More

    ಬನಾರಸ್​ ಚಿತ್ರ ವಿಮರ್ಶೆ: ದೈವನಗರಿಯಲ್ಲೊಂದು ಮೈಮರೆಸುವಂತಹ ಕಥೆ!

    ಚಿತ್ರ: ಬನಾರಸ್​
    ನಿರ್ಮಾಣ: ತಿಲಕ್​ರಾಜ್​ ಭಲ್ಲಾಳ್​
    ನಿರ್ದೇಶನ: ಜಯತೀರ್ಥ
    ತಾರಾಗಣ: ಝೈದ್​ ಖಾನ್​, ಸೋನಲ್​ ಮಾಂತೆರೋ, ಅಚ್ಯುತ್ ಕುಮಾರ್​, ದೇವರಾಜ್​, ಸುಜಯ್​ ಶಾಸ್ತ್ರಿ
    ಸ್ಟಾರ್​: 3

    – ಚೇತನ್​ ನಾಡಿಗೇರ್​

    ‘ಎದೆಯಲ್ಲಿ ಯಾವತ್ತೂ ಗಿಲ್ಟ್​ ಇಟ್ಟುಕೊಳ್ಳಬೇಡ. ಹೋಗಿ ಅವಳ ಕ್ಷಮೆ ಕೇಳು …’

    ಅಪ್ಪ ಪ್ರೀತಿಯಿಂದ ಹೇಳಿದ ಮಾತನ್ನು ಶಿರಸಾವಹಿಸಿ ಪಾಲಿಸುವುದಕ್ಕೆ ಮಗ ಬೆಂಗಳೂರಿನಿಂದ ಬನಾರಸ್​ಗೆ ಹೋಗುತ್ತಾನೆ. ಅಲ್ಲಿ ತನ್ನಿಂದ ನೋವು ತಿಂದ ಹುಡುಗಿಗಾಗಿ ಹುಡುಕಾಡುತ್ತಾನೆ. ಹಾಗೆ ನೋಡಿದರೆ, ಅವನಿಗೆ ಅವಳ ಮೇಲೆ ಪ್ರೀತಿಯೇನೂ ಇಲ್ಲ. ಆದರೆ, ತನ್ನಿಂದ ಅವಳಿಗೆ ಕೆಟ್ಟ ಹೆಸರು ಬಂದಿದೆ, ತಾನು ಮಾಡಿದ ನಂಬಿಕೆದ್ರೋಹದಿಂದ ಅವಳ ಮನಸ್ಸು ಛಿದ್ರವಾಗಿದೆ, ಅದೇ ಕಾರಣಕ್ಕೆ ಅವಳು ಎಲ್ಲವನ್ನೂ ಬಿಟ್ಟು ದೂರದೂರಿಗೆ ಹೋಗಿದ್ದಾಳೆ ಎಂಬ ಪಾಪಪ್ರಜ್ನೆ ಅವನನ್ನು ಪದೇಪದೇ ಕಾಡುತ್ತಿರುತ್ತದೆ. ಆ ಕಾರಣಕ್ಕೆ ಅವನು ಅಲ್ಲಿಗೆ ಹೋಗಿ ಅವಳಿಗಾಗಿ ಹುಡುಕಾಡುತ್ತಾನೆ. ಅವಳು ಅವನಿಗೆ ಸಿಗುತ್ತಾಳೆ. ಕ್ರಮೇಣ ಐ ಲವ್​ ಯೂ ಅಂತಲೂ ಹೇಳುತ್ತಾಳೆ. ಇನ್ನೇನು ಇಬ್ಬರೂ ಒಂದಾಗಬೇಕು ಎನ್ನುವಷ್ಟರಲ್ಲಿ, ಅವನು ಹಿಂದೊಮ್ಮೆ ಹೇಳಿದ ಸುಳ್ಳೇ ಅವನಿಗೆ ಮುಳುವಾಗುತ್ತದೆ. ಅವನು ಟೈಮ್​ ಲೂಪ್​ನಲ್ಲಿ ಸಿಕ್ಕಿಬೀಳುತ್ತಾನಾ? ಅದರಿಂದ ಆಚೆ ಬಂದು, ಅವಳ ಜತೆಗೆ ಸೇರಿಕೊಳ್ಳುತ್ತಾನಾ?

