ಭೂಮಿಯಲ್ಲಿ ಆಗುತ್ತಿದೆ ಈ ಬದಲಾವಣೆ...ತೀವ್ರ ಬರ, ಭಯಾನಕ ರೋಗಗಳು ಬರಲಿವೆ! ವಿಜ್ಞಾನಿಗಳ ಎಚ್ಚರಿಕೆ | Scientists warning

Scientists warning
Published on

Scientists warning : ಮುಂಬರುವ ವರ್ಷಗಳಲ್ಲಿ ಭೂಮಿಯ ಮೇಲೆ ಭೀಕರ ಬರಗಾಲ ಆವರಿಸಲಿದೆ ಎಂದು ನಾಸಾ ವಿಜ್ಞಾನಿಗಳು ( NASA Scientists ) ಭಯಾನಕ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಭೂಮಿಯ ಮೇಲಿನ ಶುದ್ಧ ನೀರಿನ ಪ್ರಮಾಣವು ಕಡಿಮೆಯಾಗುತ್ತಿದ್ದು, ಎಲ್ಲ ಖಂಡಗಳು ತೀವ್ರ ಬರದತ್ತ ಸಾಗುತ್ತಿವೆ. ಇದರಿಂದ ಮುಂಬರುವ ವರ್ಷಗಳಲ್ಲಿ ಜಾಗತಿಕ ನೀರಿನ ಭದ್ರತೆಯ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ ಎಂದು ನಾಸಾ ಅಧ್ಯಯನವು ಹೇಳಿದೆ. ನಾಸಾ ಮತ್ತು ಜರ್ಮನ್ ಉಪಗ್ರಹ ದತ್ತಾಂಶವು ನಡೆಸಿದ ಸಂಶೋಧನಾ ವರದಿಯನ್ನು ಸರ್ವೇಸ್​ ಇನ್​ ಜಿಯೋಫಿಸಿಕ್ಸ್​ ( Surveys in Geophysics ) ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

ಈ ಸಂಶೋಧನೆಯು ಗ್ರಾವಿಟಿ ರಿಕವರಿ ಮತ್ತು ಕ್ಲೈಮೇಟ್ ಎಕ್ಸ್‌ಪರಿಮೆಂಟ್ ( GRACE ) ಉಪಗ್ರಹಗಳ ಅವಲೋಕನಗಳಿಂದ ದೃಢೀಕರಿಸಲ್ಪಟ್ಟಿದೆ. 2014 ಮೇ ತಿಂಗಳಿಂದ ಭೂಮಿಯ ಒಟ್ಟು ಶುದ್ಧ ನೀರಿನ ಪ್ರಮಾಣವು ತೀವ್ರವಾಗಿ ಕುಸಿದಿದೆ ಮತ್ತು ಅಂದಿನಿಂದ ಕಡಿಮೆಯಾಗುತ್ತಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ಉಪಗ್ರಹಗಳು ಕಂಡುಹಿಡಿದಿದೆ.

2014 ರಿಂದ 2016 ರವರೆಗಿನ ಹೆಚ್ಚಿನ ಸಮುದ್ರದ ತಾಪಮಾನ ಮತ್ತು ಎಲ್​ನಿನೋ ವಿದ್ಯಮಾನವು ತೀವ್ರ ಬರಗಾಲಕ್ಕೆ ಕಾರಣವಾಗಿದೆ. ಎಲ್​ನಿನೊ ನಂತರ ಜಾಗತಿಕ ಸಿಹಿನೀರಿನ ಮಟ್ಟವು ಚೇತರಿಸಿಕೊಂಡಿಲ್ಲ. 2015 ರಿಂದ 2023 ರವರೆಗೆ ನಡೆದ ಉಪಗ್ರಹ ಮಾಪನ ಪ್ರಕಾರ, ಭೂಮಿಯಲ್ಲಿ ಸಂಗ್ರಹವಾಗಿರುವ ಶುದ್ಧ ನೀರಿನ ಸರಾಸರಿ ಪ್ರಮಾಣವು 2002ರ ಸರಾಸರಿಗಿಂತ 290 ಘನ ಮೈಲುಗಳಷ್ಟು ಕಡಿಮೆಯಾಗಿದೆ ಎಂದು ತೋರಿಸುತ್ತದೆ.

ಶುದ್ಧ ನೀರಿನ ಕೊರತೆಯಿಂದ ಮುಂದಿನ ವರ್ಷಗಳಲ್ಲಿ ಬಡತನ, ರೋಗ ಮತ್ತು ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಅಧ್ಯಯನವು ಹೇಳುತ್ತದೆ. ಜಾಗತಿಕ ಸಿಹಿನೀರಿನ ಕೊರತೆಯು ಉತ್ತರ ಮತ್ತು ಮಧ್ಯ ಬ್ರೆಜಿಲ್‌ನಲ್ಲಿ ತೀವ್ರ ಬರ ಕಾಡಿದಾಗಿನಿಂದ ಪ್ರಾರಂಭವಾಗಿದೆ, ನಂತರ ಇದು ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕ, ಉತ್ತರ ಅಮೆರಿಕ, ಯುರೋಪ್ ಮತ್ತು ಆಫ್ರಿಕಾದಲ್ಲಿ ಪ್ರಮುಖ ಬರಗಳ ಸರಣಿಯಿಂದ ಪ್ರಪಂಚದಾದ್ಯಂತ ಹವಾಮಾನ ಮತ್ತು ಮಳೆಯ ಮಾದರಿಗಳಲ್ಲಿ ಬದಲಾವಣೆ ಉಂಟುಮಾಡಿದೆ ಎಂದು ವರದಿ ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net