ಬಘೀರ 2 ಬರಬೇಕು ಅಂದರೆ...! ಸೂಪರ್​ಹೀರೋ ಸಿನಿಮಾ ಬಗ್ಗೆ ನಟ ಶ್ರೀಮುರಳಿ ಮಾತು

dcvasdcasdcas
Published on

| ಹರ್ಷವರ್ಧನ್​ ಬ್ಯಾಡನೂರು

ಕನ್ನಡದಲ್ಲಿ ಸೂಪರ್​ಹೀರೋ ಸಿನಿಮಾಗಳು ಬಂದಿರುವುದು ತೀರಾ ಅಪರೂಪ. ಅಂಬರೀಷ್​ ಅಭಿನಯದ "ಜೈ ಕರ್ನಾಟಕ', ನಿಖಿಲ್​ ಕುಮಾರ್​ ನಾಯಕನಾಗಿದ್ದ "ಜಾಗ್ವಾರ್​'ನಂತಹ ಕೆಲವೇ ಚಿತ್ರಗಳು ಬಂದಿವೆ. ಇದೀಗ ಡಾ. ಸೂರಿ ನಿರ್ದೇಶನದ ಶ್ರೀಮುರಳಿ, ರುಕ್ಮಿಣಿ ವಸಂತ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಬಘೀರ' ಕೂಡ ಈ ಸಾಲಿಗೆ ಸೇರಲಿದೆ. ನಾಳೆ ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಲಿದ್ದು, ಇದೇ ಖುಷಿಯಲ್ಲಿ ಶ್ರೀಮುರಳಿ ವಿಜಯವಾಣಿ ಜತೆ ಚಿತ್ರ, ಪಾತ್ರ, ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಸವಾಲುಗಳ ಬಘೀರ

ಶ್ರೀಮುರಳಿ ಈ ಚಿತ್ರದಲ್ಲಿ ಖಾಕಿಯಲ್ಲಿ ಖಡಕ್​ ಪೊಲೀಸ್​ ಅಧಿಕಾರಿಯಾಗಿ ಹಾಗೂ ಇರುಳಿನಲ್ಲಿ ದುರುಳರ ಬೇಟೆಯಾಡುವ ಬಘೀರನಾಗಿ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ದೈಹಿಕವಾಗಿ ಮತ್ತು ಮಾನಸಿಕವಾಗಿ ಈ ಚಿತ್ರಕ್ಕೆ ನೂರಕ್ಕೆ ನೂರು ಶ್ರಮ ಹಾಕಿದ್ದೇನೆ. ಸುಮಾರು ಮೂರು ವರ್ಷಗಳ ಸಮಯ ನೀಡಿದ್ದೇನೆ. ಪಾತ್ರಕ್ಕಾಗಿ ಸಿದ್ಧತೆ ಪ್ರಾರಂಭಿಸಿದ ಮೂನಾಲ್ಕು ತಿಂಗಳ ಕಾಲ ನಾನು ನನ್ನ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗಿರಲಿಲ್ಲ. ಲುಕ್​ ರಿವೀಲ್​ ಮಾಡಬಾರದೆಂದು ನಿರ್ದೇಶಕರು ತಿಳಿಸಿದ್ದ ಕಾರಣ ಒಂದೂವರೆ ವರ್ಷಗಳ ಕಾಲ ಹೊರಗೇ ಬಂದಿರಲಿಲ್ಲ. ಹೊರಗೆಲ್ಲೂ ಬರುತ್ತಿಲ್ಲ ಅಂತ ತುಂಬ ಜನ ಬೇಸರ ಮಾಡಿಕೊಂಡಿದ್ದರು. ಶೂಟಿಂಗ್​ ಸಮಯದಲ್ಲಾದ ಪೆಟ್ಟುಗಳು, ವಯಕ್ತಿಕ ಜೀವನದಲ್ಲಾದ ಬೆಳವಣಿಗೆಗಳಿಂದಾಗಿ 36 ತಿಂಗಳಲ್ಲಿ ನಾಲ್ಕು ತಿಂಗಳು ಬ್ರೇಕ್​ ಪಡೆದಿರಬಹುದು. ಒಮ್ಮೊಮ್ಮೆ ಒತ್ತಡದಲ್ಲಿ ನನ್ನನ್ನು ನಾನೇ ಮರೆತುಬಿಡುತ್ತಿದ್ದೆ. ಪ್ರತಿದಿನ ನಾಲ್ಕು ತಾಸು ವರ್ಕೌಟ್​ ಮಾಡುತ್ತಿದ್ದೆ. ಇದನ್ನೇ ತಿನ್ನಬೇಕು, ಇಷ್ಟೇ ಸೇವಿಸಬೇಕು ಅಂತ ಕಟ್ಟುನಿಟ್ಟಿನ ಡಯಟ್​ ಪಾಲಿಸುತ್ತಿದ್ದೆ. ಸ್ವೀಟ್ಸ್​, ಐಸ್​ಕ್ರೀಮ್​, ಜಂಕ್​ ಫುಡ್​ ನನ್ನ ಫೇವರೇಟ್​. ಆದರೆ, ಅದೆಲ್ಲವನ್ನು ಬಿಟ್ಟು, ಸಂಪೂರ್ಣ ಗಮನ ಚಿತ್ರದ ಮೇಲೆ ಹರಿಸಿದ್ದೆ. ಪ್ರೇಕ್ಷಕರಿಗೆ ಒಂದು ಸರ್​ಪೆಸ್​ ನೀಡಬೇಕು ಅನ್ನೋದು ನಮ್ಮ ಉದ್ದೇಶವಾಗಿತ್ತು. ಹೀಗಾಗಿ ಹಾಕಿರುವ ಅಷ್ಟೂ ಶ್ರಮದ ಬಗ್ಗೆ ನನಗೆ ಬೇಸರವಿಲ್ಲ' ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಶ್ರೀಮುರಳಿ.

