

World Fattest Cat : ವಿಶ್ವದ ದಡೂತಿ ಬೆಕ್ಕು ಎಂಬ ದಾಖಲೆ ಬರೆದಿದ್ದ "ಕ್ರಂಬ್ಸ್" ದುರಂತ ಸಾವಿಗೀಡಾಗಿದೆ. ತೂಕ ಕಳೆದುಕೊಳ್ಳಲು ಡಯೆಟ್ ಮೊರೆ ಹೋದ ಒಂದೇ ವಾರದಲ್ಲಿ ಬೆಕ್ಕು ಕೊನೆಯುಸಿರೆಳೆದಿದೆ.
ಕ್ರಂಬ್ಸ್ ಅನ್ನು ರಷ್ಯಾದ ಆಸ್ಪತ್ರೆಯೊಂದರ ಬೇಸ್ಮೆಂಟ್ನಲ್ಲಿ ರಕ್ಷಣೆ ಮಾಡಲಾಗಿತ್ತು. ಹರಕುಮುರಕು ತಿಂಡಿಗಳು, ಸೂಪ್, ವಿಸ್ಕಿ ಮತ್ತು ಬಿಸ್ಕತ್ತುಗಳನ್ನು ತಿಂದು ಭಾರಿ ಬೊಜ್ಜು ಬೆಳೆಸಿಕೊಂಡಿತ್ತು. ಬರೋಬ್ಬರಿ 17 ಕೆಜಿ ತೂಗುತ್ತಿತ್ತು. ರಷ್ಯನ್ ಭಾಷೆಯಲ್ಲಿ ಕ್ರೋಶಿಕ್ ಎಂದು ಹೆಸರಿಡಲಾಗಿತ್ತು. ಭಾರಿ ತೂಕವನ್ನು ಕಡಿಮೆ ಮಾಡಲು ಒಂದು ವಾರದಿಂದ ಬೆಕ್ಕು ಡಯಟ್ ಅನುಸರಿಸಿತ್ತು. ಅಂದಿನಿಂದ ಸುಮಾರು 7 ಪೌಂಡ್ ಅಂದರೆ, 3 ಕೆಜಿಗೂ ಅಧಿಕ ತೂಕವನ್ನು ಕಳೆದುಕೊಂಡಿತ್ತು.
ತನ್ನ ಅಧಿಕ ತೂಕದಿಂದಾಗಿ ಬೆಕ್ಕಿಗೆ ಓಡಾಡಲು ಸಹ ಆಗುತ್ತಿರಲಿಲ್ಲ. ಡಯಟ್ ಪ್ರಾರಂಭಿಸಿದ ನಂತರ ಪಾಸಿಟಿವ್ ಬದಲಾವಣೆಯು ಕಂಡುಬಂದಿತ್ತು. ತೂಕ ಕಡಿಮೆಯಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಶನಿವಾರ (ಅ.26) ಕೊನೆಯುಸಿರೆಳೆದಿದೆ. ಬೆಕ್ಕಿನ ಆಂತರಿಕ ಅಂಗಗಳ ಮೇಲೆ ಕ್ಯಾನ್ಸರ್ ಗೆಡ್ಡೆಗಳನ್ನು ಹೊಂದಿದ್ದು, ಬೆಕ್ಕಿನ ಪದರಗಳು ತುಂಬಾ ಆಳವಾಗಿದ್ದರಿಂದ ಗೆಡ್ಡೆಗಳನ್ನು ಪತ್ತೆಯಾಗಿಲ್ಲ ಎಂದು ಪಶುವೈದ್ಯರು ಹೇಳಿದ್ದಾರೆ.
