2000 ರೂ. ನೋಟು ಹಿಂಪಡೆ ವಿಚಾರ: ಆರ್​ಬಿಐನಿಂದ ಮತ್ತೆ ಮನವಿ; ಇಲ್ಲಿದೆ ವಿವರ..

Two Thousand Notes RBI
Published on

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) 2 ಸಾವಿರ ರೂ. ನೋಟುಗಳನ್ನು ಹಿಂಪಡೆಯುವ ಕುರಿತಂತೆ ಈಗಾಗಲೇ ಸುತ್ತೋಲೆ ಹೊರಡಿಸಿದ್ದು, ಇದೀಗ ಅದೇ ವಿಚಾರವಾಗಿ ಮತ್ತೆ ಮನವಿ ಮಾಡಿಕೊಂಡಿದೆ. ಎರಡು ಸಾವಿರ ರೂ. ನೋಟುಗಳ ವಾಪಸಾತಿ ಕುರಿತು ವಿವರ ನೀಡಿರುವ ಆರ್​​ಬಿಐ, ಸಾರ್ವಜನಿಕರಲ್ಲಿ ಇದೊಂದು ಮನವಿಯನ್ನೂ ಮಾಡಿಕೊಂಡಿದೆ.

ಎರಡು ಸಾವಿರ ರೂಪಾಯಿ ನೋಟುಗಳನ್ನು ಹಿಂಪಡೆಯುವುದಾಗಿ ಇದೇ ವರ್ಷ ಮೇ 19ರಂದು ಸುತ್ತೋಲೆ ಹೊರಡಿಸಿತ್ತು. 2023ರ ಮಾರ್ಚ್ 31ಕ್ಕೆ 3.62 ಲಕ್ಷ ಕೋಟಿ ರೂಪಾಯಿಯಷ್ಟಿದ್ದ 2 ಸಾವಿರ ರೂ ನೋಟುಗಳು ಮೇ 19ಕ್ಕೆ 3.56 ಲಕ್ಷ ಕೋಟಿ ರೂ.ಗೆ ಇಳಿದಿತ್ತು ಎಂದಿರುವ ಆರ್​ಬಿಐ, 2 ಸಾವಿರ ರೂ. ನೋಟುಗಳ ಸ್ಥಿತಿಗತಿ ಕುರಿತು ಇನ್ನೊಂದು ಅಪ್​ಡೇಟ್ ಹೊರಡಿಸಿದೆ.

ಆ ಪ್ರಕಾರ, ಇದೇ ಜು. 31ರ ಅಂಕಿ-ಅಂಶದಂತೆ ಎಲ್ಲ ಬ್ಯಾಂಕ್​ಗಳಿಗೆ ಒಟ್ಟು 3.14 ಲಕ್ಷ ಕೋಟಿ ಮೊತ್ತದ 2 ಸಾವಿರ ರೂ. ನೋಟುಗಳು ವಾಪಸ್ ಬಂದಿವೆ. ಅಂದರೆ ಮೇ 19ರ ವರೆಗೆ ಹೊರಗಡೆ ಚಲಾವಣೆಯಲ್ಲಿದ್ದ 2 ಸಾವಿರ ರೂ. ನೋಟುಗಳ ಪೈಕಿ ಶೇ. 88 ಬ್ಯಾಂಕ್​ಗೆ ಮರಳಿಸಲ್ಪಟ್ಟಿವೆ. ಅರ್ಥಾತ್​, 0.42 ಲಕ್ಷ ಕೋಟಿ ರೂ. ಮೊತ್ತದ 2 ಸಾವಿರ ರೂ. ನೋಟುಗಳು ಇನ್ನೂ ಚಲಾವಣೆಯಲ್ಲಿವೆ.

ವಾಪಸ್​ ಬಂದಿರುವ ನೋಟುಗಳ ಪೈಕಿ ಶೇ. 87 ಠೇವಣಿ ರೂಪದಲ್ಲಿ ಹಾಗೂ ಶೇ. 13 ವಿನಿಮಯ ರೂಪದಲ್ಲಿ ಸಂಗ್ರಹಗೊಂಡಿವೆ. ಅದಾಗ್ಯೂ ಇನ್ನೂ 0.42 ಲಕ್ಷ ಕೋಟಿ ರೂ. ಮೊತ್ತದ 2 ಸಾವಿರ ರೂ. ನೋಟುಗಳು ಚಲಾವಣೆಯಲ್ಲಿದ್ದು, ಅವುಗಳೂ ಬ್ಯಾಂಕ್​ಗೆ ಮರಳಬೇಕಾಗಿವೆ. ಹೀಗೆ 2 ಸಾವಿರ ರೂ. ನೋಟು ಹಿಂದಿರುಗಿಸಲು ಸೆ. 30 ಕಡೇ ದಿನವಾಗಿದ್ದು, ಕೊನೆಯ ಹಂತದ ಗಡಿಬಿಡಿ ಜನಜಂಗುಳಿಯನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕರು ಆದಷ್ಟು ಬೇಗ 2 ಸಾವಿರ ರೂ. ನೋಟುಗಳನ್ನು ಬ್ಯಾಂಕ್​ಗಳಿಗೆ ಹಿಂದಿರುಗಿಸಬೇಕು ಎಂದು ಆರ್​ಬಿಐ ಮನವಿ ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net