ಡಾಟ್ಸ್​ ಕನೆಕ್ಟ್​ ಆಗಬೇಕು...

ಕನ್ನಡದಲ್ಲಿ ಸೂಪರ್​ಹೀರೋ ಚಿತ್ರಗಳು ಯಾಕೆ ಕಡಿಮೆ ಎಂಬುದರ ಬಗ್ಗೆ ಶ್ರೀಮುರಳಿ, "ಇಂತಹ ಸಿನಿಮಾಗಳನ್ನು ಕಡಿಮೆ ಬಜೆಟ್​ನಲ್ಲಿ ನಿರ್ಮಿಸಲು ಆಗುವುದಿಲ್ಲ. ಆ ಬಜೆಟ್​ ನೀಗಿಸುವಂತಹ ನಿರ್ಮಾಪಕರು ಮೊದಲು ಸಿಗಬೇಕು. ನಂತರ ಪಾತ್ರಗಳಿಗೆ ಕಲಾವಿದರು ಹೊಂದಬೇಕು. ಅವರನ್ನು ಜನ ಒಪ್ಪಿಕೊಳ್ಳಬೇಕು. ಉತ್ತಮ ರೀತಿಯಲ್ಲಿ ಸಿನಿಮಾ ಮೂಡಿಬರಬೇಕು. ಹೆಚ್ಚು ಜನರಿಗೆ ಚಿತ್ರ ರೀಚ್​ ಆಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಸಿನಿಮಾಗಳನ್ನು ಪ್ರೇಕ್ಷಕರು ನೋಡಬೇಕು. ಹೀಗೆ ಇದೊಂದು ಚೇನ್​ನಂತೆ. ಎಲ್ಲ ಡಾಟ್​ಗಳೂ ಸೇರಿದರೆ ಮಾತ್ರ ಇಂತಹ ಸಿನಿಮಾಗಳು ಆಗಲು ಸಾಧ್ಯ' ಎನ್ನುತ್ತಾರೆ.

ಭಾಗ 2 ಬರುತ್ತಾ?

