37ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್​; ಜನ್ಮದಿನಕ್ಕೆ ಹರಿದುಬಂತು ಗಣ್ಯರಿಂದ ಶುಭಾಶಯಗಳ ಮಹಾಪೂರ

ವಿಜಯವಾಣಿ - 2024-01-08T091344.540
Published on

ಬೆಂಗಳೂರು: ಇಡೀ ಭಾರತ ಚಿತ್ರರಂಗವೇ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್​, ಪ್ಯಾನ್ ಇಂಡಿಯಾ ನಟ ಯಶ್ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದು, ನಟನ ಜನ್ಮದಿನದ ಬೆನ್ನಲ್ಲೇ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಹಾಗೂ ಗಣ್ಯರು ಶುಭಾಶಯಗಳು ತಿಳಿಸಿದ್ದಾರೆ.

'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯಶ್​, ತದನಂತರ ಹಲವಾರು ಸಿನಿಮಾಗಳಲ್ಲಿ ಮಿಂಚುವ ಮೂಲಕ ಕನ್ನಡ ಸಿನಿಪ್ರೇಕ್ಷಕರಲ್ಲಿ ತಮ್ಮ ಹೆಸರನ್ನು ದಾಖಲಿಸಿದರು. ಪ್ರಶಾಂತ್ ನೀಲ್​ ನಿರ್ದೇಶನದ 'ಕೆಜಿಎಫ್​'ನಲ್ಲಿ ಅಬ್ಬರಿಸಿದ ಯಶ್​, ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದರು. ಇದೀಗ ಜಗತ್ತಿನ ಸೂಪರ್​ಸ್ಟಾರ್​ ನಟರ ಪೈಕಿ ರಾಕಿಂಗ್ ಸ್ಟಾರ್​ ಕೂಡ ಪ್ರಮುಖರು ಎಂಬುದು ಕನ್ನಡಿಗರಿಗೆ ದುಪ್ಪಟ್ಟು ಸಂತಸ.

ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ 'ಕೆಜಿಎಫ್​'ಗೆ ಸಿಕ್ಕ ಅಪಾರ ಮನ್ನಣೆ ಬಳಿಕ ಯಶ್​ ಮೇಲೆ ಭಾರೀ ನಿರೀಕ್ಷೆಗಳು ಹುಟ್ಟಿಕೊಂಡಿದ್ದು, ಇತ್ತೀಚೆಗೆ ತಮ್ಮ ಮುಂದಿನ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ​ ಬಗ್ಗೆ ಅಧಿಕೃತವಾಗಿ ಮಾಹಿತಿ ಕೂಡ ನೀಡಿದರು. ಮತ್ತೊಂದು ಪ್ಯಾನ್​ ಇಂಡಿಯಾ ಚಿತ್ರ ಘೋಷಿಸಿದ ಯಶ್​, ಮಲಯಾಳಂ ಚಿತ್ರರಂಗದ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಅವರೊಟ್ಟಿಗೆ ಕೈಜೋಡಿಸಿರುವುದು ಸದ್ಯ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್​ ಶುಭಾಶಯ ತಿಳಿಸುತ್ತಿದ್ದಾರೆ. ಇದರೊಟ್ಟಿಗೆ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ಕೂಡ ಟ್ವೀಟ್​ ಮುಖೇನ ಯಶ್​ ಜನ್ಮದಿನಕ್ಕೆ ಶುಭಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net