More

    ಮಕ್ಕಳ ರಕ್ಷಣೆಗೆ ನೂರೆಂಟು ಸವಾಲು, ಸಾರ್ವಜನಿಕರಿಂದ ಪ್ರತಿರೋಧ, ವಾಹನ ಸೌಲಭ್ಯವಿಲ್ಲದೆ ಪರದಾಟ

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ಜಿಲ್ಲೆಯಲ್ಲಿ ಬಾಲಕಾರ್ಮಿಕರ ರಕ್ಷಣೆ ಕಾರ್ಯಾಚರಣೆಯಲ್ಲಿ ತೊಡಗಿರುವ ವಿವಿಧ ಇಲಾಖೆಗಳ ಸಿಬ್ಬಂದಿಗೆ ನೂರೆಂಟು ಸವಾಲು ಎದುರಾಗಿವೆ. ಮಕ್ಕಳನ್ನು ರಕ್ಷಿಸಲು ಬೆವರು ಸುರಿಸುತ್ತಿರುವ ಸಿಬ್ಬಂದಿ ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗುತ್ತಿದ್ದಾರೆ. ಯಾವ ಕ್ಷಣದಲ್ಲಿ ಯಾವ ಅನಾಹುತ ಎದುರಾಗಬಹುದೋ ಎಂಬ ಆತಂಕವೂ ಕಾಡುತ್ತಿದೆ.

    ಹೌದು! ಕರೊನಾ ಕಾರಣದಿಂದ ಶಾಲೆಗಳು ಪುನರಾರಂಭವಾಗಿಲ್ಲ. ಏತನ್ಮಧ್ಯೆ ಅನೇಕ ಮಕ್ಕಳು ಬಾಲಕಾರ್ಮಿಕರಾಗಿ ಹಲವು ಕಡೆಗಳಲ್ಲಿ ದುಡಿಮೆಗೆ ನಿಂತಿದ್ದಾರೆ. ಇದರ ನಡುವೆ ಇಂಥ ಮಕ್ಕಳನ್ನು ರಕ್ಷಿಸಿ ಪಾಲಕರಲ್ಲಿ ಅರಿವು ಮೂಡಿಸುವ ಕಾರ್ಯಾಚರಣೆಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಶಿಕ್ಷಣ ಇಲಾಖೆ ಜಂಟಿ ಕಾರ್ಯಾಚರಣೆಗಿಳಿದಿದೆ. ಕಾರ್ಯಾಚರಣೆಯಲ್ಲಿ ಯಶ ಕಂಡಿರುವ ಸಿಬ್ಬಂದಿ ಈಗಾಗಲೇ ಜಿಲ್ಲೆಯಲ್ಲಿ 8ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ್ದಾರೆ. ಆದರೆ ಈ ರಕ್ಷಣಾ ಕಾರ್ಯಾಚರಣೆ ವೇಳೆ ಸಿಬ್ಬಂದಿ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ.

