ದೀಪಾವಳಿ ಸಿನಿಮಾವಳಿ! ಬೆಳಕಿನ ಹಬ್ಬದ ಬಳಿಕ ಬಿಗ್​ಬಜೆಟ್​ ಸ್ಟಾರ್​ ಚಿತ್ರಗಳ ಹಬ್ಬ...

zxcxccsx
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಈ ವರ್ಷ ಮಲಯಾಳಂ ಚಿತ್ರರಂಗ ಸಿನಿಮಾಗಳ ಯಶಸ್ಸಿನಿಂದ ಮಾತ್ರವಲ್ಲದೇ ವಿವಾದಗಳಿಂದಲೂ ಸದ್ದು ಮಾಡುತ್ತಿದೆ. ಆದರೆ, 2024ರಲ್ಲಿ ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಿಗೆ ಇದುವರೆಗೂ ದೊಡ್ಡ ಮಟ್ಟದ ಸಕ್ಸಸ್​ ದೊರೆತಿಲ್ಲ. ಇದೀಗ ದೀಪಾವಳಿ ಹಬ್ಬದ ಬಳಿಕ ಸ್ಯಾಂಡಲ್​ವುಡ್​, ಬಾಲಿವುಡ್​, ಕಾಲಿವುಡ್​ ಮತ್ತು ಟಾಲಿವುಡ್​ ಸಿನಿಮಾಗಳ ಸೌಂಡ್​ ಜೋರಾಗಿ ಕೇಳಿಸುವ ನಿರೀಕ್ಷೆ ಇದೆ. ದೊಡ್ಡ ಸ್ಟಾರ್​ಗಳ, ಬಿಗ್​ಬಜೆಟ್​ ಚಿತ್ರಗಳು ಸಾಲಾಗಿ ತೆರೆಗೆ ಬರಲು ರೆಡಿಯಾಗಿರುವುದೇ ಅದಕ್ಕೆ ಕಾರಣ.

ಕನ್ನಡಕ್ಕೆ ಹ್ಯಾಟ್ರಿಕ್​ ಹುಮ್ಮಸ್ಸು

ಕನ್ನಡದಲ್ಲಿ ಇದುವರೆಗೂ 170ಕ್ಕೂ ಅಧಿಕ ಸಿನಿಮಾಗಳು ರಿಲೀಸ್​ ಆಗಿವೆ. ಇದೇ ತಿಂಗಳ 11ರಂದು ರಿಲೀಸ್​ ಆದ ಪ್ಯಾನ್​ ಇಂಡಿಯಾ "ಮಾರ್ಟಿನ್​' ಸೇರಿ ಬಹುತೇಕ ಸಿನಿಮಾಗಳು ಬಾಕ್ಸಾಫಿಸಿನಲ್ಲಿ ದೊಡ್ಡ ಮಟ್ಟದ ಸದ್ದು ಮಾಡುವಲ್ಲಿ ಸೋತಿವೆ. ಆದರೆ, ಇದೇ ಗುರುವಾರ (ಅ. 31) ತೆರೆಗೆ ಬರಲಿರುವ ಶ್ರೀಮುರಳಿ, ರುಕ್ಮಿಣಿ ವಸಂತ್​ ಅಭಿನಯದ ಡಾ. ಸೂರಿ ನಿರ್ದೇಶನದ "ಬಘೀರ' ಪ್ರೇಕ್ಷಕರನ್ನು ಮತ್ತೆ ಥಿಯೇಟರ್​ಗಳಿಗೆ ಕರೆತರುವ ನಿರೀೆಯಿದೆ. ಬಳಿಕ ಶಿವರಾಜಕುಮಾರ್​ ನಟಿಸಿರುವ ನರ್ತನ್​ ಆ್ಯಕ್ಷನ್​-ಕಟ್​ ಹೇಳಿರುವ "ಭೈರತಿ ರಣಗಲ್​' ಇದೇ ನ. 15ರಂದು ಬಿಡುಗಡೆಯಾಗಲಿದ್ದು, ಬಳಿಕ ಉಪೇಂದ್ರ ನಟಿಸಿ, ನಿರ್ದೇಶಿಸಿರುವ "ಯುಐ' ಡಿ. 20ರಂದು ರಿಲೀಸ್​ ಆಗಲಿದೆ. ಈ ಮೂರು ಚಿತ್ರಗಳೂ ಬಾಕ್ಸಾಫಿಸಿನಲ್ಲಿ ಹ್ಯಾಟ್ರಿಕ್​ ಯಶಸ್ಸು ಸಾಧಿಸುವ ನಿರೀಕ್ಷೆ ಇದೆ.

