

ಹೈದರಾಬಾದ್: ಐಕಿಡೊ, ಕಿಕ್ ಬಾಕ್ಸಿಂಗ್, ಜಿಮ್ನಾಸ್ಟಿಕಗಸ್ ಮುಂತಾದ ಸಾಹಸ ಕಲೆಗಳಲ್ಲಿ ಪರಿಣಿತರಾಗಿರುವ ಯಾನಿಕ್ ಬೆನ್ ಇದುವರೆಗೂ ಹಲವಾರು ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ. ದೊಡ್ಡದೊಡ್ಡ ನಟರ ಜತೆಗೆ ಕೆಲಸ ಮಾಡಿರುವ ಬೆನ್, ಸಮಂತಾ ಕಾರ್ಯವೈಖರಿಯನ್ನು ನೋಡಿ ಮೆಚ್ಚಿಕೊಂಡಿದ್ದಾರಂತೆ.
ಹಾಲಿವುಡ್ನ ‘ಟ್ರಾನ್ಸ್ಪೋರ್ಟರ್’, ‘ಇನ್ಸೆಪ್ಷನ್’, ಬಾಲಿವುಡ್ನ ‘ಟೈಗರ್ ಜಿಂದಾ ಹೈ’, ‘ರಯೀಸ್’, ತೆಲುಗಿನ ‘ಅತ್ತಾರಿಂಟಿಕಿ ದಾರೇದಿ’, ‘ನೇನೋಕ್ಕೊಡೇನ್’ ಮುಂತಾದ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿರುವ ಬೆನ್, ಇದೀಗ ಹರಿ-ಹರೀಶ್ ನಿರ್ದೇಶನದ ಸಮಂತಾ ಅಭಿನಯದ 'ಯಶೋದ' ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಇದರಲ್ಲಿ ಸಮಂತಾ ಹೊಡೆದಾಡಿದ ರೀತಿ ನೋಡಿ, ಯಾನಿಕ್ ಬೆನ್ ಬೆರಗಾಗಿದ್ದಾರಂತೆ.
ಶ್ರೀದೇವಿ ಮೂವೀಸ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿರುವ 'ಯಶೋದ' ಚಿತ್ರವು ನ.11ರಂದು ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಚಿತ್ರದಲ್ಲಿ ಹೈ-ವೋಲ್ಟೇಜ್ ಫೈಟ್ಸ್ ಮತ್ತು ಸ್ಟಂಟ್ಗಳು ಮೂಡಿಬಂದಿದ್ದು, ಅದಕ್ಕೆ ಕಾರಣರಾಗಿರುವ ಸಮಂತಾ ಶ್ರದ್ಧೆಗೆ ಯಾನಿಕ್ ಬೆನ್ ಖುಷಿಯಾಗಿದ್ದಾರೆ.
ಸಮಂತಾ ಮತ್ತು ಬೆನ್ ಒಟ್ಟಿಗೆ ಕೆಲಸ ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಸಮಂತಾ ಅವರೊಂದಿಗೆ 'ಫ್ಯಾಮಿಲಿ ಮ್ಯಾನ್ 2' ವೆಬ್ಸೀರೀಸ್ಗಾಗಿ ಕೆಲಸ ಮಾಡಿದ್ದರು. ಈಗ 'ಯಶೋದ' ಚಿತ್ರಕ್ಕಾಗಿ ಸಮಂತಾಗೆ ಹೊಡೆದಾಟ ಹೇಳಿಕೊಟ್ಟಿರುವ ಬೆನ್, ಆಕ್ಷನ್ ದೃಶ್ಯಗಳು ಚೆನ್ನಾಗಿ ಮೂಡಿಬಂದಿರುವುದಕ್ಕೆ ಸಮಂತಾ ಅವರ ಸಮರ್ಪಣಾ ಮನೋಭಾವ ಮತ್ತು ಇಚ್ಛಾಶಕ್ತಿಯೇ ಕಾರಣ ಎಂದು ಹೇಳಿದ್ದಾರಂತೆ.
‘ಯಶೋದ’ ಚಿತ್ರದಲ್ಲಿ ಚಿತ್ರದಲ್ಲಿ ಸಮಂತಾ ಜೊತೆಗೆ ವರಲಕ್ಷ್ಮಿ ಶರತ್ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮಾ ಮುಂತಾದವರು ನಟಿಸಿದ್ದಾರೆ.