

AR Rehaman : ಬರೋಬ್ಬರಿ 29 ವರ್ಷಗಳ ವೈವಾಹಿಕ ಜೀವನ ನಡೆಸಿ, 30ನೇ ವರ್ಷಕ್ಕೆ ಕಾಲಿಡುವ ಮುನ್ನವೇ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಡಿವೋರ್ಸ್ ಘೋಷಣೆ ಮಾಡಿರುವುದು ಸಿನಿ ಅಂಗಳದಲ್ಲಿ ಭಾರಿ ಸಂಚಲನ ಮೂಡಿಸಿದೆ. ನಿನ್ನೆಯಿಂದ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದ್ದು, ರೆಹಮಾನ್ ಕುರಿತು ಸಾಕಷ್ಟು ಮಾಹಿತಿಗಳು ಬೆಳಕಿಗೆ ಬರುತ್ತಿವೆ.
ಎ.ಆರ್. ರೆಹಮಾನ್ ಅವರ ಮಾಜಿ ಪತ್ನಿ ಸಾಯಿರಾ ಅವರು ಮಲಯಾಳಂ ಖ್ಯಾತ ನಟ ರಶಿನ್ ರೆಹಮಾನ್ ಅವರ ಪತ್ನಿ ಮೆಹೆರುನ್ನೀಸಾ ಅವರ ಸಹೋದರಿ. ಹಿಂದೊಮ್ಮೆ ರಶಿನ್ ರೆಹಮಾನ್ ಅವರು ಸಿದ್ಧಾರ್ಥ್ ಕಣ್ಣನ್ ಅವರ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಎ.ಆರ್. ರೆಹಮಾನ್ ಬಗ್ಗೆ ಅವರಾಡಿದ್ದ ಮಾತುಗಳು ಇದೀಗ ಮತ್ತೆ ವೈರಲ್ ಆಗುತ್ತಿವೆ.
ಎ.ಆರ್. ರೆಹಮಾನ್ ಅವರು ಸಾಯಿರಾ ಅವರನ್ನು ಮದುವೆಯಾದ ಬಳಿಕ ಗಿರಿಧಾಮವೊಂದಕ್ಕೆ ಹನಿಮೂನ್ಗೆ ಕರೆದುಕೊಂಡು ಹೋಗಿದ್ದರು. ಆ ರಾತ್ರಿ ನಾನು ಕರೆ ಮಾಡಿದೆ. 12 ಅಥವಾ 1 ಗಂಟೆಯಾಗಿತ್ತು. ನನ್ನೊಂದಿಗೆ ಮಾತನಾಡಿದ ಸಾಯಿರಾ, ಅಷ್ಟರಲ್ಲಾಗಲೇ ಮಲಗಿರುವುದಾಗಿ ಹೇಳಿದರು. ರೆಹಮಾನ್ ಎಲ್ಲಿ? ಎಂದು ಕೇಳಿದೆ. ಉತ್ತರಿಸಿದ ಸಾಯಿರಾ, ನನಗೆ ಗೊತ್ತಿಲ್ಲ ಅಂದರು. ಆದರೆ, ರೆಹಮಾನ್ ಮತ್ತೊಂದು ರೂಮಿನಲ್ಲಿ ವೀಣೆ ನುಡಿಸುವುದನ್ನು ಅಭ್ಯಾಸ ಮಾಡುತ್ತಿದ್ದರು. ಏನೋ ಒಂದು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದರು. ತಮ್ಮ ಕೆಲಸದ ಮೇಲೆ ಎ.ಆರ್. ರೆಹಮಾನ್ ಅವರಿಗೆ ಅಷ್ಟೊಂದು ಒಲವಿತ್ತು ಎಂದು ರಶಿನ್ ರೆಹಮಾನ್ ಸಂದರ್ಶನದಲ್ಲಿ ಹೇಳಿದ್ದರು.
ಅಂದಹಾಗೆ ಎ. ಆರ್. ರೆಹಮಾನ್ ಮತ್ತು ಸಾಯಿರಾ 1995 ರಲ್ಲಿ ವಿವಾಹವಾದರು. ಅನೇಕ ಸಂದರ್ಶನಗಳಲ್ಲಿ ತಮ್ಮದು ಅರೇಂಜ್ಡ್ ಮ್ಯಾರೇಜ್ ಎಂದು ರೆಹಮಾನ್ ಹೇಳಿಕೊಂಡಿದ್ದಾರೆ. ಅವರ ತಾಯಿಯೇ ಸಾಯಿರಾ ಅವರನ್ನು ಹುಡುಕಿದರು. ಈ ವೇಳೆ ರೆಹಮಾನ್ ತಮ್ಮ ತಾಯಿಯ ಮುಂದೆ ಮೂರು ಬೇಡಿಕೆಗಳನ್ನು ಇಟ್ಟಿದ್ದರು. ವಿದ್ಯಾವಂತೆಯಾಗಿರಬೇಕು, ಸಂಗೀತವನ್ನು ಪ್ರೀತಿಸಬೇಕು ಮತ್ತು ಮಾನವೀಯತೆ ಇರಬೇಕೆಂದು ಹೇಳಿದ್ದರಂತೆ. ಈ ಮೂರು ಬೇಡಿಕೆಗಳಿಗೆ ಸಾಯಿರಾ ಹೇಳಿ ಮಾಡಿಸಿದಂತಿದ್ದರು ಎಂದು ಸ್ವತಃ ರೆಹಮಾನ್ ಈ ಹಿಂದಿನ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.
