‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ಸಾಥ್ ಕೊಟ್ಟ ರಮ್ಯಾ ... ಹೇಗೆ ಗೊತ್ತಾ?

Hostel Hudugaru Bekagiddare - Final
Published on

ಬೆಂಗಳೂರು: 'ಮೋಹಕ ತಾರೆ' ರಮ್ಯಾ ಯಾವ ಚಿತ್ರದ ಮೂಲಕ ಎಂಟ್ರಿ ಕೊಡಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. 'ಸ್ವಾತಿ ಮುತ್ತಿನ ಮಳೆ ಹನಿಯೇ' ಎಂಬ ಚಿತ್ರದಲ್ಲಿ ಅವರು ರೀ ಎಂಟ್ರಿ ಕೊಡಬಹುದು ಎಂಬ ನಿರೀಕ್ಷೆ ಇತ್ತು. ರಮ್ಯಾ ಸಹ ಚಿತ್ರದಲ್ಲಿ ನಟಿಸುವುದಾಗಿ ಘೋಷಿಸಿದ್ದರು. ಆದರೆ, ಕೊನೆಗೆ ಚಿತ್ರದಲ್ಲಿ ನಟಿಸುವುದರಿಂದ ಹಿಂದೆ ಸರಿದರು. ಈಗ ಇನ್ನೊಂದು ದೊಡ್ಡ ಚಿತ್ರದ ಮೂಲಕ ಅವರು ರೀಎಂಟ್ರಿ ಕೊಡುತ್ತಿರುವ ಸುದ್ದಿ ಇದೆ.

ಈ ಮಧ್ಯೆ, ಅವರು 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಎಂಬ ಚಿತ್ರತಂಡದ ಜತೆಗೆ ಕೈಜೋಡಿಸಿದ್ದಾರೆ. ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಚಿತ್ರದ ಪ್ರಚಾರದಲ್ಲಿ ರಮ್ಯಾ ಭಾಗಿಯಾಗಲಿದ್ದಾರೆ. ಮೊದಲ ಹಂತವಾಗಿ ಚಿತ್ರದ ಪ್ರಮೋಷನಲ್ ಕಂಟೆಂಟ್ ವೀಡಿಯೋ ನಲ್ಲಿ ಅವರು ಭಾಗಿಯಾಗಿದ್ದು, ಇಂದು ಸಂಜೆ ರಮ್ಯಾ ಕಾಣಿಸಿಕೊಂಡಿರುವ ಪ್ರಮೋಷನಲ್​ ಟೀಸರ್​ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಚಿತ್ರದ ಪ್ರಚಾರಕ್ಕೆ ಕೈಜೋಡಿಸುತ್ತಿರುವುದು ರಮ್ಯಾ ಒಬ್ಬರೇ ಅಲ್ಲ. ಈ ಹಿಂದೆ ಪುನೀತ್​ ರಾಜಕುಮಾರ್​, ರಕ್ಷಿತ್​ ಶೆಟ್ಟಿ, ಸುದೀಪ್​ ಮುಂತಾದವರು ಚಿತ್ರದ ಪ್ರಚಾರ ಮಾಡಿದ್ದರು. ಟೈಟಲ್​, ಪೋಸ್ಟರ್​, ಟೀಸರ್​ ಬಿಡುಗಡೆ ಮಾಡಿದ್ದರು. ಈಗ ರಮ್ಯಾ ಸಹ ಚಿತ್ರತಂಡದ ಜತೆಗೆ ಸೇರಿ ಪ್ರಚಾರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ವರುಣ್ ಸ್ಟುಡಿಯೋಸ್ ಹಾಗೂ ಪ್ರಜ್ವಲ್ ಬಿ ಪಿ ಅವರ ಗುಲ್ ಮೋಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಮೊದಲ ಚಿತ್ರ ಇದಾಗಿದ್ದು, ಹಾಸ್ಟಲ್​ ಹುಡುಗರ ಸುತ್ತ ಸುತ್ತುವ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿರುವವರು ನಿತಿನ್ ಕೃಷ್ಣಮೂರ್ತಿ. ಹಲವು ರಂಗಭೂಮಿ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಕೆಲವು ಸ್ಯಾಂಡಲ್​ವುಡ್​ ನಟರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಜನವರಿಯಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಸಂಗೀತ ಮತ್ತು ಅರವಿಂದ್​ ಕಶ್ಯಪ್​ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net