ಕ್ಯಾನ್ಸರ್ ಗೆಡ್ಡೆಗಳಿಂದಾಗಿ ಅನೇಕ ಅಂಗಗಳು ವಿಫಲವಾದವು. ಆದರೆ, ಕ್ರಂಬ್ಸ್ನಲ್ಲಿ ಯಾವುದೇ ಉಸಿರಾಟ ಅಥವಾ ಜೀರ್ಣಕಾರಿ ಸಮಸ್ಯೆಗಳು ಇರಲಿಲ್ಲ. ಅಲ್ಲದೆ, ಆರೋಗ್ಯ ಹದಗೆಡುವ ಯಾವುದೇ ಲಕ್ಷಣಗಳು ಕಂಡು ಬರಲಿಲ್ಲ ಎಂದು ಕ್ರಂಬ್ಸ್ ಆರೈಕೆ ಮಾಡಿದ ಮಾಲೀಕರು ಹೇಳಿದ್ದಾರೆ.
ನಮ್ಮಿಂದ ಅಲ್ಟ್ರಾಸೌಂಡ್ ಮಾಡಿಸಲು ಸಾಧ್ಯವಾಗಲಿಲ್ಲ. ಆದರೆ, ನಾವು ನಿರಂತರವಾಗಿ ಕ್ರಂಬ್ಸ್ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಿದ್ದೇವೆ. ಅಧಿಕ ತೂಕವು ಸುಮ್ಮನೇ ಸಂಭವಿಸುವುದಿಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಹೀಗಾಗಿ ಕ್ರಂಬ್ಸ್ ಆರೋಗ್ಯದ ಮೇಲೆ ನಿಗಾವಹಿಸಿದ್ದೆವು. ಸಾವಿಗೂ ಕೆಲವು ವಾರಗಳ ಮುಂಚೆ ಬೆಕ್ಕಿನಲ್ಲಿ ಅನಾರೋಗ್ಯದ ಯಾವುದೇ ಲಕ್ಷಣಗಳನ್ನು ಕಂಡುಬರಲಿಲ್ಲ ಎಂದು ಬೆಕ್ಕಿನ ಮಾಲೀಕರು ತಿಳಿಸಿದ್ದಾರೆ.
ಬೆಕ್ಕಿಗಿರುವ ಸಮಸ್ಯೆ ನಮಗೆ ಮೊದಲು ತಿಳಿಯಲಿಲ್ಲ. ನಮ್ಮಿಂದ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಎಂಬುದನ್ನು ನೆನೆಸಿಸಿಕೊಂಡರೆ ತುಂಬಾ ನೋವಾಗುತ್ತದೆ. ನಿಜಕ್ಕೂ ಇದು ನಮಗೆ ದೊಡ್ಡ ನಷ್ಟವಾಗಿದೆ. ಏಕೆಂದರೆ, ಕ್ರೋಶಿಕ್ ಪ್ರತಿಯೊಬ್ಬರ ಭರವಸೆಯ ಸಂಕೇತವಾಗಿತ್ತು ಮತ್ತು ನಾವು ಒಳ್ಳೆಯ ಸುದ್ದಿಯನ್ನು ನೀಡಲು ಬಯಸಿದ್ದೆವು. ಆದರೆ, ಇದು ನೋವಿನ ಸಂಗತಿಯಾಗಿದೆ ಎಂದು ಬೆಕ್ಕಿನ ಸಾವಿನ ಬಗ್ಗೆ ಮಾತನಾಡುತ್ತಾ ಮಾಲೀಕರು ಕಣ್ಣೀರಾಕಿದರು.
ದಡೂತಿ ಬೆಕ್ಕಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಬಳಿಕ ಸಿಕ್ಕಾಪಟ್ಟೆ ವೈರಲ್ ಆಯಿತು. ಅಲ್ಲದೆ, ಬೆಕ್ಕನ್ನು ನೋಡಿ ಅನೇಕ ಮಂದಿ ಹುಬ್ಬೇರಿಸಿದರು. ಪ್ರಾಣಿ ಪ್ರಿಯರು ಅದರ ಆರೋಗ್ಯದ ಬಗ್ಗೆ ಕಾಳಜಿ ಸಹ ವಹಿಸಿದ್ದರು. ಆದರೆ, ಇಂದು ದಡೂತಿ ಬೆಕ್ಕು ದಿಢೀರ್ ಸಾವಿಗೀಡಾಗಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. (ಏಜೆನ್ಸೀಸ್)