

ಪರ್ತ್: ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿರುವ ಬಹುನಿರೀತ ಭಾರತ ಮತ್ತು ಆಸ್ಟ್ರೆಲಿಯಾ ತಂಡಗಳ ನಡುವಿನ ಬಾರ್ಡರ್-ಗಾವಸ್ಕರ್ ಟ್ರೋಫಿಯ (ಬಿಜಿಟಿ) 5 ಪಂದ್ಯಗಳ ಟೆಸ್ಟ್ ಸರಣಿಗೆ ಇನ್ನು ಎರಡು ದಿನಗಳಷ್ಟೇ ಬಾಕಿ ಉಳಿದಿವೆ. ಈಗಾಗಲೆ ಉಭಯ ತಂಡಗಳ ಹಾಲಿ-ಮಾಜಿ ಆಟಗಾರರು ಮೈಂಡ್ಗೇಮ್ ಆರಂಭಿಸಿದ್ದಾರೆ. ಜತೆಗೆ ಸರಣಿಯ ಫಲಿತಾಂಶ ಏನಾಗಲಿದೆ ಎಂದು ಭವಿಷ್ಯವನ್ನೂ ನುಡಿಯಲಾಗುತ್ತಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಫೈನಲ್ ಪ್ರವೇಶಿಸುವ ನಿಟ್ಟಿನಲ್ಲೂ ಈ ಸರಣಿ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ವೈಟ್ವಾಷ್ ಮುಖಭಂಗ ಎದುರಿಸಿರುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ, ಸತತ 3ನೇ ಬಾರಿ ಡಬ್ಲ್ಯುಟಿಸಿ ಫೈನಲ್ಗೇರಬೇಕಾದರೆ ಈ ಸರಣಿಯನ್ನು ಭಾರಿ ಅಂತರದಿಂದ ಗೆಲ್ಲಬೇಕಾದ ಒತ್ತಡಕ್ಕೂ ಸಿಲುಕಿದೆ. ಈ ನಿಟ್ಟಿನಲ್ಲಿ ಸರಣಿಯ ಫಲಿತಾಂಶ ಹೇಗೆ ಬಂದರೆ ಭಾರತಕ್ಕೆ ಅನುಕೂಲ-ಅನನುಕೂಲಗಳಿವೆ ಮತ್ತು ಭಾರತದ ಲಾಭಕ್ಕಾಗಿ ಇತರ ಸರಣಿಗಳ ಫಲಿತಾಂಶ ಹೇಗಿರಬೇಕು ಎಂಬುದರ ಕಿರು ಲೆಕ್ಕಾಚಾರ ಇಲ್ಲಿದೆ.
2023-25ರ ಸಾಲಿನ ಡಬ್ಲ್ಯುಟಿಸಿಯ ಬಾಕಿ ಸರಣಿಗಳು
*ನವೆಂಬರ್ 22-ಜನವರಿ 7: ಆಸ್ಟ್ರೆಲಿಯಾ-ಭಾರತ (5 ಟೆಸ್ಟ್)
*ನವೆಂಬರ್ 22-ಡಿಸೆಂಬರ್ 4: ವೆಸ್ಟ್ ಇಂಡೀಸ್-ಬಾಂಗ್ಲಾ (2 ಟೆಸ್ಟ್)
*ನವೆಂಬರ್ 27-ಡಿಸೆಂಬರ್ 9: ದ. ಆಫ್ರಿಕಾ-ಶ್ರೀಲಂಕಾ (2 ಟೆಸ್ಟ್)
*ನವೆಂಬರ್ 28-ಡಿಸೆಂಬರ್ 18: ನ್ಯೂಜಿಲೆಂಡ್-ಇಂಗ್ಲೆಂಡ್ (3 ಟೆಸ್ಟ್)
*ಡಿಸೆಂಬರ್26-ಜನವರಿ 7: ದ. ಆಫ್ರಿಕಾ-ಪಾಕಿಸ್ತಾನ (2 ಟೆಸ್ಟ್)
*ಜನವರಿ 16-28 : ಪಾಕಿಸ್ತಾನ-ವೆಸ್ಟ್ ಇಂಡೀಸ್ (2 ಟೆಸ್ಟ್)
*ಜನವರಿ 29-ಫೆಬ್ರವರಿ 10: ಶ್ರೀಲಂಕಾ-ಆಸ್ಟ್ರೆಲಿಯಾ (2 ಟೆಸ್ಟ್)
ರೇಸ್ನಲ್ಲಿವೆ 5 ತಂಡಗಳು
