಪಲ್ಲವಿ ಪಾತ್ರಧಾರಿ ಇಂದೂ ರೆಬೆಕಾ ವರ್ಗೀಸ್ ಅವರದ್ದು ಎಂದು ತೋರಿಸಲಾಗಿದೆ ಎಂದು ಆರೋಪಿಸಿ ವಾಗೀಶನ್ ಕಾನೂನು ಕ್ರಮ ಕೈಗೊಂಡಿದ್ದಾನೆ.

ಫೋನ್​ ನಂಬರ್​ ವಿನಿಮಯ ದೃಶ್ಯ

ಅಮರನ್​ ಸಿನಿಮಾದಲ್ಲಿ ಒಂದು ದೃಶ್ಯವಿದೆ. ಮುಕುಂದ್ ವರದರಾಜನ್ (ಶಿವಕಾರ್ತಿಕೇಯನ್​) ಮತ್ತು ಇಂದೂ ರೆಬೆಕಾ ವರ್ಗೀಸ್ (ಸಾಯಿ ಪಲ್ಲವಿ) ನಡುವೆ ಪ್ರೇಮಾಂಕುರವಾದಾಗ ರೆಬೆಕಾ ವರ್ಗೀಸ್​ ಪೇಪರ್​ನಲ್ಲಿ ಏನೋ ಒಂದನ್ನು ಬರೆದು ವರದರಾಜನ್​ಗೆ ಎಸೆಯುತ್ತಾರೆ. ಬಳಿಕ ಅದನ್ನು ತೆರೆದು ನೋಡಿದಾಗ ಅದರಲ್ಲಿ ಫೋನ್​ ನಂಬರ್​ ಬರೆದಿರುತ್ತದೆ. ಇದೇ ನಂಬರ್​ಗೆ ಸಾಕಷ್ಟು ಕರೆಗಳು ಬರುತ್ತಿವೆ ಅನ್ನೋದು ಇಂಜಿನಿಯರಿಂಗ್​ ವಿದ್ಯಾರ್ಥಿ ವಾಗೀಶನ್ ಆರೋಪವಾಗಿದೆ.

ಅಮರನ್ ಸಿನಿಮಾ ಬಿಡುಗಡೆಯಾದ ನಂತರ, ಈ ಮೊಬೈಲ್​ ನಂಬರ್​ಗೆ ಸಾಕಷ್ಟು ಕರೆಗಳು ಬರುತ್ತವೆ. ಇದರಿಂದ ನನ್ನ ನೆಮ್ಮದಿ ಹಾಳಾಗಿದೆ ಎಂದು ದೂರಿನಲ್ಲಿ ವಾಗೀಶನ್ ತಿಳಿಸಿದ್ದಾರೆ. ನಿರಂತರ ಕರೆಗಳಿಂದಾಗಿ ಮಲಗಲು ಅಥವಾ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಾನಸಿಕ ತೊಂದರೆ ಉಂಟಾಗಿದೆ ಎಂದಿರುವ ವಾಗೀಶನ್​, 1.1 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನಿರ್ಮಾಪಕರನ್ನು ಒತ್ತಾಯಿಸಿದ್ದಾರೆ. ಯಾವುದೇ ಕಾರಣಕ್ಕೂ ನನ್ನ ಫೋನ್ ಸಂಖ್ಯೆಯನ್ನು ಬದಲಾಯಿಸುವುದಿಲ್ಲ ಎಂದು ವಾಗೀಶನ್ ಹೇಳಿದ್ದಾರೆ.

ಅಂದಹಾಗೆ ಅಮರನ್​ ಸಿನಿಮಾ ಅಕ್ಟೋಬರ್​ 14ರಂದು ಬಿಡುಗಡೆಯಾಯಿತು. ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಈ ಸಿನಿಮಾ, ಬಾಕ್ಸ್​ಆಫೀಸ್​ನಲ್ಲಿ ಸಖತ್​ ಧೂಳೆಬ್ಬಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 44ನೇ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್‌ಗೆ ನಿಯೋಜನೆಗೊಂಡಾಗ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ತಮ್ಮ ಶೌರ್ಯಕ್ಕಾಗಿ ಮರಣೋತ್ತರ ಅಶೋಕ ಚಕ್ರವನ್ನು ಪಡೆದ ಮೇಜರ್ ಮುಕುಂದ್ ವರದರಾಜನ್ ಅವರ ನೈಜ-ಜೀವನದ ಕಥೆ ಇದಾಗಿದೆ. ರಾಜ್​ಕುಮಾರ್​ ಪೆರಿಸ್ವಾಮಿ ನಿರ್ದೇಶಿಸಿದ್ದು, ಕಮಲ್​ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net