

ಕೇಪ್ಟೌನ್: ದಕ್ಷಿಣ ಆಫ್ರಿಕಾದ ಟಿ20 ಲೀಗ್ "ಎಸ್ಎ20'ರಲ್ಲಿ ಆಡಲಿರುವ ಎಂಐ ಕೇಪ್ಟೌನ್ ತಂಡಕ್ಕೆ ವೆಸ್ಟ್ ಇಂಡೀಸ್ ಆಲ್ರೌಂಡರ್ ಕೈರಾನ್ ಪೊಲ್ಲಾರ್ಡ್ ಹೊಸ ನಾಯಕರಾಗಿ ಭಾನುವಾರ ನೇಮಕಗೊಂಡಿದ್ದಾರೆ. ಜನವರಿ 10ರಂದು ಟೂರ್ನಿ ಆರಂಭಗೊಳ್ಳಲಿದ್ದು, ಅದಕ್ಕೆ 3 ದಿನ ಮುನ್ನ ನಾಯಕತ್ವ ಬದಲಾವಣೆ ಮಾಡಿರುವುದು ಅಚ್ಚರಿ ಎನಿಸಿದೆ.
ಐಪಿಎಲ್ನಲ್ಲಿ ಆಡುವ ಮುಂಬೈ ಇಂಡಿಯನ್ಸ್ ತಂಡದ ಒಡೆತನ ಹೊಂದಿರುವ ರಿಲಯನ್ಸ್ ಗ್ರೂಪ್ ಎಂಐ ಕೇಪ್ಟೌನ್ ತಂಡದ ಮಾಲೀಕತ್ವವನ್ನೂ ಹೊಂದಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮ ಬದಲಿಗೆ ಹಾರ್ದಿಕ್ ಪಾಂಡ್ಯರನ್ನು ನಾಯಕರನ್ನಾಗಿ ನೇಮಿಸಿದ ಅಚ್ಚರಿಯ ಆಯ್ಕೆಯ ಬಳಿಕ ಎಂಐ ಕೇಪ್ಟೌನ್ ತಂಡಕ್ಕೂ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಬದಲಿಗೆ ಪೊಲ್ಲಾರ್ಡ್ರನ್ನು ನಾಯಕರನ್ನಾಗಿ ನೇಮಿಸಿರುವುದು ಕುತೂಹಲ ಕೆರಳಿಸಿದೆ.
ಈ ನಡುವೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ದುಬೈನ ಐಎಲ್ಟಿ20 ಲೀಗ್ನಲ್ಲಿ ಒಡೆತನ ಹೊಂದಿರುವ ಎಂಐ ಎಮಿರೇಟ್ಸ್ ತಂಡಕ್ಕೆ ವೆಸ್ಟ್ ಇಂಡೀಸ್ನ ನಿಕೋಲಸ್ ಪೂರನ್ ನಾಯಕರಾಗಿ ನೇಮಕಗೊಂಡಿದ್ದಾರೆ. ಎಮಿರೇಟ್ಸ್ಗೆ ಈ ಮುನ್ನ ಪೊಲ್ಲಾರ್ಡ್ ನಾಯಕರಾಗಿದ್ದರು.