ಚೀನಾ ವಿರುದ್ಧ ಇನ್ನಷ್ಟು ಕ್ರಮ?

China
Published on

ನವದೆಹಲಿ: ಲಡಾಖ್ ವಲಯದ ಪ್ಯಾಂಗಾಂಗ್ ತ್ಸೊ ಮತ್ತು ಗೋಗ್ರಾ ಹಾಟ್ ಸ್ಪಿ್ರಗ್ ಪ್ರದೇಶದಿಂದ ವಾಪಸಾಗಲು ಚೀನಾ ಸೇನೆ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಎಚ್ಚರಿಕೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಚೀನಾ ವಿರುದ್ಧ ಮತ್ತಷ್ಟು ಆರ್ಥಿಕ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.

ಲಡಾಖ್ ಮತ್ತು ಅಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಾ ಮಿಲಿಟರಿ ಚಟುವಟಿಕೆ ಪರಿಶೀಲಿಸಲು ಉನ್ನತ ಮಟ್ಟದ ಚೀನಾ ಅಧ್ಯಯನ ಗುಂಪು (ಸಿಎಸ್​ಜಿ) ಸೋಮವಾರ ಸಭೆ ನಡೆಸಿದೆ. ಈಗಿರುವ ಪರಿಸ್ಥಿತಿಯ ಆಧಾರದಲ್ಲಿ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಸುಧಾರಿಸಬೇಕೆನ್ನುವುದು ಚೀನಾದ ಅಭಿಪ್ರಾಯವಾಗಿದೆ. ಆದರೆ, ಲಡಾಖ್ ವಲಯದಿಂದ ಚೀನಾ ಸೇನೆ ಹಿಂದೆ ಸರಿಯುವ ವರೆಗೂ ಸಂಬಂಧ ಸುಧಾರಣೆ ಸಾಧ್ಯವಿಲ್ಲ. ಅದಕ್ಕಾಗಿ ಯಾವುದೇ ಕ್ರಮ ಕೈಗೊಳ್ಳಲು ಸಿದ್ಧ ಎಂದು ಭಾರತ ಹೇಳಿದೆ. ಲಡಾಖ್​ನಲ್ಲಿನ 1597 ಕಿ.ಮೀ. ಉದ್ದದ ವಾಸ್ತವ ನಿಯಂತ್ರಣ ರೇಖೆಯ (ಎಲ್​ಎಸಿ) ಮುಂಚೂಣಿ ನೆಲೆಗಳಲ್ಲಿ ಮುಂದುವರಿಯುವಂತೆ ಭಾರತೀಯ ಸೇನೆಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದ ಹಿರಿಯ ಸಚಿವರು, ಮಿಲಿಟರಿ ನಾಯಕರು ಮತ್ತು ಅಧಿಕಾರಿಗಳು ಸಿಎಸ್​ಜಿಯ ಸದಸ್ಯರಾಗಿದ್ದಾರೆ. ಚೀನಾದ ವಿರುದ್ಧ ಕ್ರಮಗಳನ್ನು ಶಿಫಾರಸು ಮಾಡುವ ಸಮಿತಿ ಇದಾಗಿದೆ.

ಭಾರತದ ವಿಶೇಷ ಪ್ರತಿನಿಧಿ ಜುಲೈ 5ರಂದು ಚೀನಿ ಪ್ರತಿನಿಧಿಯೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದರು. ಎರಡೂ ಕಡೆ ಸೈನ್ಯ ವಾಪಸ್ ಕರೆಸಿಕೊಳ್ಳಬೇಕು ಹಾಗೂ ಉದ್ವಿಗ್ನತೆ ಕಡಿಮೆ ಮಾಡಬೇಕು ಎಂದು ಉಭಯ ಪ್ರತಿನಿಧಿಗಳು ನಿರ್ಧರಿಸಿದ್ದರು. ಆದರೆ ಬಿಕ್ಕಟ್ಟು ಹಾಗೆಯೇ ಮುಂದುವರಿದಿದೆ. ಯೋಧರನ್ನು ವಾಪಸ್ ಕರೆಸಿಕೊಳ್ಳದೆ ಕೇವಲ ರಾಜತಾಂತ್ರಿಕ ನೆಲೆಯಲ್ಲಿ ಸಂಬಂಧ ಸುಧಾರಣೆ ಮಾಡಬೇಕೆಂದು ಚೀನಾ ಪಟ್ಟು ಹಿಡಿದಿದೆ.

ಬೇಹುಗಾರಿಕೆ ಕಾರಣಕ್ಕೆ ಹುವಾವೆ ಮತ್ತಿತರ ಕಂಪನಿಗಳ ವಿರುದ್ಧ ಅಮೆರಿಕ ಕ್ರಮ ಕೈಗೊಂಡಿದೆ. ಭಾರತ ಕೂಡ ಚೀನಾದ ದೂರಸಂಪರ್ಕ ಹಾಗೂ ಇಂಧನ ಕಂಪನಿಗಳನ್ನು ಮುಂದಿನ ಯೋಜನೆಗಳಿಂದ ಹೊರಗಿಡುವ ಸಂಭವವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net