ಹಾಲಿ ಡಬ್ಲ್ಯುಟಿಸಿ ಆವೃತ್ತಿಯಲ್ಲಿ ಇನ್ನು 18 ಟೆಸ್ಟ್ ಪಂದ್ಯಗಳಷ್ಟೇ ಬಾಕಿ ಉಳಿದಿರುವ ನಡುವೆ 5 ಪ್ರಮುಖ ತಂಡಗಳು ಇನ್ನೂ ಫೈನಲ್ ಪ್ರವೇಶಿಸುವ ರೇಸ್ನಲ್ಲಿವೆ. ಅವುಗಳೆಂದರೆ ಆಸ್ಟ್ರೆಲಿಯಾ (ಶೇ. 62.50), ಭಾರತ (ಶೇ.58.33), ಶ್ರೀಲಂಕಾ (ಶೇ. 55.56), ನ್ಯೂಜಿಲೆಂಡ್ (ಶೇ.54.55) ಮತ್ತು ದ. ಆಫ್ರಿಕಾ (ಶೇ.54.17). ಈ ತಂಡಗಳು ಸದ್ಯ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲ 5 ಸ್ಥಾನದಲ್ಲಿವೆ. ಅಂತಿಮವಾಗಿ ಅಗ್ರ 2 ತಂಡಗಳಷ್ಟೇ 2025ರ ಜೂನ್ 11ರಿಂದ 15ರವರೆಗೆ (16 ಮೀಸಲು ದಿನ) ಲಾರ್ಡ್ಸ್ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕಾದಾಡಲಿವೆ.
ಡಬ್ಲ್ಯುಟಿಸಿ ಫೈನಲ್ಗೆ ಭಾರತದ ಲೆಕ್ಕಾಚಾರ...
*4-0/5-0ಯಿಂದ ಗೆದ್ದರೆ: ಬೇರಾವುದೇ ಸರಣಿಯ ಫಲಿತಾಂಶ ಲೆಕ್ಕಕ್ಕಿಲ್ಲದೆ ನೇರವಾಗಿ ಫೈನಲ್ ಪ್ರವೇಶ.
*3-1/3-0/4-1ರಿಂದ ಗೆದ್ದರೆ: ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ನ್ಯೂಜಿಲೆಂಡ್ ಕನಿಷ್ಠ 1 ಟೆಸ್ಟ್ನಲ್ಲಿ ಡ್ರಾಗೆ ತೃಪ್ತಿಪಡಬೇಕು.
*2-0ಯಿಂದ ಗೆದ್ದರೆ: ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ನ್ಯೂಜಿಲೆಂಡ್ ಕನಿಷ್ಠ 1 ಟೆಸ್ಟ್ ಸೋಲಬೇಕು.
*3-2ರಿಂದ ಗೆದ್ದರೆ: ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಕನಿಷ್ಠ 1 ಟೆಸ್ಟ್ ಸೋಲಬೇಕು ಮತ್ತು ಆಸೀಸ್-ಲಂಕಾ ಸರಣಿಯಲ್ಲಿ ಕನಿಷ್ಠ 1 ಟೆಸ್ಟ್ ಡ್ರಾ ಆಗಬೇಕು.
*2-1/1-0ಯಿಂದ ಗೆದ್ದರೆ ಅಥವಾ 1-1 ಸಮಬಲವಾದರೆ: ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ನ್ಯೂಜಿಲೆಂಡ್ 1 ಟೆಸ್ಟ್ ಮಾತ್ರ ಗೆಲ್ಲಬೇಕು ಮತ್ತು ಆಸೀಸ್-ಲಂಕಾ ಸರಣಿಯಲ್ಲಿ ಕನಿಷ್ಠ 1 ಟೆಸ್ಟ್ ಡ್ರಾ ಆಗಬೇಕು.
*2-2 ಸಮಬಲವಾದರೆ: ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ನ್ಯೂಜಿಲೆಂಡ್ 1 ಟೆಸ್ಟ್ ಮಾತ್ರ ಗೆಲ್ಲಬೇಕು ಮತ್ತು ಆಸೀಸ್ ವಿರುದ್ಧ ಶ್ರೀಲಂಕಾ ಸರಣಿ ಗೆಲ್ಲಬೇಕು.
