

ಮುಂಬೈ: ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ ಅವರನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಟಾಲಿವುಡ್ನ ದೊಡ್ಡ ನಿರ್ಮಾಪಕರ ನಡುವೆ ಪೈಪೋಟಿ ನಡೆಯುತ್ತಿರುವುದು ಹಳೆಯ ಸುದ್ದಿ. ಈಗ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಜ್ಯೂನಿಯರ್ ಎನ್ಟಿಆರ್ ಅಭಿನಯದ ಹೊಸ ಚಿತ್ರದಲ್ಲಿ ಜಾಹ್ನವಿ ಟಾಲಿವುಡ್ಗೆ ಎಂಟ್ರಿ ಕೊಡುವ ಸಾಧ್ಯತೆ ಹೆಚ್ಚು ಕಾಣುತ್ತಿದೆ.
ಜಾಹ್ನವಿ ತಾಯಿ ಶ್ರೀದೇವಿ ತೆಲುಗು ಚಿತ್ರರಂಗದಿಂದ ತಮ್ಮ ವೃತ್ತಿಜೀವನ ಪ್ರಾರಂಭಿಸಿ, ಬಾಲಿವುಡ್ನಲ್ಲಿ ದೊಡ್ಡ ಹೆಸರು ಮಾಡಿದವರು. ಆದರೆ, ಜಾಹ್ನವಿ ಬಾಲಿವುಡ್ನಲ್ಲಿ ಎಂಟ್ರಿ ಕೊಟ್ಟು, ಅಲ್ಲೇ ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡುತ್ತಿದ್ದಾರೆ. ಹಾಗಾಗಿ, ಅವರನ್ನು ತೆಲುಗು ಚಿತ್ರರಂಗದತ್ತ ಕರೆತರಬೇಕು ಎಂದು ತೆಲುಗಿನ ಮೂರು ಜನಪ್ರಿಯ ನಿರ್ಮಾಣ ಸಂಸ್ಥೆಗಳು ಪ್ರಯತ್ನ ನಡೆಸಿದವು.
ಹಾರಿಕಾ ಹಾಸಿನಿ ಕ್ರಿಯೇಷನ್ಸ್ ಸಂಸ್ಥೆಯು ಮಹೇಶ್ ಬಾಬು ಅಭಿನಯದ ಚಿತ್ರದಲ್ಲಿ ಜಾಹ್ನವಿ ನಾಯಕಿಯಾಗುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಆ ಚಿತ್ರಕ್ಕೆ ಪೂಜಾ ಹೆಗ್ಡೆ ಬಂದಿದ್ದಾರೆ. ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಸಂಸ್ಥೆಯು ನಿರ್ಮಿಸುತ್ತಿರುವ ರಾಮ್ಚರಣ್ ತೇಜ ಅಭಿನಯದ ಹೊಸ ಚಿತ್ರಕ್ಕೆ ಜಾಹ್ನವಿ ಬರಬಹುದು ಎಂದು ಹೇಳಲಾಗಿತ್ತು. ಆದರೆ, ಆ ಚಿತ್ರಕ್ಕೆ ಕಿಯಾರಾ ಅಡ್ವಾಣಿ ನಾಯಕಿ ಆದರು. ಇನ್ನು, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಜ್ಯೂನಿಯರ್ ಎನ್ಟಿಆರ್ ಅಭಿನಯದ ಹೊಸ ಚಿತ್ರದಲ್ಲಿ ಜಾಹ್ನವಿ ಮೊದಲ ಆಯ್ಕೆ ಎಂಬ ಸುದ್ದಿ ಇತ್ತು. ಆ ಸುದ್ದಿ ಈಗ ನಿಜವಾಗುತ್ತಿರುವ ಹಾಗೆ ಕಾಣುತ್ತಿದೆ.
ಮೂಲಗಳ ಪ್ರಕಾರ, ಕೊರಟಾಲ ಶಿವ ನಿರ್ದೇಶನದ 'ಎನ್ಟಿಆರ್ 30' ಚಿತ್ರ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಈಗಾಗಲೇ ಜಾಹ್ನವಿ ಜತೆಗೆ ಮಾತುಕಥೆ ನಡೆಸಲಾಗಿದೆಯಂತೆ. ಜಾಹ್ನವಿ ಸಹ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ, ಜಾಹ್ನವಿ ಕಪೂರ್ ಅಭಿನಯದ ಹೊಸ ಚಿತ್ರ 'ಮಿಲಿ' ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಮಲಯಾಳಂನ 'ಹೆಲೆನ್' ಚಿತ್ರದ ರೀಮೇಕ್ ಇದಾಗಿದ್ದು, ಈ ಚಿತ್ರದ ಮೇಲೆ ಜಾಹ್ನವಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.