

ಮುಂಬೈ: ದೇಶಾದ್ಯಂತ ಈಗ ಕೋವಿಡ್ ಕಡಿಮೆಯಾಗಿದೆ. ಜನ ಮಾಸ್ಕ್ ಹಾಕುವುದು ಸಹ ಕಡಿಮೆಯಾಗಿದೆ. ಆದರೆ, ಶಿಲ್ಪಾ ಶೆಟ್ಟಿ ಗಂಡ ಮಾತ್ರ ಹೊರಗೆ ಎಲ್ಲೇ ಹೋಗುವುದಿದ್ದರೂ ಮಾಸ್ಕ್ ಇಲ್ಲದೆ ಹೋಗುವುದಿಲ್ಲ. ಅದೂ ಮುಖ ಪೂರ್ತಿ ಕವರ್ ಮಾಡುವಂತಹ ತರಹೇವಾರಿ ಮಾಸ್ಕ್ಗಳನ್ನು ಹಾಕಿಕೊಂಡು ಅವರು ಇತ್ತೀಚೆಗೆ ಓಡಾಡುತ್ತಿದ್ದಾರೆ. ಆಫೀಸ್ ಇರಲಿ, ಪಾರ್ಟಿ ಇರಲಿ ಅಥವಾ ಯಾವುದೇ ಕಾರ್ಯಕ್ರಮವಾದರೂ ರಾಜ್ ಕುಂದ್ರಾ ಮಾತ್ರ ಒಂದೇ ಒಂದು ದಿನಕ್ಕೂ ಮುಖಕ್ಕೆ ಮಾಸ್ಕ್ ಇಲ್ಲದೆ ಹೊರಕ್ಕೆ ಬರುತ್ತಿಲ್ಲ.
ಇದಕ್ಕೆ ಕಾರಣವೇನಿರಬಹುದು, ಇಷ್ಟಕ್ಕೂ ಅವರು ಯಾಕೆ ಹೊರಗೆಲ್ಲೂ ತಮ್ಮ ಮುಖವನ್ನು ತೋರಿಸುತ್ತಿಲ್ಲವೆಂದು ಹಲವರು ತಲೆ ಕೆಡಿಸಿಕೊಂಡಿದ್ದರು. ಈ ಕುರಿತಾಗಿ ಸ್ವತಃ ರಾಜ್ ಕುಂದ್ರಾ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಟ್ವೀಟ್ಗಳ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ರಾಜ್ ಕುಂದ್ರಾ ತಮ್ಮ ಮುಖ ಯಾಕೆ ತೋರಿಸುತ್ತಿಲ್ಲ ಗೊತ್ತಾ? ಪಾಪರಾಜಿಗಳಿಗೆ ಹೆದರಿ ...
ಎಲ್ಲರಿಗೂ ಗೊತ್ತಿರುವಂತೆ, ಬಾಲಿವುಡ್ನಲ್ಲಿ ಪಾಪರಾಜಿಗಳ ಕಾಟ ಜಾಸ್ತಿ ಇದೆ. ಮುಂಬೈನಲ್ಲಿ ಸೆಲೆಬ್ರಿಟಿಗಳು ಎಲ್ಲೇ ಓಡಾಡಲಿ, ಅವರ ಹಿಂದೆ ಓಡಾಡುವ ಪಾಪರಾಜಿಗಳು ಫೋಟೋ ತೆಗೆದು, ಸುದ್ದಿ ಮಾಡುತ್ತಿದ್ದಾರೆ. ಇದರಿಂದ ಕೆಲವು ಸೆಲೆಬ್ರಿಟಿಗಳು ಸಾಕಷ್ಟು ಪ್ರಚಾರ ಪಡೆದುಕೊಂಡರೆ, ಇನ್ನೂ ಕೆಲವರು ಸಾಕಷ್ಟು ಮುಜುಗರ ಪಟ್ಟಿದ್ದಾರೆ. ರಾಜ್ ಕುಂದ್ರಾ ಹೆಸರು ಬ್ಲೂಫಿಲಂ ಕೇಸ್ನಲ್ಲಿ ಕೇಳಿಬಂದಿತ್ತು. ಈ ವಿಷಯವಾಗಿ ಅವರು ಒಂದಿಷ್ಟು ಜೈಲುವಾಸ ಸಹ ಅನುಭವಿಸಿ ಹೊರಬಂದಿದ್ದಾರೆ. ರಾಜ್ ಹೋದಲ್ಲಿ ಬಂದಲ್ಲಿ ಪಾಪರಾಜಿಗಳು ಮುತ್ತಿಕೊಳ್ಳುವ ಕಾರಣ, ಅವರು ಮಾಸ್ಕ್ ಹಾಕುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಯಾರೂ ತನ್ನನ್ನು ಗುರುತು ಹಿಡಿಯಬಾರದು ಎಂಬ ಕಾರಣಕ್ಕೆ ತರಹೇವಾರಿ ಮಾಸ್ಕ್ಗಳನ್ನು ಧರಿಸುವುದಕ್ಕೆ ಮುಂದಾಗಿದ್ದಾರಂತೆ.
ಈ ಕುರಿತು ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, 'ನಾನು ಮಾಸ್ಕ್ ಧರಿಸುವುದು ಸ್ನೇಹಿತರಿಂದ ದೂರ ಇರುವುದಕ್ಕಲ್ಲ, ಪಾಪರಾಜಿಗಳಿಂದ ದೂರ ಇರುವುದಕ್ಕೆ. ಮಾಧ್ಯಮದವರು ಸಾಕಷ್ಟು ಕಿರುಕುಳ ನೀಡುವುದರಿಂದ ಮಾಸ್ಕ್ ಧರಿಸಬೇಕಾಗಿದೆ. ನನಗೆ ಅವರ ನಡೆಯಿಂದ ಸಾಕಷ್ಟು ನೋವಾಗಿದೆ. ಮೀಡಿಯಾದವರು ನ್ಯಾಯಾಲಯಕ್ಕೂ ಮೀಗಿಲಲ್ಲ' ಎಂದು ಹೇಳಿಕೊಂಡಿದ್ದಾರೆ.