Amaran : ಕಾಲಿವುಡ್ ಖ್ಯಾತ ನಟ ಶಿವಕಾರ್ತಿಕೇಯನ್, ತಮ್ಮ ಅಮರನ್ ಸಿನಿಮಾದ ಕಾಸ್ಟ್ಯೂಮ್ ಧರಿಸಿ ಪತ್ನಿಯನ್ನು ಅಚ್ಚರಿಗೊಳಿಸಿರುವ ಹಳೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟ ಶಿವಕಾರ್ತಿಕೇಯನ್ ಅವರು ಒಂದೇ ಸಿನಿಮಾದಿಂದ ಹೀರೋ ಆದವರಲ್ಲ. ಕಿರುತೆರೆ ಶೋಗಳಲ್ಲಿ ನಟಿಸುವ ಮೂಲಕ ಹಂತಹಂತವಾಗಿ ಬೆಳೆದು ಬಂದವರು. ಹೀರೋ ಆಗುವ ಮುನ್ನ ಸಣ್ಣಪುಟ್ಟ ಕಾಮಿಡಿ ರೋಲ್ ಮಾಡುತ್ತಿದ್ದರು. ತಮ್ಮ ಸ್ವಂತ ಪ್ರತಿಭೆಯಿಂದ ಮೇಲೆ ಬಂದ ಶಿವಕಾರ್ತಿಕೇಯನ್, ಇಂದು ಅತ್ಯಂತ ಜನಪ್ರಿಯ ನಟರಾಗಿ ಹೊರಹೊಮ್ಮಿದ್ದಾರೆ.
ತಮಿಳು ಚಿತ್ರರಂಗದ ಅಗ್ರ ನಟ ಮಾತ್ರವಲ್ಲ, ಸಿನಿಮಾ ನಿರ್ಮಾಪಕರೂ ಆಗಿದ್ದಾರೆ. 2010ರಲ್ಲಿ ಆರತಿ ಎಂಬುವರನ್ನು ವಿವಾಹವಾದರು. 14 ವರ್ಷಗಳ ವೈವಾಹಿಕ ಜೀವನವನ್ನು ಪೂರೈಸಿದ್ದಾರೆ. ದಂಪತಿಗೆ ಒಬ್ಬ ಮಗಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ವೃತ್ತಿ ಜೀವನದಲ್ಲಿ ಶಿವಕಾರ್ತಿಕೇಯನ್ ಎಷ್ಟೇ ಬಿಜಿಯಾಗಿದ್ದರೂ ತಮ್ಮ ಕುಟುಂಬಕ್ಕೆ ಸಮಯ ನೀಡುವುದರಲ್ಲಿ ಎಂದಿಗೂ ಹಿಂದೆ ಉಳಿಯುವುದಿಲ್ಲ. ಸಮಯ ಸಿಕ್ಕಾಗಲೆಲ್ಲ ಫ್ಯಾಮಿಲಿಯೊಂದಿಗೆ ಇರುತ್ತಾರೆ.
ಶಿವಕಾರ್ತಿಕೇಯನ್ ಅವರು ತಮ್ಮ ಪ್ರತಿ ಸಂದರ್ಶನಗಳಲ್ಲಿ ಜೀವನದ ಕಷ್ಟ-ನಲಿವುಗಳಲ್ಲಿ ತನ್ನ ಪತ್ನಿಯ ಬೆಂಬಲವನ್ನು ಸ್ಮರಿಸುತ್ತಲೇ ಇರುತ್ತಾರೆ. ಅಮರನ್ ಸಿನಿಮಾದಲ್ಲಿ ಮುಕುಂದ್ ವರದರಾಜನ್ ಪಾತ್ರಕ್ಕೆ ಜೀವ ತುಂಬಿರುವ ಶಿವಕಾರ್ತಿಕೇಯನ್, ತಮ್ಮ ಪತ್ನಿ ಆರತಿ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ವಿಶೇಷ ವಿಡಿಯೋ ಹಂಚಿಕೊಂಡು ಶುಭಕೋರಿದ್ದಾರೆ.
ಇದನ್ನೂ ಓದಿ: ಸಚಿನ್ ತೆಂಡುಲ್ಕರ್ಗೆ ಸಾಧ್ಯವಾಗದ ಸಾಧನೆಯನ್ನು ರಣಜಿಯಲ್ಲಿ ಸಾಧಿಸಿ ತೋರಿಸಿದ ಪುತ್ರ ಅರ್ಜುನ್!
ಅಮರನ್ ಚಿತ್ರದ ಶೂಟಿಂಗ್ ವೇಳೆ ಯೋಧನ ಸಮವಸ್ತ್ರದಲ್ಲಿ ಮನೆಗೆ ತೆರಳಿ ಪತ್ನಿಗೆ ಅಚ್ಚರಿ ಮೂಡಿಸಿದ್ದರು. ಸದ್ಯ ಇದೇ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶಿವಕಾರ್ತಿಕೇಯನ್ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಸದ್ಯ ಸರ್ಪ್ರೈಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಬ್ಬರ ನಡುವಿನ ಅನ್ಯೋನ್ಯತೆಯನ್ನು ಕಂಡು ಅಭಿಮಾನಿಗಳು ನೂರ್ಕಾಲ ಇದೇ ರೀತಿ ಬಾಳಿ ಎಂದು ಶುಭ ಹಾರೈಸುತ್ತಿದ್ದಾರೆ.
ಅಂದಹಾಗೆ ಅಮರನ್ ಸಿನಿಮಾ ಅಕ್ಟೋಬರ್ 14ರಂದು ಬಿಡುಗಡೆಯಾಯಿತು. ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಈ ಸಿನಿಮಾ, ಬಾಕ್ಸ್ಆಫೀಸ್ನಲ್ಲಿ ಸಖತ್ ಧೂಳೆಬ್ಬಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 44ನೇ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್‌ಗೆ ನಿಯೋಜನೆಯಲ್ಲಿರುವಾಗ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಸಮಯದಲ್ಲಿ ತಮ್ಮ ಶೌರ್ಯಕ್ಕಾಗಿ ಮರಣೋತ್ತರವಾಗಿ ಅಶೋಕ ಚಕ್ರವನ್ನು ಪಡೆದ ಮೇಜರ್ ಮುಕುಂದ್ ವರದರಾಜನ್ ಅವರ ನೈಜ-ಜೀವನದ ಕಥೆ ಇದಾಗಿದೆ. ಈ ಸಿನಿಮಾವನ್ನು ರಾಜ್ಕುಮಾರ್ ಪೆರಿಸ್ವಾಮಿ ನಿರ್ದೇಶಿಸಿದ್ದು, ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡಿದೆ. (ಏಜೆನ್ಸೀಸ್)