

ಮುಂಬೈ: ಭಾರತದಲ್ಲಿ ಅತೀ ಹೆಚ್ಚು ಸಮಯ ಪ್ರದರ್ಶನವಾದ ಚಿತ್ರಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ ‘ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೆ’ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಈ ಚಿತ್ರ 1995ರ ಅಕ್ಟೋಬರ್ 20ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಮತ್ತು ಜನಪ್ರಿಯತೆಗಳೆರಡನ್ನೂ ಪಡೆದಿತ್ತು. ಮುಂಬೈನ ಮರಾಠಾ ಮಂದಿರದಲ್ಲಿ ಚಿತ್ರಮಂದಿರವೊಂದರಲ್ಲೇ ಈ ಚಿತ್ರ ಸತತವಾಗಿ 24 ವರ್ಷಗಳಿಗೂ ಹೆಚ್ಚು ಸಮಯ ಪ್ರದರ್ಶನ ಕಂಡಿತ್ತು.
ಈಗ್ಯಾಕೆ ಈ ವಿಷಯ ಎಂದರೆ, ‘ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರವು ದೇಶಾದ್ಯಂತ ಇಂದು ಮಾತ್ರ ಹಲವು ಚಿತ್ರಮಂದಿರಗಳಲ್ಲಿ ವಿಶೇಷವಾಗಿ ಬಿಡುಗಡೆಯಾಗಿದೆ. ಅದಕ್ಕೆ ಕಾರಣವೇನು ಗೊತ್ತಾ? ಶಾರೂಖ್ ಖಾನ್ ಹುಟ್ಟುಹಬ್ಬ. ಇಂದು ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಶಾರೂಖ್ ಖಾನ್ ಅವರಿಗೆ ಉಡುಗೊರೆಯಾಗಿ ಪಿವಿಆರ್ ಸಿನಿಮಾಸ್ 18 ನಗರಗಳಲ್ಲಿ 28 ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ವಿಶೇಷವಾಗಿ ಬಿಡುಗಡೆ ಮಾಡಿದೆ.
ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಲ್ಕತ್ತಾ ಮುಂತಾದ ಕಡೆಎ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಪಿವಿಆರ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಕ್ಕೂ ಒಂದು ಕಾರಣವಿದೆ. 1995ರಲ್ಲಿ ದೆಹಲಿಯ ವಸಂತ್ ವಿಹಾರ್ನಲ್ಲಿ ಪಿವಿಆರ್ ಪ್ರಾರಂಭವಾದಾಗ, ಬಿಡುಗಡೆಯಾದ ಮೊದಲ ಚಿತ್ರವೆಂದರೆ ಅದು ‘ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೆ’. ಆ ವಿಶ್ವಾಸಕ್ಕೆ ಶಾರೂಖ್ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಒಂದು ದಿನದ ಮಟ್ಟಿಗೆ ಇಡೀ ದೇಶದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.
ಯಶ್ ಚೋಪ್ರಾ ನಿರ್ಮಾಣದ ಮತ್ತು ಅವರ ಮಗ ಆದಿತ್ಯ ಚೋಪ್ರಾ ನಿರ್ದೇಶನದ ಈ ಚಿತ್ರದಲ್ಲಿ ಶಾರೂಖ್ ಖಾನ್, ಕಾಜೋಲ್, ಅನುಪಮ್ ಖೇರ್, ಅಮರೀಶ್ ಪುರಿ, ಫರೀದಾ ಜಲಾಲ್, ಮಂದಿರಾ ಬೇಡಿ ಸೇರಿ ಹಲವರು ನಟಿಸಿದ್ದರು.
ಇನ್ನು, ಶಾರೂಖ್ ಹುಟ್ಟುಹಬ್ಬದ ಅಂಗವಾಗಿ ಡಿಸ್ನಿ-ಹಾಟ್ಸ್ಟಾರ್ ಸಂಸ್ಥೆಯು ಇನ್ನೊಂದು ಉಡುಗೊರೆಯನ್ನು ನೀಡಿದೆ. ಶಾರೂಖ್ ಅತಿಥಿ ಪಾತ್ರದಲ್ಲಿ ನಟಿಸಿರುವ 'ಬ್ರಹ್ಮಾಸ್ತ್ರ' ಚಿತ್ರವು ಇದೇ ನಾಲ್ಕರಂದು ಡಿಸ್ನಿ-ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಆಗಲಿದೆ. ಆದರೆ, ಶಾರೂಖ್ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿನಯದ ಭಾಗದ ಕೆಲವು ನಿಮಿಷಗಳಷ್ಟು ದೃಶ್ಯಗಳನ್ನು ಡಿಸ್ನಿ-ಹಾಟ್ಸ್ಟಾರ್ ತನ್ನ ವೆಬ್ಸೈಟ್ ಮತ್ತು ಯೂಟ್ಯೂಬ್ ಚಾನಲ್ಗಳಲ್ಲಿ ಬಿಡುಗಡೆ ಮಾಡಿದೆ.