    ಕದನಕ್ಕಿಳಿಯುವ ಜನ: ವಿವಿಧ ಇಲಾಖೆ ಸಿಬ್ಬಂದಿ ಜಂಟಿಯಾಗಿದ್ದರೂ ಮಕ್ಕಳನ್ನು ರಕ್ಷಿಸುವ ವೇಳೆ ಸ್ಥಳೀಯರು ಅಧಿಕಾರಿಗಳ ವಿರುದ್ಧ ಕದನಕ್ಕೆ ಬರುತ್ತಿದ್ದಾರೆ. ಮಹಿಳೆಯರೂ ಸೇರಿ ಊರಿನ ಮುಖಂಡರು ಅಧಿಕಾರಿಗಳ ವಿರುದ್ಧ ವಾಗ್ವಾದಕ್ಕೆ ಇಳಿಯುತ್ತಾರೆ. ಕೆಲವು ವೇಳೆ ತಳ್ಳಾಟ ನೂಕಾಟದಂಥ ಪರಿಸ್ಥಿತಿಯೂ ಎದುರಾಗುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಎಷ್ಟೇ ತಿಳಿಹೇಳಿದರೂ ಅವರು ಅವರದ್ದೇ ಆದ ವಾದ ಮಂಡಿಸುತ್ತಾರೆ. ಮಕ್ಕಳನ್ನು ಮುಟ್ಟಲೂ ಬಿಡುವುದಿಲ್ಲ. ಇದರೊಂದಿಗೆ ಬಾಲಕಾರ್ಮಿಕರನ್ನು ನೇಮಿಸಿಕೊಂಡಿರುವ ಮಾಲೀಕರ ಪರವಾಗಿ ವಕಾಲತ್ತು ವಹಿಸುತ್ತಾರೆ. ಈ ವೇಳೆ ನೂರಾರು ಮಂದಿ ಜಮಾಯಿಸುವುದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ನಿವ್ಯಾರು ಮೊದಲು ಹೇಳಿ: ಅನೇಕ ಕಾರ್ಯಾಚರಣೆಯಲ್ಲಿ ಪೊಲೀಸರು ಇರುವುದಿಲ್ಲ, ಕೆಲವು ವೇಳೆ ಹಿರಿಯ ಅಧಿಕಾರಿಗಳಿಲ್ಲದೆ ನಾಮ್ ಕೇ ವಾಸ್ತೆ ಎಂಬಂತೆ ಒಂದಿಬ್ಬರು ಪೇದೆಗಳು ಇರುತ್ತಾರೆ. ಇದರಿಂದ ಇತರ ಇಲಾಖೆ ಅಧಿಕಾರಿಗಳನ್ನು ಜನ ಅನುಮಾನದಿಂದ ಕಾಣುತ್ತಾರೆ. ಮಕ್ಕಳ ರಕ್ಷಣೆಗೆ ಬಂದಿದ್ದೇವೆ ಎಂದರೆ ನಂಬುವುದೇ ಇಲ್ಲ. ನೀವ್ಯಾರು ಮೊದಲು ಹೇಳಿ ನಮ್ಮ ಮಕ್ಕಳ ವಿಷಯ ನಿಮಗ್ಯಾಕೆ ಎಂಬ ಆಕ್ರೋಶದ ನುಡಿ ಎದುರಿಸಬೇಕಾಗಿದೆ.

    ವಾಹನಗಳಿಲ್ಲದೆ ಪರದಾಟ: ಮಕ್ಕಳ ರಕ್ಷಣಾ ಕಾರ್ಯಾಚರಣೆ ಹೊರಟ ಸಿಬ್ಬಂದಿಗೆ ಇಲಾಖೆಗಳಿಂದ ಸಮರ್ಪಕವಾದ ವಾಹನಗಳ ವ್ಯವಸ್ಥೆ ಇಲ್ಲ, ಕೆಲವೊಂದು ಸಿಬ್ಬಂದಿ ದ್ವಿಚಕ್ರ ವಾಹನ ಮತ್ತಿತರ ಖಾಸಗಿ ವಾಹನಗಳನ್ನು ಬಳಸಬೇಕಾದ ಅನಿವಾರ್ಯತೆ ಇದೆ. ಇದರಿಂದ ಮಕ್ಕಳನ್ನು ರಕ್ಷಿಸಿ ಅವರನ್ನು ಸುರಕ್ಷಿತವಾಗಿ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಕೊಡುವುದು ಕಷ್ಟಸಾಧ್ಯವಾಗಿದೆ ಎಂಬ ಮಾತು ಕೇಳಿಬಂದಿದೆ.

