

ಬೆಂಗಳೂರು: ಯಶ್ ಅಭಿನಯದ 'ಕೆಜಿಎಫ್ 2' ಚಿತ್ರ ಬಿಡುಗಡೆಯಾಗಿ ಏಳೂವರೆ ತಿಂಗಳುಗಳಾಗಿವೆ. ಈ ಸಮಯದಲ್ಲಿ ಯಶ್ ಅಭಿನಯದ ಹೊಸ ಚಿತ್ರ ಘೋಷಣೆಯಾಗಿಲ್ಲ. ಆ ಚಿತ್ರದ ಯಾವುದಿರಬಹುದು? ಯಾರು ನಿರ್ಮಿಸಬಹುದು? ಎಂಬ ಪ್ರಶ್ನೆಗಳು ಅಭಿಮಾನಿ ವಲಯದಲ್ಲಿದೆ. ಆದರೆ, ಯಶ್ ಮಾತ್ರ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ. ತಮ್ಮ ಮುಂದಿನ ಚಿತ್ರ ಯಾವುದು ಎಂದು ಇಷ್ಟು ದಿನಗಳಾದರೂ ಬಹಿರಂಗಗೊಳಿಸಿಲ್ಲ.
ಇದೀಗ ಬಂದಿರುವ ಹೊಸ ಸುದ್ದಿಯ ಪ್ರಕಾರ. ಯಶ್ ಅವರ ಹೊಸ ಚಿತ್ರವನ್ನು ಅವರ ಮುದ್ದಿನ ಮಗಳು ಐರಾ ನಿರ್ಮಿಸಲಿದ್ದಾರಂತೆ. ಹಾಗೊಂದು ಹೊಸ ಸುದ್ದಿ ಸ್ಯಾಂಡಲ್ವುಡ್ನಲ್ಲಿ ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ, ಯಶ್ ತಮ್ಮ ಮುದ್ದಿನ ಮಗಳ ಹೆಸರಲ್ಲಿ ಹೋಮ್‌ಬ್ಯಾನರ್ ಶುರು ಮಾಡ್ತಾರಂತೆ. ಐರಾ ಪ್ರೊಡಕ್ಷನ್ ಹೌಸ್ ಹೆಸರಿನ ಈ ನಿರ್ಮಾಣ ಸಂಸ್ಥೆಯಡಿ ತಮ್ಮ 19ನೇ ಚಿತ್ರವನ್ನು ನಿರ್ಮಿಸುತ್ತಾರಂತೆ.
ಯಶ್ ಪಾಲಿಗೆ ಐರಾ ಅದೃಷ್ಟ ದೇವತೆ ಎಂದರೆ ತಪ್ಪಿಲ್ಲ. ಐರಾ ಹುಟ್ಟಿದ ನಂತರ ಯಶ್ ಬದುಕು ಬದಲಾಗಿ ಹೋಯ್ತು. ಅದಕ್ಕೂ ಮುನ್ನ ಕನ್ನಡದಲ್ಲಿ ಸ್ಟಾರ್ ನಟರಾಗಿದ್ದ ಯಶ್, ಐರಾ ಜನನದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಹಾಗಾಗಿ, ತಮಗೆ ಅದೃಷ್ಟ ತಂದುಕೊಟ್ಟ ಮಗಳ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿ, ಅದರಡಿ ತಮ್ಮ ಹೊಸ ಚಿತ್ರವನ್ನು ನಿರ್ಮಿಸುವುದು ಅವರ ಯೋಜನೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಶ್ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಇದಕ್ಕೂ ಮುನ್ನ, ಯಶ್ ಅಭಿನಯದ 19ನೇ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಿಸುತ್ತಿದೆ ಎಂಬ ಸುದ್ದಿ ಓಡಾಡಿತ್ತು. ಯಶ್ ಅಭಿನಯದ ಹೊಸ ಚಿತ್ರವನ್ನು ಕೆವಿಎನ್ ನಿರ್ಮಿಸುತ್ತಿದೆ ಮತ್ತು ನರ್ತನ್ ನಿರ್ದೇಶನ ಮಾಡುತ್ತಿದ್ದಾರೆ ಎಂದು ಸಾರುವ ಪೋಸ್ಟರ್ಗಳು ಸೋಷಿಯಲ್ ಮೀಡಿಯಾದಲ್ಲಿ ಕಳೆದ ತಿಂಗಳು ಕಾಣಿಸಿಕೊಂಡಿದ್ದವು. ಆದರೆ, ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯವರಾಗಲೀ, ಯಶ್ ಕಡೆಯಿಂದಾಗಲೀ ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈಗ ಐರಾ ಪ್ರೊಡಕ್ಷನ್ಸ್ ಸುದ್ದಿ ಸದ್ದು ಮಾಡುತ್ತಿಎ. ಇದು ನಿಜವೋ, ಸುಳ್ಳೋ ಎಂದು ಯಶ್ ಅವರೇ ಖಾತ್ರಿಪಡಿಸಬೇಕು.