ಇತ್ತೀಚಿನ ದಿನಗಳಲ್ಲಿ ಸೀಕ್ವೆಲ್​, ಪ್ರಿಕ್ವೆಲ್​ಗಳು ಜತೆಗೆ ಸಿನಿಮ್ಯಾಟಿಕ್​ ಯೂನಿವರ್ಸ್​ಗಳು ಪ್ರಾರಂಭವಾಗಿವೆ. ಅದೇ ರೀತಿ "ಬಘೀರ' ಕಥೆ ಮುಂದುವರಿಯುವ ಬಗ್ಗೆ ಶ್ರೀಮುರಳಿ, ""ಬಘೀರ 2' ಮಾಡಲು ನನಗಂತೂ ಇಷ್ಟವಿದೆ. ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ, ಸೀಕ್ವೆಲ್​ ಬಗ್ಗೆ ಈಗ ಮಾತನಾಡುವುದು ತುಂಬ ಬೇಗ ಅನ್ನಿಸುತ್ತೆ. ಕಥೆ ಮುಂದುವರಿಯಲು ಅವಕಾಶವಂತೂ ಇದೆ. ಏಕೆಂದರೆ "ಬಘೀರ' ಒಂದು ವಿಭಿನ್ನ ಪ್ರಪಂಚಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುವಂತಹ ಸಿನಿಮಾ. ಈ ಚಿತ್ರ, ಪಾತ್ರಗಳು, ಇದರ ಆಲೋಚನೆ, ಯೋಚಿಸುವ ರೀತಿ... ಎಲ್ಲವೂ ಜನರಿಗೆ ಕನೆಕ್ಟ್​ ಆಗಬೇಕು. ಈ ಸಿನಿಮಾ ಜನರಿಗೆ ಇಷ್ಟವಾದರೆ, ಬಹುಶಃ ಸೀಕ್ವೆಲ್​ ಬರಬಹುದು. ಇದು ಒಂದು ಆಲೋಚನೆ ಇಟ್ಟುಕೊಂಡು ಮಾಡಿರುವ ಸಿನಿಮಾ. ನಾವು ಈ ಕಥೆ ಹೇಳಿರುವ ರೀತಿಯನ್ನು ಜನ ಅರ್ಥ ಮಾಡಿಕೊಂಡುಬಿಟ್ಟರೆ ಅಲ್ಲಿಗೆ ಸಿನಿಮಾ ಗೆದ್ದಂತೆ. ಹೀಗಾಗಿಯೇ ಎಲ್ಲವನ್ನೂ ಅಭಿಮಾನಿಗಳಿಗೆ ಬಿಡುತ್ತಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ.

"ಬಘೀರ'ನ ಭರವಸೆ

"ಇಂತಹ ಕಥೆಯನ್ನು ಈ ರೀತಿ ನೀವು ನೋಡಿರಲ್ಲ' ಎನ್ನುವ ಶ್ರೀಮುರಳಿ, "ನಮಗೆ ಹೇಗೆ "ಬಘೀರ' ಒಂದೊಳ್ಳೆ ಸಿನಿಮಾ ಮಾಡಿದ ಸಮಾಧಾನ ನೀಡುತ್ತಿದೆಯೋ, ನಿಮಗೂ ಒಂದೊಳ್ಳೆ ಸಿನಿಮಾ ನೋಡಿದ ಅನುಭವ ನೀಡುತ್ತದೆ. ತಾಂತ್ರಿಕ ವಿಷಯಗಳಲ್ಲಿ, ನಟನೆಯಲ್ಲಿ, ಮೇಕಿಂಗ್​, ಆ್ಯಕ್ಷನ್​, ಡ್ರಾಮಾ ಯಾವ ವಿಷಯದಲ್ಲೂ ಸಿನಿಮಾ ಹಿಂದೆ ಬಿದ್ದಿಲ್ಲ. ನನ್ನನ್ನು ಇಷ್ಟು ್ಲೆಕ್ಸಿಬಲ್​ ಆಗಿ ಈ ಹಿಂದೆ ನೀವು ನೋಡಿರಲ್ಲ' ಎಂದು ಚಿತ್ರದ ಬಗ್ಗೆ ಭರವಸೆ ವ್ಯಕ್ತಪಡಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net