    ಇದನ್ನೂ ಓದಿ: ಬಾಡಿ ಫಿಟ್ಟಿಂಗ್​ ಡ್ರೆಸ್​ ಧರಿಸಿ ಸಿಕ್ಕಾಪಟ್ಟೆ ಟ್ರೋಲ್​ ಆದ ಜಾಹ್ನವಿ ಕಪೂರ್​: ವಿಡಿಯೋ ವೈರಲ್​

    ಪ್ರತಿ ಚಿತ್ರದಲ್ಲೂ ಒಂದು ವಿಭಿನ್ನ ಪ್ರಯತ್ನ ಮಾಡುವುದರಲ್ಲಿ ಜಯತೀರ್ಥ ಹೆಸರುವಾಸಿ. ಅವರ ‘ಬನಾರಸ್​’ ಸಹ ಒಂದು ವಿಭಿನ್ನ ಪ್ರಯತ್ನವೇ. ಒಂದು ಕಾಲಘಟ್ಟದಲ್ಲಿ ಸಿಕ್ಕಿ ಒದ್ದಾಡುವ ಟೈಮ್​ ಲೂಪ್​ ಎಂಬ ಕಾನ್ಸೆಪ್ಟ್​ ಇಟ್ಟುಕೊಂಡು ಅವರು ಈ ಬಾರಿ ಚಿತ್ರ ಮಾಡಿದ್ದಾರೆ. ಒಂದೇ ಬಾರಿಯ ಪರಿಸ್ಥಿತಿ ಎದುರಾದಾಗ ಮನುಷ್ಯ ಹೇಗೆ ಸ್ಪಂದಿಸುತ್ತಾನೆ ಎಂಬುದು ಈ ಟೈಮ್​ ಲೂಪ್​ನ ಸಾರಾಂಶ. ಈ ತರಹದ ಪ್ರಯತ್ನಗಳು ಬೇರೆ ಕಡೆ ಆಗಿವೆ. ಕನ್ನಡದಲ್ಲಿ ಇದೊಂದು ಹೊಸ ಪ್ರಯೋಗ. ಅದರ ಜತೆಗೆ ಪ್ರೇಮಕಥೆ, ಆಧ್ಯಾತ್ಮ, ಥ್ರಿಲ್​​ ಎಲ್ಲವನ್ನೂ ಸೇರಿಸಿ ಈ ಚಿತ್ರ ಮಾಡಿದ್ದಾರೆ.

    ಸಾಮಾನ್ಯವಾಗಿ ಜಯತೀರ್ಥ ಅವರ ಚಿತ್ರಗಳು ಬಹಳ ಸರಳವಾಗಿರುತ್ತವೆ. ಆದರೆ, ಇಲ್ಲಿ ಅವರು ಪ್ರೇಕ್ಷಕರ ತೆಲೆಗೆ ಹುಳಬಿಡುವ ಪ್ರಯತ್ನವನ್ನು ಮಾಡಿದ್ದಾರೆ. ಆರಂಭದ ಒಂದಿಷ್ಟು ಸಮಯ ಭಾರಿ ಕುತೂಹಲ ಹುಟ್ಟಿಸುವ ಚಿತ್ರವು ಕ್ರಮೇಣ ನಿಧಾನವಾಗುತ್ತದೆ. ಮತ್ತೆ ಚಿತ್ರ ಪಿಕಪ್​ ಆಗುವುದು ದ್ವಿತೀಯಾರ್ಧದಲ್ಲಿ. ಅಲ್ಲಿಂದ ಮೇಲಿಂದ ಮೇಲೆ ಟ್ವಿಸ್ಟ್​ಗಳು ಎದುರಾಗುತ್ತವೆ. ಒಂದೇ ತರಹದ ಸನ್ನಿವೇಶಗಳು ಮೇಲಿಂದ ಮೇಲೆ ಬರುತ್ತವೆ. ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬ ಗೊಂದಲ ಪ್ರೇಕ್ಷಕರಿಗೆ ಒಂದು ಹಂತದಲ್ಲಿ ಆಗುವುದು ಸಹಜ. ಇದಕ್ಕೆ ಕ್ಲೈಮ್ಯಾಕ್ಸ್​ನಲ್ಲಿ ಸೂಕ್ತ ಉತ್ತರ ನೀಡುವ ಪ್ರಯತ್ನವನ್ನು ಜಯತೀರ್ಥ ಮಾಡಿದ್ದಾರಾದರೂ, ವಿಜ್ನಾನಕ್ಕೆ ಸಂಬಂಧಿಸಿದ ವಿಷಯಗಳು ಎಷ್ಟು ಜನರಿಗೆ ಅರ್ಥವಾಗುತ್ತದೆ ಎಂಬುದು ಹೇಳುವುದು ಕಷ್ಟ. ಒಂದು ಪಕ್ಷ ಪ್ರೇಕ್ಷಕರಿಗೆ ಜೀರ್ಣವಾಗದಿದ್ದರೆ, ಇಡೀ ಚಿತ್ರವೇ ಅರ್ಥವಾಗದಿರುವ ಸಾಧ್ಯತೆಯೂ ಇದೆ. ಆ ಮಟ್ಟಿಗೆ ಇದು ಬೇರೆ ಪ್ರಯೋಗವಷ್ಟೇ ಅಲ್ಲ, ಒಂದು ದೊಡ್ಡ ರಿಸ್ಕ್​ ಸಹ ಹೌದು.

    ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಗಂಡ ಮುಖಕ್ಕೆ ಮಾಸ್ಕ್​ ಹಾಕಿಕೊಂಡೇ ಇರೋದು ಯಾಕೆ ಗೊತ್ತಾ?

    ಮೊದಲ ಚಿತ್ರದಲ್ಲೇ ಇಂಥದ್ದೊಂದು ದೊಡ್ಡ ರಿಸ್ಕ್​ ತೆಗೆದುಕೊಂಡ ಝೈದ್​ ಖಾನ್​ ಧೈರ್ಯ ಮೆಚ್ಚಬೇಕು. ಸಾಮಾನ್ಯವಾಗಿ ಹೊಸ ಹೀರೋ ಚಿತ್ರ ಎಂದರೆ, ಅಲ್ಲಿ ಭರ್ಜರಿ ಆಕ್ಷನ್​, ವೈಭವೀಕರಣ ಎಲ್ಲವೂ ಇರುತ್ತದೆ. ಆದರೆ, ಇಲ್ಲಿ ಅವೆಲ್ಲ ನೋಡುವುದಕ್ಕೆ ಸಿಗುವುದು ಕಷ್ಟ. ಚಿತ್ರದಲ್ಲಿ ಝೈದ್​ ಖಾನ್​ ಸಾಮಾನ್ಯನಾಗಿಯೇ ಕಾಣಿಸಿಕೊಂಡಿದ್ದಾರೆ. ಅವರಿಗೆ ಅತೀ ಬಿಲ್ಡಪ್​ ಇಲ್ಲ. ಅವರ ಪರ್ಸನಾಲಿಟಿಗೆ ತಕ್ಕ ಪಾತ್ರ ಬರೆದಿದ್ದಾರೆ ಜಯತೀರ್ಥ. ಕೆಲವು ಕಡೆ ಬಾಲಿವುಡ್​ ನಟ ಆಯುಷ್ಮಾನ್​ ಖುರಾನಾ ಅವರನ್ನು ನೆನಪಿಸುವ ಝೈದ್​ ಅಭಿನಯದ ಮೊದಲ ಚಿತ್ರ ಇದು ಎಂದನಿಸುವುದಿಲ್ಲ. ದನಿ ಪಾತ್ರದಲ್ಲಿ ಸೋನಲ್‌ ಇಷ್ಟವಾಗುತ್ತಾರೆ. ಸುಜಯ್ ಶಾಸ್ತ್ರಿ ನಗಿಸುವುದಕ್ಕಿಂತ ಹೆಚ್ಚಾಗಿ ಅಳಿಸುತ್ತಾರೆ. ಅವರ ಪಾತ್ರ ಮತ್ತು ನಟನೆ ಎರಡೂ ವಿಶಿಷ್ಟವಾಗಿದೆ. ದೇವರಾಜ್​, ಅಚ್ಯುತ್ ಕುಮಾರ್, ಸ್ವಪ್ನಾ ರಾಜ್​ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

    ಇನ್ನು, ಚಿತ್ರದಲ್ಲಿ ಬನಾರಸ್​ ಇನ್ನೊಂದು ಪಾತ್ರವೇ ಆಗಿದೆ. ಅಲ್ಲಿನ ರಸ್ತಿ, ಮನೆ, ಕೆಲವು ಪ್ರಮುಖವಾದ ಲೊಕೇಶನ್​ಗಳು ಎಲ್ಲವನ್ನೂ ಅದ್ವೈತ ಗುರುಮೂರ್ತಿ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ‘ಮಾಯಾಗಂಗೆ …’, ‘ಬೆಳಕಿನ ಕವಿತೆ …’, ‘ಹೆಣ್ಣು ಹಡೆಯಲೂ ಬೇಡ …’ ಹಾಡುಗಳು ಇಷ್ಟವಾಗುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts