

ಮುಂಬೈ: ಕರೊನಾ ಭೀತಿಯಿಂದಾಗಿ ಮುಂದಿನ ದಿನಗಳಲ್ಲಿ ಚೆಂಡಿನ ಮೇಲೆ ಎಂಜಲು ಹಚ್ಚಬಾರದು ಎಂದು ನಿರ್ಬಂಧ ವಿಧಿಸಿರುವುದರಿಂದ ಟೆಸ್ಟ್ ಪಂದ್ಯಗಳಲ್ಲಿ 50 ಅಥವಾ 55 ಓವರ್ ಆಟದ ಬಳಿಕ 2ನೇ ಹೊಸ ಚೆಂಡು ನೀಡಬೇಕೆಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸಲಹೆ ನೀಡಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಮಾತುಕತೆ ನಡೆಸುತ್ತಿದ್ದ ವೇಳೆ ಸಚಿನ್ ಈ ಸಲಹೆ ನೀಡಿದ್ದು, ವೇಗದ ಬೌಲರ್‌ಗಳಿಗೆ ಮತ್ತು ನಿರ್ಜೀವ ಪಿಚ್‌ಗಳಲ್ಲಿ ಬ್ಯಾಟ್ಸ್‌ಮನ್ ಮೇಲೆ ಕಡಿವಾಣ ಹಾಕಲು ಇದು ಸಹಕಾರಿ ಎಂದಿದ್ದಾರೆ. ‘ಟೆಸ್ಟ್ ಪಂದ್ಯದಲ್ಲಿ ಪಿಚ್ ಉತ್ತಮವಾಗಿರದಿದ್ದರೆ, ಸಹಜವಾಗಿಯೇ ಆಟದ ಗುಣಮಟ್ಟವೂ ಕುಸಿಯುತ್ತದೆ. ಕೆಟ್ಟ ಹೊಡೆತ ಬಾರಿಸದಿದ್ದರೆ ಬೌಲರ್‌ಗೆ ನನ್ನನ್ನು ಔಟ್ ಮಾಡಲು ಸಾಧ್ಯವಿಲ್ಲ ಎಂದು ಬ್ಯಾಟ್ಸ್‌ಮನ್‌ಗೆ ತಿಳಿದಿರುತ್ತದೆ. ಆದರೆ ಆಗ ಪಂದ್ಯಕ್ಕೆ ರೋಚಕತೆ ತರಲು 45-50 ಅಥವಾ 55 ಓವರ್ ಬಳಿಕ ಹೊಸ ಚೆಂಡು ನೀಡಬಹುದು. ಏಕದಿನ ಕ್ರಿಕೆಟ್‌ನಲ್ಲಿ 50 ಓವರ್‌ಗಳಿದ್ದರೂ, 2 ಚೆಂಡು ಬಳಸಲಾಗುತ್ತದೆ. ಅಂದರೆ ಅಲ್ಲಿ ಪ್ರತಿ 25 ಓವರ್‌ಗೆ ಒಂದು ಚೆಂಡು ನೀಡಲಾಗುತ್ತದೆ’ ಎಂದು ಸಚಿನ್ ಹೇಳಿದ್ದಾರೆ.
ಇದನ್ನೂ ಓದಿ: ಲಿಯಾಂಡರ್ ಪೇಸ್ 2024ರವರೆಗೆ ಕಾಯಲ್ವಂತೆ!
‘ಟೆಸ್ಟ್ ಕ್ರಿಕೆಟ್‌ನಲ್ಲಿ ನೀವು ಚೆಂಡಿಗೆ ಎಂಜಲು ಹಚ್ಚಿ ಸ್ವಿಂಗ್ ಮಾಡಲು ಅವಕಾಶ ನೀಡುವುದಿಲ್ಲ ಎಂದಾದರೆ ಅದು ಅಹರ್ನಿಶಿ ಏಕದಿನ ಪಂದ್ಯದಂತಾಗುತ್ತದೆ. ಅಹರ್ನಿಶಿ ಏಕದಿನ ಪಂದ್ಯದಲ್ಲಿ 2ನೇ ಸರದಿಯಲ್ಲಿ ಬೌಲಿಂಗ್ ಮಾಡುವಾಗ ಇಬ್ಬನಿ ಸಮಸ್ಯೆ ಕಾಡುತ್ತದೆ. ಕಾಗದದ ಮೇಲೆ ಎರಡೂ ತಂಡಗಳಿಗೆ ಒಂದೇ ರೀತಿಯ ನಿಯಮವಿದ್ದರೂ, ಆಟದ ವಿಷಯ ಬಂದಾಗ ವಾತಾವರಣದಿಂದ 2ನೇ ಸರದಿಯಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಲಾಭವಾಗುತ್ತದೆ’ ಎಂದು ಸಚಿನ್ ವಿವರಿಸಿದ್ದಾರೆ.
ಇಂಗ್ಲೆಂಡ್‌ನಲ್ಲಿ ಬೌಲರ್‌ಗಳಿಗೆ ಬೆವರುವುದಿಲ್ಲ!
ಬೌಲರ್‌ಗಳಿಗೆ ಎಂಜಲಿಗೆ ಬದಲಾಗಿ ಬೆವರು ಹಚ್ಚಿ ಚೆಂಡಿಗೆ ಹೊಳಪು ನೀಡಲು ಐಸಿಸಿ ಅವಕಾಶ ನೀಡಿದೆ. ಆದರೆ, ಇಂಗ್ಲೆಂಡ್, ನ್ಯೂಜಿಲೆಂಡ್‌ನಂಥ ತಂಪಾದ ವಾತಾವರಣದಲ್ಲಿ ಬೌಲರ್‌ಗಳಿಗೆ ಬೆವರುವುದೇ ಇಲ್ಲ. ಆಗ ಏನು ಮಾಡಬೇಕು ಎಂದು ಸಚಿನ್ ಪ್ರಶ್ನಿಸಿದ್ದಾರೆ. ‘1992ರಲ್ಲಿ ಯಾರ್ಕ್‌ಷೈರ್ ಪರ ಆಡುತ್ತಿದ್ದಾಗಿನ ದಿನಗಳು ನನಗಿನ್ನೂ ನೆನಪಿವೆ. ಅದು ಮೇ ತಿಂಗಳ ಆರಂಭವಾಗಿತ್ತು. ಆಗ ಅಲ್ಲಿ ಮಂಜಿನ ವಾತಾವರಣವಿತ್ತು. ನಾನು 5 ಜೆರ್ಸಿಗಳನ್ನು ಧರಿಸಿದ್ದೆ. ಆಗ ಅಲ್ಲಿ ಬೆವರುವ ಪ್ರಶ್ನೆಯೇ ಇಲ್ಲ. ಚೆಂಡನ್ನು ಶೈನ್ ಮಾಡುವುದು ಹೇಗೆ?’ ಎಂದು ಸಚಿನ್ ಹೇಳಿದ್ದಾರೆ.