    ಕರೊನಾ ಪಾಲನೆ ಸವಾಲು: ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ ಅವರೊಂದಿಗೆ ಸಂಭಾಷಣೆ ನಡೆಸುವ ವೇಳೆ ನೂರಾರು ಮಂದಿ ಜಮಾಯಿಸುವುದರಿಂದ ಕರೊನಾ ನಿಯಮ ಪಾಲನೆಯೂ ಕಷ್ಟವಾಗುತ್ತಿದೆ. ಸ್ಥಳೀಯರು ಮಾಸ್ಕ್ ಧರಿಸಿರುವುದಿಲ್ಲ, ಪರಸ್ಪರ ಅಂತರ ಕಾಯ್ದುಕೊಳ್ಳುವುದಿಲ್ಲ. ಇದರಿಂದ ಕರೊನಾತಂಕದ ನಡುವೆ ಕಾರ್ಯಾಚರಣೆ ನಡೆಸಬೇಕಾಗಿದೆ ಎಂದು ಸಿಬ್ಬಂದಿ ಅಲವತ್ತುಗೊಂಡಿದ್ದಾರೆ.

    ಪೊಲೀಸ್ ಸಿಬ್ಬಂದಿ ಹೆಚ್ಚಿಸಬೇಕು: ರಕ್ಷಣಾ ಕಾರ್ಯದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ಇರಬೇಕು, ಹಿರಿಯ ಪೊಲೀಸ್ ಅಧಿಕಾರಿಗಳಿದ್ದರೆ ಜನರನ್ನು ನಿಯಂತ್ರಿಸಲು ಸಾಧ್ಯ. ಅಲ್ಲದೆ ಪೊಲೀಸ್ ವಾಹನವಿದ್ದರೆ ಸಾರ್ವಜನಿಕರು ಸಹಕರಿಸುತ್ತಾರೆ. ಯಾವುದೇ ಸಮವಸವಿಲ್ಲದೆ ಕಾರ್ಯಾಚರಣೆಗಿಳಿಯುವುದು ಬೆಂಕಿಯೊಂದಿಗೆ ಸರಸವಾಡಿದಂತಿದೆ ಎಂಬುದು ಬಹುತೇಕ ಸಿಬ್ಬಂದಿ ಅಭಿಪ್ರಾಯವಾಗಿದೆ.

    ಮಕ್ಕಳ ಮನವೊಲಿಸುವುದು ದುಸ್ಸಾಹಸ: ಒಂದೆಡೆ ಪಾಲಕರು ಹಾಗೂ ಸಾರ್ವಜನಿಕರ ಮನವೊಲಿಸುವ ಸಾಹಸ ನಡೆಸುವ ಸಿಬ್ಬಂದಿಗೆ ರಕ್ಷಣೆ ಮಾಡಿದ ಮಕ್ಕಳನ್ನು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯುವುದು ದುಸ್ಸಾಹಸದ ಕೆಲಸವಾಗಿದೆ. ಸಿಬ್ಬಂದಿಯೊಂದಿಗೆ ತೆರಳಲು ಹಿಂದೇಟು ಹಾಕುವ ಮಕ್ಕಳು ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಕೆಲವರು ಕೈಯಿಂದ ಬಿಡಿಸಿಕೊಂಡು ಓಡಲು ಯತ್ನಿಸುತ್ತಾರೆ. ಅತ್ತು ಕರೆದು ರಂಪ ಮಾಡುತ್ತಾರೆ ಇವರನ್ನು ಸುಧಾರಿಸುವಷ್ಟರಲ್ಲೇ ಸಿಬ್ಬಂದಿ ಹೈರಾಣಾಗುವಂತಾಗಿದೆ.

    ವಿವಿಧ ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸುವುದರಿಂದ ಎಲ್ಲ ಇಲಾಖೆಯ ವಾಹನಗಳನ್ನು ಬಳಸಲು ಅವಕಾಶವಿದೆ. ಅವಶ್ಯಕತೆ ಇದ್ದರೆ ಮತ್ತಷ್ಟು ವಾಹನ ಬಳಸಬಹುದು, ಹೆಚ್ಚಿನ ಪೊಲೀಸ್ ಸಿಬ್ಬಂದಿ ಬಳಸಲು ಸೂಚನೆ ನೀಡಲಾಗುವುದು, ಬಾಲಕಾರ್ಮಿಕರ ಪದ್ಧತಿ ನಿರ್ಮೂಲನೆಗೆ ಸಾರ್ವಜನಿಕರು ಸಹಕರಿಸಬೇಕು.
    ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts