

ಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆಡಳಿತದ ಹಾದಿ ತಪ್ಪಿರುವ ಬಗ್ಗೆ ಜಾಗತಿಕವಾಗಿ ಚರ್ಚೆ, ಟೀಕೆಗಳಾಗುತ್ತಿವೆ. ಇವೆಲ್ಲದರ ನಡುವೆ ಅವರದ್ದೇ ಪಕ್ಷದೊಳಗೂ ಈ ಬಗ್ಗೆ ಪ್ರತಿರೋಧದ ಧ್ವನಿ ಏಳತೊಡಗಿದೆ. ಚೀನಾದ ಟಾಪ್ ಪೊಲಿಟಿಕಲ್ ಸ್ಕೂಲ್ನ ಲೇಡಿ ಪ್ರೊಫೆಸರ್ ಒಬ್ಬರು ಕ್ಸಿ ವಿರುದ್ಧ ಧ್ವನಿ ಎತ್ತಿದ್ದು ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ದೇಶವನ್ನು ಕೊಲ್ಲುತ್ತಿದ್ದಾರೆ, ಅಧಃಪತನದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ!
ದ ಗಾರ್ಡಿಯನ್ ಗೆ ಸಂದರ್ಶನ ನೀಡಿರುವ ಲೇಡಿ ಪ್ರೊಫೆಸರ್ ಹೆಸರು ಕಾಯ್ ಕ್ಸಿಯಾ. ರಾಜಕೀಯ ಕೌಟುಂಬಿಕ ಹಿನ್ನೆಲೆ ಹೊಂದಿರುವ ಅವರು ಚೀನಾ ಕಮ್ಯೂನಿಸ್ಟ್ ಪಾರ್ಟಿಯ ಸೆಂಟ್ರಲ್ ಪಾರ್ಟಿ ಸ್ಕೂಲ್ನಲ್ಲಿ ಡೆಮಾಕ್ರಟಿಕ್ ಪಾಲಿಟಿಕ್ಸ್ ಪಾಠ ಮಾಡುವ ಪ್ರೊಫೆಸರ್ ಆಗಿದ್ದರು. ಚೀನಾ ಕಮ್ಯೂನಿಸ್ಟ್ ಪಾರ್ಟಿಯ ವೇದಿಕೆಯಲ್ಲಿ ಅವರು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಮಾಫಿಯಾ ಬಾಸ್, ಪೊಲಿಟಿಕಲ್ ಝೂಂಬಿ ಎಂದೆಲ್ಲ ಸಂಬೋಧಿಸಿದ್ದರು. ಅಧ್ಯಕ್ಷರ ಜನವಿರೋಧಿ ನಡೆಯನ್ನು ವಿರೋಧಿಸಿದವರಿಗೆ, ಪ್ರತಿರೋಧಿಸಿದವರಿಗೆ ಪ್ರತೀಕಾರಕ್ಕೆ ಈಡಾಗುವ ಭೀತಿ, ಆತಂಕ ಇದ್ದೇ ಇದೆ. ಅನೇಕರು ಅದಕ್ಕೆ ಬಲಿಯಾಗಿದ್ದಾರೆ ಕೂಡ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಚೀನಾ ವಿರುದ್ಧ ಇನ್ನಷ್ಟು ಕ್ರಮ?
ಇತ್ತೀಚಿನ ತಿಂಗಳುಗಳ ಅವಧಿಯಲ್ಲಿ ಕ್ಸಿ ಜಿನ್ಪಿಂಗ್ ಅವರನ್ನು ಎದುರಿಸುತ್ತಿರುವ ಮೂರನೇ ಪ್ರಮುಖ ವ್ಯಕ್ತಿಯಾಗಿದ್ದಾರೆ ಕಾಯ್ ಕ್ಸಿಯಾ. ಅವರು ಕೆಲಸ ಮಾಡುತ್ತಿದ್ದ ಸ್ಕೂಲ್ ಇತ್ತೀಚೆಗೆ ಅಧಿಕಾರಿಗಳ ಬಡ್ತಿಯ ಘೋಷಣೆ ಮಾಡಿತ್ತು. ಆಗ, ಕಾಯ್ ಕ್ಸಿಯಾ ಅವರನ್ನು ಸೇವೆಯಿಂದ ಮುಕ್ತಗೊಳಿಸಿ ನಿವೃತ್ತಿ ಸೌಲಭ್ಯಗಳನ್ನು ರದ್ದುಗೊಳಿಸಿರುವುದಾಗಿ ಪ್ರಕಟಿಸಿತ್ತು. ದೇಶದ ಘನತೆಗೆ ಧಕ್ಕೆ ತರುವ ಕೆಲಸ ಮತ್ತು ಗಂಭೀರ ರಾಜಕೀಯ ಬಿಕ್ಕಟ್ಟು ಸೃಷ್ಟಿಸಲು ಪ್ರಯತ್ನಿಸಿದ್ದಕ್ಕಾಗಿ ಈ ಕ್ರಮ ಎಂದೂ ಸಮಜಾಯಿಷಿ ನೀಡಿತ್ತು.
ಏತನ್ಮಧ್ಯೆ, ಕಾಯ್ ಕ್ಸಿಯಾ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ಲೀಕ್ ಆಗಿದ್ದು, ಅದರಲ್ಲಿ ಅವರು ಕ್ಸಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಇಳಿಸಬೇಕು. ಹೊಸಬರನ್ನು ನೇಮಕ ಮಾಡದೇ ಹೋದರೆ ಪಕ್ಷವೂ ಅವನತಿ ಕಾಣಲಿದೆ. ಪಾಲಿಟ್ ಬ್ಯೂರೋ ಸ್ಟ್ಯಾಂಡಿಂಗ್ ಕಮಿಟಿ ಏನಾದರೂ ಜನರಿಗೆ ಬಾಧ್ಯಸ್ಥವಾಗಿದ್ದರೆ ಕೂಡಲೇ ಕ್ಸಿ ಅವರನ್ನು ಬದಲಾಯಿಸುವುದಕ್ಕೆ ಮೀಟಿಂಗ್ ನಡೆಸಬೇಕು ಎಂದು ಹೇಳಿದ್ದು ದಾಖಲಾಗಿದೆ.