

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಆಗಬೇಕು ಎಂದು ಬೆಳಗ್ಗೆಯಿಂದ ತಿಂಡಿ-ಊಟ ಬಿಟ್ಟು ಕಾದಿದ್ದ ಮಹಿಳೆಯೊಬ್ಬರು ಕೊನೆಗೂ ಸಿಎಂ ಭೇಟಿ ಸಾಧ್ಯವಾಗದೆ ಕಾದು ಕಾದು ಸುಸ್ತಾಗಿ ಕುಸಿದು ಬಿದ್ದ ಪ್ರಕರಣವೊಂದು ನಡೆದಿದೆ.
ಕಲಬುರಗಿ ಜಿಲ್ಲೆಯಲ್ಲಿ ಶಾಸಕ ಎಂ.ವೈ.ಪಾಟೀಲ ಅವರ ನಿವಾಸದ ಬಳಿ ಈ ಘಟನೆ ನಡೆದಿದೆ. ಇಲ್ಲಿನ ರಾಮಮಂದಿರ ಓಣಿಯ ನಿವಾಸಿ ಸಂಗೀತಾ ಹಾಗೂ ಕಾವೇರಿ ಎಂಬಿಬ್ಬರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಹವಾಲು ಸಲ್ಲಿಸಬೇಕು ಎಂದುಕೊಂಡು ಶಾಸಕ ಪಾಟೀಲರ ನಿವಾಸಕ್ಕೆ ಬಂದಿದ್ದರು.
ಬಡತನದಿಂದಾಗಿ ಜೀವನ ಸಾಗಿಸಲು ಕಷ್ಟವಾದ್ದರಿಂದ, ಸಿಎಂಗೆ ತಮ್ಮ ಅಹವಾಲು ಸಲ್ಲಿಸಿ, ಸರ್ಕಾರದಿಂದ ಸಹಾಯ ಕೋರುವ ಸಲುವಾಗಿ ಇವರಿಬ್ಬರು ಬಂದಿದ್ದರು. ಆದರೆ ಬೆಳಗ್ಗೆಯಿಂದ ಕಾದರೂ ಇವರಿಗೆ ಸಿಎಂ ಭೇಟಿ ಸಾಧ್ಯವಾಗಿರಲಿಲ್ಲ. ಸಿಎಂ ಸಿಗಲಿಲ್ಲ ಎಂದು ಬೇಸರದಿಂದ ಇಬ್ಬರೂ ದುಃಖಿತರಾಗಿದ್ದು, ಅವರಲ್ಲಿ ಸಂಗೀತ ಕುಸಿದು ಬಿದ್ದರು.