ಏಲಿಯನ್​ಗಳು ನಮ್ಮ ಭೂಮಿಯ ಮೇಲೆ ಇಳಿದಿವೆಯೇ? ಇಸ್ರೋ ಅಧ್ಯಕ್ಷರು ಕೊಟ್ಟ ಉತ್ತರ ವೈರಲ್​ | Aliens

Aliens
Published on

Aliens : ಏಲಿಯನ್​ ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟತೆ ದೊರೆತಿಲ್ಲ. ಏಲಿಯನ್​ಗಳು ಕಾಣಿಸಿಕೊಳ್ಳುವ ಬಗ್ಗೆ ಆಗಾಗ ಸುದ್ದಿಯಾದರೂ ಕೂಡ ಜನರಲ್ಲಿ ಅವುಗಳ ಅಸ್ತಿತ್ವದ ಪ್ರಶ್ನೆ ಆಗೇ ಉಳಿದಿದೆ. ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಕೂಡ ಏಲಿಯನ್​ಗಳ ಸಂಗತಿ​ ನಿಗೂಢವಾಗಿಯೇ ನಮ್ಮ ನಡುವೆ ಉಳಿದಿದೆ.

ಏಲಿಯನ್‌ ಮತ್ತು ಹಾರುವ ತಟ್ಟೆಗಳನ್ನು ಕಂಡಿರುವುದಾಗಿ ಕೆಲವರು ವಾದಿಸುತ್ತಾರೆ. ಇನ್ನು ಕೆಲವರು ಇವುಗಳ ಇರುವಿಕೆ ಸುಳ್ಳು ಎನ್ನುತ್ತಾರೆ. ಆಗಾಗ ಭೂಮಿ ಹಾಗೂ ಆಕಾಶದ ಮೇಲೆ ಕೆಲವು ವಿಚಿತ್ರ ವಸ್ತುಗಳು ಕಾಣಿಸಿಕೊಂಡಿವೆ. ಇವುಗಳನ್ನು ಯುಎಫ್​ಒ (ಯೂನಿಫೈಡ್​ ಫ್ಲೈಯಿಂಗ್​ ಆಬ್ಜೆಕ್ಟ್​) ಎಂದು ಕರೆಯಲಾಗುತ್ತದೆ. ಈ ಯುಎಫ್​ಒಗಳು ಅನ್ಯಗ್ರಹ ಜೀವಿಗಳ ವಾಹನ ಎಂದೂ ಹೇಳಲಾಗುತ್ತದೆ. ಇವುಗಳನ್ನು ಕಂಡಿದ್ದಾಗಿ ಆಗಾಗ ಕೆಲವರು ಹೇಳುತ್ತಿರುತ್ತಾರೆ. ಈ ನಿಗೂಢತೆಯ ನಡುವೆ ಇಸ್ರೋ ಅಧ್ಯಕ್ಷ ಎಸ್​. ಸೋಮನಾಥ್​ ಅವರು ಈ ಹಿಂದೆ ಹೇಳಿದ್ದ ಹೇಳಿಕೆ ಇದೀಗ ಮತ್ತೆ ವೈರಲ್​ ಆಗುತ್ತಿದೆ.

ಈ ಹಿಂದೆ ಸೋಮನಾಥ್​ ಅವರು ಯೂಟ್ಯೂಬರ್​ ರಣವೀರ್ ಅಲ್ಲಾಬಾಡಿಯಾ ಪಾಡ್​ಕಾಸ್ಟ್​ನಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ವಿಶ್ವದಲ್ಲಿ ಖಂಡಿತವಾಗಿಯೂ ಅನ್ಯಗ್ರಹ ಜೀವಿಗಳಿವೆ. ಅವರ ನಾಗರಿಕತೆಗಳು ವಿಭಿನ್ನ ರೀತಿಯಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆಯಿದೆ ಎಂದು ಸೋಮನಾಥ್ ಹೇಳಿದ್ದರು. ಏಲಿಯನ್​ಗಳಿಗೆ ಸಂಬಂಧಿಸಿದ ಚರ್ಚೆಗಳ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದರು.

ಏಲಿಯನ್​ಗಳು ನಮ್ಮ ಗ್ರಹದಲ್ಲಿ ಇಳಿದಿದ್ದಾರೆಯೇ? ಎಂದು ಪಾಡ್‌ಕಾಸ್ಟರ್ ರಣವೀರ್ ಅಲ್ಲಾಬಾಡಿಯಾ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸೋಮನಾಥ್, ಹೌದು, ಅನ್ಯಗ್ರಹ ಜೀವಿಗಳು ನಮ್ಮ ಭೂಮಿಗೆ ಭೇಟಿ ನೀಡಿದ್ದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಅದಕ್ಕೆ ತನ್ನ ಬಳಿ ಯಾವುದೇ ಪುರಾವೆ ಇಲ್ಲ. ಏಲಿಯನ್​ಗಳು ಇರುವುದು ಸತ್ಯ. ಅವರು ತಂತ್ರಜ್ಞಾನದಲ್ಲಿ ನಮಗಿಂತ ಮುಂದಿದ್ದಾರೆ ಎಂದು ಹೇಳಿದರು.

ನೂರು ವರ್ಷಗಳ ಹಿಂದೆ ನಮ್ಮ ತಾಂತ್ರಿಕ ಸಾಮರ್ಥ್ಯಗಳು ಬಹಳ ಸೀಮಿತವಾಗಿತ್ತು. ನಮ್ಮ ನಾಗರಿಕತೆಯು ವರ್ಷಗಳಲ್ಲಿ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದಂತೆಯೇ, ವಿಶ್ವದಲ್ಲಿನ ಇತರ ನಾಗರಿಕತೆಗಳು ಸಹ ವಿವಿಧ ಹಂತಗಳಲ್ಲಿರಬಹುದು ಎಂದು ಸೋಮನಾಥ್ ಹೇಳಿದರು. ಅಲ್ಲದೆ, ಭೂಮ್ಯತೀತ ನಾಗರಿಕತೆಗಳು ವಿಶ್ವದಲ್ಲಿ ತಮ್ಮದೇ ಆದ ಹಂತಗಳಲ್ಲಿ ಅಸ್ತಿತ್ವದಲ್ಲಿರಬಹುದು ಎಂದು ಸೋಮನಾಥ್​ ಅವರು ನಂಬುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net