

ಹೊಸದಿಲ್ಲಿ: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರ ಕುರಿತು ಮಾಲ್ಡೀವ್ಸ್ ಸಚಿವರೊಬ್ಬರು ಮಾಡಿದ ಅವಹೇಳನಕಾರಿ ಟ್ವೀಟ್ ಸದ್ಯ ಭಾರೀ ವಿವಾದಕ್ಕೆ ತಿರುಗಿದ್ದು, ದ್ವೀಪರಾಷ್ಟ್ರದ ವಿರುದ್ಧ ದೇಶವ್ಯಾಪಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಇದೀಗ ಈ ವಿವಾದಗಳ ಬೆನ್ನಲ್ಲೇ ಹೆಸರಾಂತ ಟ್ರಾವೆಲ್ ಏಜೆನ್ಸಿ 'ಈಸ್ ಮೈ ಟ್ರಿಪ್' ಮಾಲ್ಡೀವ್ಸ್‌ನತ್ತ ಸಾಗಬೇಕಿದ್ದ ತನ್ನೆಲ್ಲಾ ವಿಮಾನದ ಬುಕಿಂಗ್ಸ್ಗಳನ್ನು ಸ್ಥಗಿತಗೊಳಿಸಿದೆ.
ಕಳೆದ 48 ಗಂಟೆಗಳಲ್ಲಿ ಅನೇಕ ಭಾರತೀಯರು ಮಾಲ್ಡೀವ್ಸ್‌ಗೆ ತೆರಳಲು ಮಾಡಿದ್ದ ಬುಕಿಂಗ್ ಅನ್ನು ವ್ಯಾಪಕವಾಗಿ ರದ್ದುಗೊಳಿಸಿದ್ದು, ನಮ್ಮ ಭಾರತವನ್ನು ದ್ವೇಷಿಸುವ ದೇಶಕ್ಕೆ ಹೋಗಲು ಭಾರೀ ಹಣವನ್ನು ಖರ್ಚು ಮಾಡುವುದರಲ್ಲಿ ಅರ್ಥವಿಲ್ಲ ಎಂದು ಎಕ್ಸ್ನಲ್ಲಿ (ಈ ಹಿಂದೆ ಟ್ವಿಟರ್) ಪೋಸ್ಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಪ್ರಧಾನಿಗಳು ಲಕ್ಷದ್ವೀಪ ಭೇಟಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳು ವ್ಯಾಪಕವಾಗಿ ಹರಿದಾಡಿದ್ದು, ಇದನ್ನು ಗಮನಿಸಿದ ಭಾರತೀಯ ಆನ್‌ಲೈನ್ ಟ್ರಾವೆಲ್ ಏಜೆನ್ಸಿಯಾದ 'ಈಸ್ ಮೈ ಟ್ರಿಪ್' (EaseMyTrip) ಮಾಲ್ಡೀವ್ಸ್‌ಗೆ ಹೋಗಬೇಕಿದ್ದ ಎಲ್ಲಾ ವಿಮಾನಗಳ ಬುಕಿಂಗ್ಗಳನ್ನು ಇದೀಗ ದಿಢೀರ್ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ.
ತಮ್ಮ ಎಕ್ಸ್ನಲ್ಲಿ ಬರೆದುಕೊಂಡ 'ಈಸ್ ಮೈ ಟ್ರಿಪ್' ಸಂಸ್ಥಾಪಕರಾದ ನಿಶಾಂತ್ ಪಿಟ್ಟಿ, "ಒಗ್ಗಟ್ಟಿನಿಂದ ನಮ್ಮ ರಾಷ್ಟ್ರದೊಂದಿಗೆ ಇದೀಗ ಈಸ್ ಮೈ ಟ್ರಿಪ್ ಎಲ್ಲಾ ಮಾಲ್ಡೀವ್ಸ್ ಫ್ಲೈಟ್ ಬುಕಿಂಗ್ ಅನ್ನು ಸ್ಥಗಿತಗೊಳಿಸಿದೆ" ಎಂದು ಟ್ವೀಟ್ ಮಾಡಿದ್ದಾರೆ. ಇದು ನಮ್ಮ ದೇಶಕ್ಕೆ ನೀಡುತ್ತಿರುವ ಬೆಂಬಲ ಎಂಬುದನ್ನು ಕೂಡ ಉಲ್ಲೇಖಿಸಿದ್ದಾರೆ,(ಏಜೆನ್ಸೀಸ್).