

Cracker seller to fashion model : ಮೇಕಪ್ ಆರ್ಟಿಸ್ಟ್ ಮಹಿಮಾ ಬಜಾಜ್ ಅವರ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದೀಪಾವಳಿಗೂ ಮುನ್ನ ಚಿತ್ರೀಕರಿಸಿದ ವಿಡಿಯೋ ನೆಟ್ಟಿಗರ ಮನ ಗೆಲ್ಲುತ್ತಿದೆ.
ಪಟಾಕಿ ಮಾರುತ್ತಿದ್ದ ಮಹಿಳೆಯೊಬ್ಬರು ಫ್ಯಾಷನ್ ಮಾಡೆಲ್ ಆಗಿ ಪರಿವರ್ತನೆಯಾಗುವ ದೃಶ್ಯವನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಮಹಿಮಾ ಅವರು ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಅಂದಹಾಗೆ ಮಹಿಮಾ ಅವರು ರಾಜಸ್ಥಾನದ ಜೈಪುರ ಮೂಲದವರು.
ರಸ್ತೆಬದಿಯಲ್ಲಿ ಪಟಾಕಿ ಮಾರುತ್ತಿದ್ದ ಮಹಿಳೆಯ ಬಳಿ ಹೋಗಿ ಪಟಾಕಿ ಬಾಕ್ಸ್ ಒಂದನ್ನು ಖರೀದಿ ಮಾಡುವ ಮಹಿಮಾ ಬಜಾಜ್, ನಂತರ ಆಕೆಯ ಮುಖವನ್ನು ನೇವರಿಸಿ ಏನೋ ಹೇಳುತ್ತಾರೆ. ಇದಾದ ಬಳಿಕ ತಮ್ಮ ಸಲೂನ್ನಲ್ಲಿ ಮಹಿಳೆಯನ್ನು ಕೂರಿಸಿ ಕಂಪ್ಲೀಟ್ ಮೇಕಪ್ ಮಾಡಿ ಸುಂದರವಾಗಿ ಬದಲಾಯಿಸುತ್ತಾರೆ.
ಕೂದಲು ಮತ್ತು ಮುಖವನ್ನು ಆರೈಕೆ ಮಾಡುತ್ತಾರೆ. ಮೊದಲಿಗೆ ಕಿತ್ತಳೆ, ಜೇನುತುಪ್ಪ, ಗುಲಾಬಿ ಮತ್ತು ಕಿತ್ತಳೆ ಫೇಶಿಯಲ್ ಕಿನ್ಸರ್ ಬಳಸಿ ಮುಖವನ್ನು ಸ್ವಚ್ಛಗೊಳಿಸುತ್ತಾರೆ. ಇದಾದ ಬಳಿಕ ಕಂಡೀಷನರ್, ಸೆರಮ್, ನೆಲ್ಲಿಕಾಯಿ ಪೌಡರ್ ಹಾಗೂ ನಿಂಬೆ ಹಣ್ಣಿನ ರಸವನ್ನು ಬೆರೆಸಿ, ಮಿಕ್ಸ್ ಮಾಡಿ ಕೂದಲು ಆರೈಕೆ ಮಾಡುತ್ತಾರೆ. ಇದಾದ ಬಳಿಕ ಮಹಿಳೆಗೆ ಮೇಕಪ್ ಮಾಡಿ, ಸಂಪೂರ್ಣ ಬದಲಾಯಿಸುತ್ತಾರೆ.
ಪಟಾಕಿ ಮಾರುವ ವೇಷದಲ್ಲಿ ಮಹಿಳೆ ಮತ್ತು ಮೇಕಪ್ ಮಾಡಿದ ಬಳಿಕ ಸಾಂಪ್ರದಾಯಿಕ ಧಿರಿಸಿನಲ್ಲಿ ಮಹಿಳೆಯ ಎರಡು ಫೋಟೋಗಳನ್ನು ವಿಡಿಯೋದಲ್ಲಿ ಮಹಿಮಾ ಬಜಾಜ್ ಪ್ರದರ್ಶಿಸಿದ್ದು, ನೋಡುಗರು ಒಂದು ಕ್ಷಣ ತಮ್ಮ ಕಣ್ಣನ್ನು ತಾವೇ ನಂಬುವುದಿಲ್ಲ. ಪಟಾಕಿ ಮಾರುತ್ತಿದ್ದ ಮಹಿಳೆ ಮಾಡೆಲ್ ರೀತಿ ಬದಲಾಗಿದ್ದಾಳೆ. ನಿಜವಾಗಿಯೂ ಅವರೇನಾ ಎನ್ನುವಷ್ಟರಮಟ್ಟಿಗೆ ಸುಂದರವಾಗಿ ಕಾಣುತ್ತಾರೆ.
ಅಂದಹಾಗೆ ಮಹಿಮಾ ಅವರು ಅಕ್ಟೋಬರ್ 27ರಂದು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈವರೆಗೂ 5 ಮಿಲಿಯನ್ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 1 ಲಕ್ಷ 80 ಸಾವಿರಕ್ಕೂ ಅಧಿಕ ಲೈಕ್ಗಳು ವಿಡಿಯೋಗೆ ಬಂದಿದೆ. ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದು, ಮಹಿಮಾ ಅವರ ಕೆಲಸವನ್ನು ಕೊಂಡಾಡಿದ್ದಾರೆ. (ಏಜೆನ್ಸೀಸ್)