ಬಾಲಿವುಡ್​ನಲ್ಲಿ ಆ್ಯಕ್ಷನ್​ ಪಟಾಕಿ

"ಸ್ತ್ರೀ 2', "ಮುಂಜ್ಯಾ' ಹೊರತುಪಡಿಸಿ ಬಾಲಿವುಡ್​ನಲ್ಲಿ ಈ ವರ್ಷ ದೊಡ್ಡ ಮಟ್ಟದ ಯಶಸ್ಸು ಕಂಡ ಚಿತ್ರಗಳು ಬೆರಳೆಣಿಕೆಯಷ್ಟೇ. ಅದರ ನಡುವೆಯೂ ನ. 1ರಂದು "ಭೂಲ್​ ಭುಲಯ್ಯಾ 3' ಮತ್ತು "ಸಿಂಂ ಅಗೇನ್​' ಸಿನಿಮಾಗಳು ರಿಲೀಸ್​ ಆಗುತ್ತಿದ್ದು, ಹಿಂದಿ ಚಿತ್ರರಂಗಕ್ಕೆ ಹೊಸ ವೇಗ ನೀಡುವ ನಿರೀೆ ಇದೆ. ಅನೀಸ್​ ಬಾಜ್ಮೀ ನಿರ್ದೇಶನದ, ಕಾರ್ತಿಕ್​ ಆರ್ಯನ್​, ಮಾಧುರಿ ದೀತ್​, ವಿದ್ಯಾ ಬಾಲನ್​, ತೃಪ್ತಿ ದಿಮ್ರಿ ನಟಿಸಿರುವ "ಭೂಲ್​ ಭುಲಯ್ಯಾ 3' ಹಾರರ್​ ಕಾಮಿಡಿ ಚಿತ್ರವಾಗಿದ್ದು, ಅಜಯ್​ ದೇವ್ಗನ್​, ಅಕ್ಷಯ್​ ಕುಮಾರ್​, ಟೈಗರ್​ ಶ್ರಾಫ್​, ದೀಪಿಕಾ ಪಡುಕೋಣೆ, ರಣವೀರ್​ ಸಿಂಗ್​, ಕರೀನಾ ಕಪೂರ್​ ನಟಿಸಿರುವ "ಸಿಂಘಂ ಅಗೇನ್​' ರೋಹಿತ್​ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿದೆ. ಈ ಎರಡು ಚಿತ್ರಗಳ ಬಳಿಕ ಡಿ. 25ರಂದು ವರುಣ್​ ಧವನ್​ ಅಭಿನಯದ ಆ್ಯಕ್ಷನ್​ ಸಿನಿಮಾ "ಬೇಬಿ ಜಾನ್​' ಮತ್ತು ಆಮಿರ್​ ಖಾನ್​ ನಟಿಸಿರುವ "ಸಿತಾರೆ ಜಮೀನ್​ ಪರ್​' ಬಿಡುಗಡೆಯಾಗಲಿವೆ.

