ನಾದಿನಿಯೊಂದಿಗೆ ಜಗಳವಾಡಿ 4 ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

sucide
Published on

ನೋಯ್ಡಾ: ಗಂಡ ಮನೆಯಲ್ಲಿಲ್ಲದ ಸಮಯದಲ್ಲಿ ಗಂಡನ ತಂಗಿಯೊಂದಿಗೆ ಜಗಳವಾಡಿದ ಮಹಿಳೆಯೊಬ್ಬಳು, ತನ್ನ ಮಗುವಿನೊಂದಿಗೆ 17ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಇದೀಗ ನಾದಿನಿಯೂ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಳ್ಳುವಂತಾಗಿದೆ.

ಶನಿವಾರ ಬೆಳಗ್ಗೆಯೇ ಈ ಘಟನೆ ನಡೆದಿದೆ. 28 ವರ್ಷದ ಮಹಿಳೆಯ ಗಂಡ ತನ್ನೂರಿಗೆ ತೆರಳಿದ್ದರಂತೆ. ಆತನ ತಂಗಿ ವಿದ್ಯಾಭ್ಯಾಸ ಮಾಡುತ್ತಿದ್ದು, ನೋಯ್ಡಾದಲ್ಲಿ ಹಾಸ್ಟೆಲ್​ನಲ್ಲಿ ಇರುತ್ತಿದ್ದಳು. ಅಣ್ಣ ಊರಿಗೆ ಹೋದ ಕಾರಣ, ಅತ್ತಿಗೆ ಮತ್ತು ಅಣ್ಣನ ಮಗುವಿನೊಂದಿಗೆ ಇರುವುದಕ್ಕಾಗಿ ಆಕೆ ಅಣ್ಣನ ಮನೆಗೆ ಬಂದಿದ್ದಾಳೆ. ಆದರೆ ಅತ್ತಿಗೆ ಮತ್ತು ನಾದಿನಿಯ ಮಧ್ಯೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಇದರಿಂದ ಮನನೊಂದ ಅತ್ತಿಗೆ ಮಗುವಿನೊಂದಿಗೆ ಕೆಳಕ್ಕೆ ಹಾರಿದ್ದಾಳೆ. ಪೊಲೀಸರು ಸ್ಥಳಕ್ಕೆ ತೆರಳುವಾಗ ಜೀವವಿತ್ತಾದರೂ, ಆಸ್ಪತ್ರೆಗೆ ದಾಖಲಿಸುವುದರೊಗೆ ಪ್ರಾಣ ಹಾರಿಹೋಗಿದೆ.

ಘಟನೆಯ ವಿವರ ಪಡೆಯುವುದಕ್ಕೆ ನಾದಿನಿಯನ್ನು ಪ್ರಶ್ನಿಸೋಣವೆಂದರೆ ಇದೀಗ ಆಕೆಯ ಸ್ಥಿತಿಯೂ ಗಂಭೀರವಾಗಿದೆ. ಆಕೆಯ ಮೈಯೆಲ್ಲ ಸುಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಗಳಕ್ಕೆ ಕಾರಣವೇನು? ಅತ್ತಿಗೆ ಸಾವನ್ನು ನೋಡಿ ನಾದಿನಿಯೂ ಆತ್ಮಹತ್ಯೆಗೆ ಪ್ರಯತ್ನ ಪಟ್ಟಳೆ ಎನ್ನುವ ವಿಚಾರಗಳು ತನಿಖೆಯಿಂದ ತಿಳಿದುಬರಬೇಕಿದೆ. ಸದ್ಯ ನಾದಿನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net