ನ.19ರಂದು ಸಾಯಿರಾ ಪರ ವಕೀಲರಾದ ವಂದನಾ ಶಾ, ದಂಪತಿಯ ಡಿವೋರ್ಸ್ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಮದುವೆಯಾಗಿ ಹಲವು ವರ್ಷಗಳ ನಂತರ ಸಾಯಿರಾ ಅವರು ಎ.ಆರ್. ರೆಹಮಾನ್ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಬ್ಬರ ಸಂಬಂಧದಲ್ಲಿ ಗಮನಾರ್ಹ ಭಾವನಾತ್ಮಕ ಒತ್ತಡದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಬ್ಬರ ನಡುವಿನ ಆಳವಾದ ಪ್ರೀತಿಯ ಹೊರತಾಗಿಯೂ, ದಂಪತಿಗೆ ಎದುರಾಗಿರುವ ತೊಂದರೆಗಳು ಅವರ ನಡುವೆ ಅಂತರ ಸೃಷ್ಟಿಸಿವೆ. ಸಾಯಿರಾ ಅವರು ತುಂಬಾ ನೋವು ಮತ್ತು ಸಂಕಟದಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಜೀವನದ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿರುವಾಗ ಸಾರ್ವಜನಿಕರು ಖಾಸಗಿತನವನ್ನು ಗೌರವಿಸಬೇಕೆಂದು ಸಾಯಿರಾ ಬಯಸಿರುವುದಾಗಿ ವದಂನಾ ಶಾ ತಿಳಿಸಿದರು.
ರೆಹಮಾನ್ ಕೂಡ ಡಿವೋರ್ಸ್ ಅನ್ನು ಖಚಿತಪಡಿಸಿದ್ದಾರೆ. ನಾವು 30 ವರ್ಷ ವೈವಾಹಿಕ ಜೀವನ ಪೂರೈಸಲು ಆಶಿಸಿದ್ದೆವು. ಆದರೆ, ಎಲ್ಲವೂ ಕಾಣದ ಅಂತ್ಯವನ್ನು ಹೊಂದಿದೆ ಎಂದು ತೋರುತ್ತದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಈ ಬೇರ್ಪಡಿಕೆಯಲ್ಲಿ ನಾವು ಅರ್ಥವನ್ನು ಹುಡುಕಿದರೂ ಮುರಿದ ತುಣುಕುಗಳು ಮತ್ತೆ ತಮ್ಮ ಸ್ಥಾನವನ್ನು ಕಂಡುಕೊಳ್ಳುವುದಿಲ್ಲ. ಈ ದುರ್ಬಲವಾದ ಅಧ್ಯಾಯದ ಮೂಲಕ ನಾವು ನಡೆಯುತ್ತಿರುವಾಗ ನಿಮ್ಮ ದಯೆ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ರೆಹಮಾನ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ ರೆಹಮಾನ್ ಮತ್ತು ಸಾಯಿರಾ 1995ರಲ್ಲಿ ವಿವಾಹವಾದರು. ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಹೆಸರಿನ ಮೂವರು ಮಕ್ಕಳಿದ್ದಾರೆ. ಇದೀಗ 29 ವರ್ಷಗಳ ವೈವಾಹಿಕ ಬದುಕಿಗೆ ಕೊನೆಯಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ, ರೆಹಮಾನ್ ಕೊನೆಯದಾಗಿ ಧನುಷ್ ಅವರ ಎರಡನೇ ನಿರ್ದೇಶನದ ರಾಯನ್ಗೆ ಸಂಗೀತ ಸಂಯೋಜಿಸಿದರು. ಚಾವಾ ಹಾಗೂ ಥಗ್ ಲೈಫ್ ಸೇರಿದಂತೆ ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧವಾಗಿರುವ ಗಾಂಧಿ ಟಾಕ್ಸ್ ಹಾಗೂ ಹಲವು ಭಾಷೆಯ ಹಲವು ಚಿತ್ರಗಳಿಗೂ ಸಂಗೀತ ನೀಡುತ್ತಿದ್ದಾರೆ. (ಏಜೆನ್ಸೀಸ್)