ವಿಜಯ್​ ದೇವರಕೊಂಡಗೆ ಇಡಿ ಗ್ರಿಲ್​; ಸತತ 12 ತಾಸುಗಳ ಕಾಲ ವಿಚಾರಣೆ!

Vijay Devarakonda
Published on

ಮುಂಬೈ: ಇತ್ತೀಚಿನ ದಿನಗಳಲ್ಲಿ ಇಡಿ ಅಧಿಕಾರಿಗಳು ಬೇರೆಬೇರೆ ಕೇಸ್​ಗಳಲ್ಲಿ ಬಾಲಿವುಡ್​ನ ಸಾಕಷ್ಟು ಮಂದಿ ಸೆಲೆಬ್ರಿಟಿಗಳನ್ನು ಗ್ರಿಲ್​ ಮಾಡಿದ್ದಾರೆ. ಈಗ ಟಾಲಿವುಡ್​ ನಟ ವಿಜಯ್​ ದೇವರಕೊಂಡ ಸಹ ಇಡಿ ಅಧಿಕಾರಿಗಳಿಂದ ಗ್ರಿಲ್​ ಮಾಡಿಸಿಕೊಂಡಿದ್ದಾರೆ. ಬುಧವಾರ ರಾತ್ರಿಯಿಂದ ಸತತವಾಗಿ 12 ಗಂಟೆಗಳ ಕಾಲ ವಿಜಯ್​ ದೇವರಕೊಂಡ ಅವರನ್ನು ಗ್ರಿಲ್​ ಮಾಡಿರುವ ಇಡಿ ಅಧಿಕಾರಿಗಳು, ಇಂದು ಬೆಳಿಗ್ಗೆ ಬಿಟ್ಟು ಕಳಿಸಿದ್ದಾರೆ.

ಇಷ್ಟಕ್ಕೂ ವಿಜಯ್​ ದೇವರಕೊಂಡ ಅವರನ್ನು ಯಾಕೆ ವಿಚಾರಣೆ ನಡೆಸಲಾಯಿತು ಎಂಬ ಪ್ರಶ್ನೆ ಬರುವುದು ಸಹಜ. ವಿಜಯ್​ ದೇವರಕೊಂಡ ಅಭಿನಯದ 'ಲೈಗರ್​' ಎಂಬ ಪ್ಯಾನ್​ ಇಂಡಿಯಾ ಚಿತ್ರವು ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿತ್ತು. ಚಿತ್ರವು ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಸೋಲು ಅನುಭವಿಸಿತ್ತು. ಆ ನಂತರ ನಿರ್ದೇಶಕ ಕಂ ನಿರ್ಮಾಪಕ ಪುರಿ ಜಗನ್ನಾಥ್​ ಅವರಿಗೂ, ಕೆಲವು ವಿತರಕರ  ನಡುವೆ ಹಣಕಾಸಿನ ವಿಷಯವಾಗಿ ಗಲಾಟೆ ನಡೆದಿತ್ತು. ಚಿತ್ರಕ್ಕೆ ವಿದೇಶಿ ಮೂಲಗಳಿಂದ ಹಣ ಹೂಡಿಕೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ವಿಜಯ್​ ದೇವರಕೊಂಡ ಅವರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ವಿಜಯ್ ದೇವರಕೊಂಡ, 'ಇವೆಲ್ಲವೂ ಜನಪ್ರಿಯತೆಯ ಸೈಡ್​ ಎಫೆಕ್ಟ್​ಗಳು. ಜನಪ್ರಿಯವಾಗುತ್ತಿದ್ದಂತೆಯೇ ಕೆಲವೊಮ್ಮೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಜೀವನ ಅಂದ ಮೇಲೆ ಇವೆಲ್ಲ ಇದ್ದಿದ್ದೇ. ಅಧಿಕಾರಿಗಳು ಕರೆದಾಗ ಬರುವುದು ಮತ್ತು ಅವರ ಪ್ರಶ್ನೆಗೆ ಉತ್ತರಿಸಬೇಕಾದ ಕರ್ತವ್ಯ ನನ್ನದಾಗಿತ್ತು. ಆ ಕರ್ತವ್ಯವನ್ನು ನಿರ್ವಹಿಸಿದ್ದೇನೆ' ಎಂದು ವಿಜಯ್​ ಹೇಳಿಕೊಂಡಿದ್ದಾರೆ.

ವಿಜಯ್​ ದೇವರಕೊಂಡ ಅಲ್ಲದೆ, 'ಲೈಗರ್​' ಚಿತ್ರದ ಸಹನಿರ್ಮಾಪಕಿಯಾದ ಚಾರ್ಮಿ ಕೌರ್​ ಅವರನ್ನು ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net