ಕಾಲಿವುಡ್​ನಲ್ಲಿ ಕಂಗುವಾ ಹವಾ

ತಮಿಳು ಚಿತ್ರರಂಗ ಕೂಡ ಈ ವರ್ಷದಂತ್ಯದ ಸ್ಟಾಕ್​ ಕ್ಲಿಯರೆನ್ಸ್​ ಬಗ್ಗೆ ಎಲ್ಲಿಲ್ಲದ ನಿರೀಕ್ಷೆ ಇಟ್ಟುಕೊಂಡಿದೆ. ಇದೇ ಶುಕ್ರವಾರ (ಅ. 31) ಶಿವಕಾರ್ತಿಕೇಯನ್​, ಸಾಯಿ ಪಲ್ಲವಿ ನಟಿಸಿರುವ "ಅಮರನ್​' ರಿಲೀಸ್​ ಆಗಲಿದ್ದು, ನ. 14ರಂದು ಶಿವ ಆ್ಯಕ್ಷನ್​- ಕಟ್​ ಹೇಳಿರುವ ಸೂರ್ಯ, ಬಾಬಿ ಡಿಯೋಲ್​, ದಿಶಾ ಪಟಾನಿ ನಟಿಸಿರುವ ಬಹುನಿರೀತ "ಕಂಗುವಾ' ತೆರೆಗೆ ಬರಲಿದೆ. ಬಹುಕೋಟಿ ಬಜೆಟ್​ನಲ್ಲಿ ಮೂಡಿಬಂದಿರುವ ಪ್ಯಾನ್​ ಇಂಡಿಯಾ ಚಿತ್ರವಾದ ಕಾರಣ "ಕಂಗುವಾ' ಮೇಲೆ ಸಾಕಷ್ಟು ನಿರೀೆಯಿದ್ದು, ನಿರ್ಮಾಪಕ ಜ್ಞಾನವೇಲ್​ "ಸಿನಿಮಾ ಪಕ್ಕಾ 2000 ಕೋಟಿ ಗಳಿಕೆ ಮಾಡಲಿದೆ' ಎಂದು ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಬಳಿಕ ಡಿ. 20ರಂದು ವೆಟ್ರಿಮಾರನ್​ ನಿರ್ದೇಶನದ ವಿಜಯ್​ ಸೇತುಪತಿ, ಸೂರಿ ನಟಿಸಿರುವ "ವಿಡುತಲೈ 2' ರಿಲೀಸ್​ ಆಗಲಿದ್ದು, ಮೊದಲ ಭಾಗದ ಯಶಸ್ಸಿನಿಂದಾಗಿ ಈ ಸೀಕ್ವೆಲ್​ ಕೂಡ ಗಮನ ಸೆಳೆದಿದೆ.

ಟಾಲಿವುಡ್​ನಲ್ಲಿ ಲಕ್ಕಿ ಪುಷ್ಪರಾಜ್​!

ಟಾಲಿವುಡ್​ನಲ್ಲಿ "ಕಲ್ಕಿ 2898 ಎಡಿ', "ದೇವರ 1', "ಹನುಮಾನ್​', "ಗುಂಟೂರು ಕಾರಂ' ಸೇರಿ ಕೆಲ ಚಿತ್ರಗಳು ಬಾಕ್ಸಾಫಿಸಿನಲ್ಲಿ ಗೆದ್ದು ಬೀಗಿವೆ. ಆದರೆ, "ಈಗಲ್​', "ಆಪರೇಷನ್​ ವ್ಯಾಲಂಟೈನ್​', "ಸರಿಪೋದಾ ಶನಿವಾರಂ', "ಡಬಲ್​ ಇಸ್ಮಾರ್ಟ್​', "ಭೀಮ', "ದ ಫ್ಯಾಮಿಲಿ ಸ್ಟಾರ್​' ಸೇರಿ ಕೆಲ ನಿರೀತ ಸಿನಿಮಾಗಳು ಸೋತಿವೆ ಕೂಡ. ಈ ಸೋಲು -ಗೆಲುವುಗಳ ಲೆಕ್ಕಾಚಾರದಲ್ಲೇ ಈ ಶುಕ್ರವಾರ ತಾರಾಗಣ ಮತ್ತು ಟ್ರೇಲರ್​ ಮೂಲಕವೇ ಕುತೂಹಲ ಮೂಡಿಸಿರುವ ದುಲ್ಕರ್​ ಸಲ್ಮಾನ್​ ನಟಿಸಿರುವ "ಲಕ್ಕಿ ಭಾಸ್ಕರ್​' ತೆರೆಗೆ ಬರಲಿದೆ. ಆ ಬಳಿಕ ಡಿ. 5ರಂದು ಸುಕುಮಾರ್​ ನಿರ್ದೇಶನದ ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ಅಭಿನಯದ "ಪುಷ್ಪ 2: ದ ರೂಲ್​' ರಿಲೀಸ್​ ಆಗಲಿದೆ. ರಿಲೀಸ್​ಗೂ ಮುನ್ನವೇ 1000 ಕೋಟಿಗೂ ಹೆಚ್ಚು ಬಿಜಿನೆಸ್​ ಮಾಡಿದೆ ಎನ್ನಲಾಗಿರುವ "ಪುಷ್ಪ' ಸೀಕ್ವೆಲ್​ ಬಗ್ಗೆ ನಿರೀಕ್ಷೆ ಗರಿಗೆದರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net