

ಬೆಂಗಳೂರು: ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಪ್ರೀತಿಸುತ್ತಿದ್ದಾರೆ ಮತ್ತು ಸದ್ಯದಲ್ಲೇ ಇಬ್ಬರೂ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯೊಂದು ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಇದು ನಿಜವೋ, ಸುಳ್ಳೋ ಎಂದು ಕೇಳುವುದುಕ್ಕೆ ವಸಿಷ್ಢ ಮತ್ತು ಹರಿಪ್ರಿಯಾ ಅವರನ್ನು ಸಂಪರ್ಕಿಸುವುದಕ್ಕೆ ಪ್ರಯತ್ನಿಸುತ್ತಿದ್ದರೆ, ಅವರು ಪ್ರತಿಕ್ರಿಯಿಸುತ್ತಿಲ್ಲ. ಮಾಧ್ಯಮದವರ ಕರೆಗಳೆನ್ನು ಸ್ವೀಕರಿಸುತ್ತಲೇ ಇಲ್ಲ.
ಹೀಗಿರುವಾಗಲೇ, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದುಬೈಗೆ ಹಾರಿದ್ದಾರೆ. ಇಬ್ಬರೂ ಬೆಂಗಳೂರಿನ ಏರ್ಪೋರ್ಟ್ನಲ್ಲಿ ಕೈಕೈ ಹಿಡಿದು ನಡೆಯುತ್ತಿರುವ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇಬ್ಬರೂ ಮುಖಕ್ಕೆ ಮಾಸ್ಕ್ ಹಾಕಿದ್ದಾರಾದರೂ, ಇಬ್ಬರನ್ನು ಸುಲಭವಾಗಿ ಕಂಡು ಹಿಡಿಯಬಹುದಾಗಿದೆ.
ದುಬೈನಿಂದಲೂ ವಸಿಷ್ಠ ಮತ್ತು ಹರಿಪ್ರಿಯಾ ಇಬ್ಬರೂ ಹಲವು ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಹರಿಪ್ರಿಯಾ ದುಬೈನ ಬುರ್ಜ್ ಖಲೀಫಾ ಎದುರಿಗಿರುವ ಮನೆಯ ಮಹಡಿಯಲ್ಲಿ ಓಡಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಂಡರೆ, ಅತ್ತ, ವಸಿಷ್ಠ ರೆಡ್ ಸ್ಯಾಂಡ್ ಡೆಸರ್ಟ್ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಒಟ್ಟಾರೆ, ಇಬ್ಬರೂ ದುಬೈನಲ್ಲಿದ್ದಾರೆ. ಆದರೆ, ಯಾವ ಕಾರಣಕ್ಕೆ ಅಲ್ಲಿಗೆ ಪ್ರಯಾಣ ಬೆಳೆಸಿದ್ದು? ಬೆಂಗಳೂರಿಗೆ ಯಾವಾಗ ವಾಪಸ್ಸು? ಬಂದ ಮೇಲೆ ಪ್ರೀತಿ-ಮದುವೆಯ ಕುರಿತು ಮಾತನಾಡುತ್ತಾರಾ? ಎಂಬ ವಿಷಯಗಳು ಅವರಿಬ್ಬರೂ ಬೆಂಗಳೂರಿಗೆ ಬಂದ ಮೇಲಷ್ಟೇ ಗೊತ್ತಾಗಬೇಕು.