

ಪರ್ತ್: ಆಸೀಸ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಇಬ್ಬರು ಕನ್ನಡಿಗರು ಕಣಕ್ಕಿಳಿಯುವುದು ಬಹುತೇಕ ಖಚಿತವೆನಿಸಿದೆ. ಕರ್ನಾಟಕದ ಮೂರನೇ ಆಟಗಾರನೂ ಅವಕಾಶ ಪಡೆದರೆ, ಸುದೀರ್ಘ ಸಮಯದ ಬಳಿಕ ಭಾರತ ತಂಡದ ಆಡುವ 11ರ ಬಳಗದಲ್ಲಿ ಮೂವರು ಕನ್ನಡಿಗರು ಕಾಣಿಸಿಕೊಂಡಂತಾಗುತ್ತದೆ.
ರೋಹಿತ್ ಗೈರಿನಲ್ಲಿ ಕೆಎಲ್ ರಾಹುಲ್ ಆರಂಭಿಕ ಮತ್ತು ಶುಭಮಾನ್ ಗಿಲ್ ಗೈರಿನಲ್ಲಿ ದೇವದತ್ ಪಡಿಕ್ಕಲ್ 3ನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ ಇದ್ದರೆ, 3ನೇ ವೇಗದ ಬೌಲರ್ ಸ್ಥಾನಕ್ಕೆ ಪ್ರಸಿದ್ಧಕೃಷ್ಣ ಪೈಪೋಟಿಯಲ್ಲಿದ್ದಾರೆ. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ 2002ರಲ್ಲಿ ವಿಂಡೀಸ್ ವಿರುದ್ಧ ಆಡಿದ ಕೋಲ್ಕತ ಟೆಸ್ಟ್ ಪಂದ್ಯವೇ ಬಹುಶಃ ಮೂವರು ಕನ್ನಡಿಗರು ಒಟ್ಟಾಗಿ ಆಡಿದ ಕೊನೇ ಟೆಸ್ಟ್ ಪಂದ್ಯವಾಗಿದೆ.
ಕೋಚ್ ಗಂಭೀರ್ಗೆ ಅಗ್ನಿಪರೀಕ್ಷೆ
ತವರಿನಲ್ಲಿ ಕಿವೀಸ್ ವಿರುದ್ಧ ವೈಟ್ವಾಷ್ ಎದುರಿಸಿದ ಬಳಿಕ ತೀವ್ರ ಟೀಕೆಗಳಿಗೆ ಗುರಿಯಾಗಿರುವ ಕೋಚ್ ಗೌತಮ್ ಗಂಭೀರ್ ಪಾಲಿಗೆ ಇದು ಅಗ್ನಿಪರೀಕ್ಷೆಯ ಸರಣಿ ಎನಿಸಿದೆ. ಈ ಸರಣಿಯಲ್ಲಿ ಭಾರತ ತಂಡ ಉತ್ತಮ ನಿರ್ವಹಣೆ ತೋರದಿದ್ದರೆ ಗಂಭೀರ್ ಟೆಸ್ಟ್ ತಂಡದ ಕೋಚ್ ಪಟ್ಟವನ್ನು ಕಳೆದುಕೊಳ್ಳುವ ಭೀತಿಯನ್ನೂ ಹೊಂದಿದ್ದಾರೆ.
ಕೊಹ್ಲಿ ಮೇಲೆ ಎಲ್ಲರ ಕಣ್ಣು
ಕಿವೀಸ್ ವಿರುದ್ಧ ತವರಿನ ಸರಣಿಯಲ್ಲಿ ರನ್ಬರ ಅನುಭವಿಸಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಸ್ಟ್ರೆಲಿಯಾ ಪ್ರವಾಸಕ್ಕೆ ಎಲ್ಲರಿಗಿಂತ ಮುನ್ನ ಹೋಗಿ ಕಠಿಣ ಅಭ್ಯಾಸ ನಡೆಸಿದ್ದು, ಲಯಕ್ಕೆ ಮರಳುವ ಛಲದಲ್ಲಿದ್ದಾರೆ. ಇದೇ ವೇಳೆ ಆಸೀಸ್ ಮಾಧ್ಯಮಗಳ ಸಹಿತ ಎಲ್ಲರ ಕಣ್ಣು ಈಗ ಕೊಹ್ಲಿ ಮೇಲಿದೆ. ಕೊಹ್ಲಿ 2011ರಿಂದ ಆಸೀಸ್ ನೆಲದಲ್ಲಿ ಆಡಿರುವ 13 ಟೆಸ್ಟ್ಗಳಲ್ಲಿ 6 ಶತಕ, 4 ಅರ್ಧಶತಕಗಳ ಸಹಿತ 54ರ ಸರಾಸರಿಯಲ್ಲಿ 1,352 ರನ್ ಗಳಿಸಿದ್ದು, ಇದು ಅವರ ಪಾಲಿಗೆ ಬಹುತೇಕ ಕೊನೇ ಆಸೀಸ್ ಪ್ರವಾಸವೆನಿಸಿದೆ. ಕಳೆದ 3 ವರ್ಷಗಳಲ್ಲಿ ಟೆಸ್ಟ್ನಲ್ಲಿ ಕೇವಲ 2 ಶತಕ ಸಿಡಿಸಿರುವ ಕೊಹ್ಲಿಗೆ ಮತ್ತೊಮ್ಮೆ ಸ್ಟಾರ್ ಆಗಿ ಮಿರುಗಲು ಇದು ಉತ್ತಮ ವೇದಿಕೆ ಎನಿಸಿದೆ.
ಅಶ್ವಿನ್-ಲ್ಯಾನ್ 550 ಫೈಟ್!
ಅನುಭವಿ ಆ್ ಸ್ಪಿನ್ನರ್ಗಳಾದ ಆರ್. ಅಶ್ವಿನ್ ಮತ್ತು ನಾಥನ್ ಲ್ಯಾನ್ ನಡುವೆ ಸರಣಿಯಲ್ಲಿ, ಮೊದಲಿಗೆ 550 ವಿಕೆಟ್ ಸಾಧನೆ ಮಾಡಲು ಪೈಪೋಟಿ ನಡೆಯಲಿದೆ. ಸದ್ಯ ಅಶ್ವಿನ್ 105 ಟೆಸ್ಟ್ಗಳಲ್ಲಿ 536 ವಿಕೆಟ್ ಕಬಳಿಸಿದ್ದರೆ, ಲ್ಯಾನ್ 129 ಟೆಸ್ಟ್ಗಳಲ್ಲಿ 530 ವಿಕೆಟ್ ಪಡೆದಿದ್ದಾರೆ.