*2-3ರಿಂದ ಸೋತರೆ: ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ನ್ಯೂಜಿಲೆಂಡ್ 1 ಟೆಸ್ಟ್ ಮಾತ್ರ ಗೆಲ್ಲಬೇಕು ಮತ್ತು ದಣ ಆಫ್ರಿಕಾ, ಶ್ರೀಲಂಕಾ ತಂಡಗಳು ತಮ್ಮ ಉಳಿದ 4 ಟೆಸ್ಟ್ಗಳಲ್ಲಿ ತಲಾ 2ರಲ್ಲಿ ಸೋಲಬೇಕು.
*1-2/1-3/0-1ರಿಂದ ಸೋತರೆ ಅಥವಾ 0-0 ಸಮಬಲವಾದರೆ: ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಸರಣಿ ಗೆಲ್ಲಬೇಕು ಮತ್ತು ದಣ ಆಫ್ರಿಕಾ ತಂಡ ಲಂಕಾ ಎದುರು 1-1 ಸಮಬಲ, ಪಾಕ್ ವಿರುದ್ಧ 0-2ರಿಂದ ಸೋಲಬೇಕು ಮತ್ತು ಲಂಕಾ ವಿರುದ್ಧ ಆಸೀಸ್ 2-0ಯಿಂದ ಗೆಲ್ಲಬೇಕು.
*1-4, 0-2, 0-3ರಿಂದ ಸೋತರೆ: ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 2-0 ಅಥವಾ 3-0ಯಿಂದ ಗೆಲ್ಲಬೇಕು ಮತ್ತು ದಣ ಆಫ್ರಿಕಾ ತಂಡ ಲಂಕಾ ಎದುರು 1-1 ಸಮಬಲ, ಪಾಕ್ ವಿರುದ್ಧ 0-2ರಿಂದ ಸೋಲಬೇಕು ಮತ್ತು ಲಂಕಾ ವಿರುದ್ಧ ಆಸೀಸ್ 2-0ಯಿಂದ ಗೆಲ್ಲಬೇಕು.
*0-4/0-5ರಿಂದ ಸೋತರೆ: ಭಾರತ ಫೈನಲ್ಗೇರಲು ಸಾಧ್ಯವೇ ಇಲ್ಲ.
ಪರ್ತ್ನಲ್ಲಿ ಮಳೆ ನಡುವೆ ಕೊಹ್ಲಿ ಅಭ್ಯಾಸ
ಶುಕ್ರವಾರ ಶುರುವಾಗಲಿರುವ ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಭಾರತ ತಂಡ ಮಂಗಳವಾರ, ಮೊದಲ ಟೆಸ್ಟ್ ಪಂದ್ಯ ನಡೆಯಲಿರುವ ಪರ್ತ್ನ ಆಪ್ಟಸ್ ಸ್ಟೇಡಿಯಂನಲ್ಲಿ ಕೊನೇ ಹಂತದ ಸಿದ್ಧತೆ ಆರಂಭಿಸಿತು. ನೆಟ್ಸ್ ಅಭ್ಯಾಸದ ವೇಳೆ ಮಳೆ ಅಡಚಣೆ ತಂದರೂ, ಕೊಹ್ಲಿ ಮೈದಾನ ತೊರೆಯಲು ನಿರಾಕರಿಸಿ ನಿರಂತರ ಬ್ಯಾಟಿಂಗ್ ಅಭ್ಯಾಸ ಮುಂದುವರಿಸಿದರು. ನಂತರ ಮಳೆ ಹೆಚ್ಚಾದಾಗ ಅವರೂ ಮೈದಾನ ತ್ಯಜಿಸಬೇಕಾಯಿತು. ತವರಿನ ಕಿವೀಸ್ ವಿರುದ್ಧ ಸರಣಿಯಲ್ಲಿ ಕೇವಲ 93 ರನ್ ಗಳಿಸಿದ್ದ 36 ವರ್ಷದ ಕೊಹ್ಲಿ ಆಸೀಸ್ ನೆಲದಲ್ಲಿ ಲಯಕ್ಕೆ ಮರಳುವ ಹಂಬಲದಲ್ಲಿದ್ದಾರೆ.