ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಈ ರಾಜ್ಯದಿಂದ ಬರಲಿದೆ ರಾಮನ ಚಿತ್ರಗಳಿರುವ ವಿಶೇಷ ಸೀರೆ!

ವಿಜಯವಾಣಿ-2024-01-08T065609.216
Published on

ಅಯೋಧ್ಯೆ: ಅಯೋಧ್ಯೆ ರಾಮಮಂದಿರ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ದಿನಗಣನೆ ಆರಂಭಗೊಂಡಿದ್ದು, ಇದೀಗ ದೇಶವ್ಯಾಪಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಸಮಾರಂಭಕ್ಕೆ ಅಗತ್ಯವಿರುವ ಎಲ್ಲಾ ತಯಾರಿಗಳನ್ನು ಉತ್ತರಪ್ರದೇಶ ಸರ್ಕಾರ ಮಾಡಿಕೊಂಡಿದ್ದು, ಈ ಸಮಾರಂಭಕ್ಕೆ ಭಾರತದ ಹಲವು ರಾಜ್ಯಗಳಿಂದ ವಿಶೇಷ ಕೊಡುಗೆಗಳು ಅಗಾಧ ಸಂಖ್ಯೆಯಲ್ಲಿ ಅಯೋಧ್ಯೆ ತಲುಪುತ್ತಿದೆ. ಆ ಪೈಕಿ ಸೂರತ್​ನಿಂದ ಬರಲಿರುವ ಸೀರೆ ಕೂಡ ಒಂದು.

ದೇಶದ ಪ್ರಮುಖ ಜವಳಿ ಕೇಂದ್ರವಾಗಿರುವ ಗುಜರಾತ್‌ನ ಸೂರತ್ ನಗರದಲ್ಲಿ ತಯಾರಾದ ವಿಶೇಷ ಸೀರೆಯನ್ನು ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ ಕಳುಹಿಸಲಾಗುವುದು. ಭಗವಂತ ರಾಮನ ಚಿತ್ರಗಳು ಮತ್ತು ಅಯೋಧ್ಯೆಯ ದೇವಾಲಯದ ಮುದ್ರಣವುಳ್ಳ ಸೀರೆಯು ಶ್ರೀರಾಮನ ಪತ್ನಿ ಸೀತೆಗೆ ಮೀಸಲಾಗಿದೆ. ಮೊದಲ ಪೀಸ್​ ಅನ್ನು ಭಾನುವಾರದಂದು ಇಲ್ಲಿನ ದೇವಸ್ಥಾನಕ್ಕೆ ಅರ್ಪಿಸಲಾಯಿತು ಎಂದು ಉದ್ಯಮಿ ಲಲಿತ್ ಶರ್ಮಾ ತಿಳಿಸಿದ್ದಾರೆ.

"ನಾವು ಭಗವಾನ್ ರಾಮನ ಚಿತ್ರಗಳು ಮತ್ತು ಅಯೋಧ್ಯೆ ದೇವಸ್ಥಾನವನ್ನು ಮುದ್ರಿಸಿದ ವಿಶೇಷ ಸೀರೆಯೊಂದನ್ನು ಸಿದ್ಧಪಡಿಸಿದ್ದೇವೆ. ನಾವು ಅದನ್ನು ತಾಯಿ ಜಾನಕಿಗೆ ಇಲ್ಲಿನ ದೇವಸ್ಥಾನದಲ್ಲಿ ಅರ್ಪಿಸಿದ್ದೇವೆ. ಸೀರೆಯನ್ನು ಅಯೋಧ್ಯೆಯ ರಾಮ ಮಂದಿರಕ್ಕೆ ಶೀಘ್ರವೇ ಕಳುಹಿಸುತ್ತೇವೆ. ನಮಗೆ ಸೀರೆಗಳಿಗೆ ವಿನಂತಿಗಳು ಕೇಳಿಬಂದರೆ ಖಂಡಿತವಾಗಿ ಸೀತಾ ಮಾತೆ ನೆಲೆಸಿರುವ ಎಲ್ಲಾ ರಾಮನ ದೇವಾಲಯಗಳಿಗೆ ಉಚಿತವಾಗಿ ಕಳುಹಿಸುತ್ತೇವೆ" ಎಂದು ಶರ್ಮಾ ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net