ಸನ್ನಿ ಲಿಯೋನ್​ ಆಯ್ತು; ಈಗ ಉಪೇಂದ್ರ ಚಿತ್ರದಲ್ಲಿ ರೀಷ್ಮಾ ನಾಣಯ್ಯ ಅಭಿನಯ?

Upendra - Reeshma
Published on

ಬೆಂಗಳೂರು: ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ 'ಯು/ಐ' ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಜೋರಾಗಿ ನಡೆಯುತ್ತಿದೆ. ಈಗಾಗಲೇ ಚಿತ್ರದ ಅರ್ಧದಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಇನ್ನೊಂದು ತಿಂಗಳಲ್ಲಿ ಚಿತ್ರೀಕರಣ ಸಂಪೂರ್ಣವಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಮಧ್ತೆ, ಚಿತ್ರದಲ್ಲಿ ಸನ್ನಿ ಲಿಯೋನ್​ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಕಳೆದೆರಡು ದಿನಗಳಿಂದ ಕೇಳಿ ಬಂದಿತ್ತು. ಈ ಹಿಂದೆ ಕನ್ನಡದ ಮೂರು ಚಿತ್ರಗಳಲ್ಲಿ ಐಟಂ ಡ್ಯಾನ್ಸ್​ಗಳಲ್ಲಿ ಕಾಣಿಸಿಕೊಂಡಿದ್ದ ಸನ್ನಿ, ಇದೇ ಮೊದಲ ಬಾರಿಗೆ 'ಯು/ಐ' ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದಾರೆ ಎಂದು ಹೇಳಲಾಗಿತ್ತು.

ಈಗ ಈ ಚಿತ್ರದಲ್ಲಿ 'ಏಕ್​ ಲವ್​ ಯಾ' ಖ್ಯಾತಿಯ ರೀಷ್ಮಾ ನಾಣಯ್ಯ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಚಿತ್ರ ಪ್ರಾರಂಭವಾಗಿ ಇಷ್ಟು ದಿನಗಳಾದರೂ, ಅರ್ಧದಷ್ಟು ಚಿತ್ರೀಕರಣವಾದರೂ, ಚಿತ್ರದ ನಾಯಕಿ ಯಾರೆಂದೇ ಇದುವರೆಗೂ ಬಹಿರಂಗವಾಗಿಲ್ಲ. ಈಗ ಚಿತ್ರದಲ್ಲಿ ರೀಷ್ಮಾ ನಟಿಸುತ್ತಿರುವ ಸುದ್ದಿಯೊಂದು ಕೇಳಿ ಬಂದಿದೆ. ರೀಷ್ಮಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರಾ? ಅಥವಾ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ? ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಉಪೇಂದ್ರ ಅವರು ಎಂದಿನಂತೆ ಈ ಚಿತ್ರದ ಬಗ್ಗೆ ಯಾವೊಂದು ಮಾಹಿತಿಯನ್ನು ಸಹ ಬಿಟ್ಟುಕೊಡುವುದಿಲ್ಲ.

ಅಂದಹಾಗೆ, 'ಯು/ಐ' ಚಿತ್ರವನ್ನು ಲಹರಿ ಫಿಲಂಸ್​ ಮತ್ತು ಕೆ;ಪಿ. ಶ್ರೀಕಾಂತ್​ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಇದೊಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net