

ನವದೆಹಲಿ: ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಕುಸ್ತಿಪಟು ಸಾಕ್ಷಿ ಮಲಿಕ್ ಮತ್ತು ವೇಟ್‌ಲ್ಟಿರ್ ಮೀರಾಬಾಯಿ ಚಾನು ಹೆಸರು ಈ ಬಾರಿ ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡಿದೆ.. ದೇಶದ ಅತ್ಯುನ್ನತ ಕ್ರೀಡಾ ಗೌರವವೇ ಲಭಿಸಿರುವಾಗ ಅದಕ್ಕಿಂತ ಕಡಿಮೆ ದರ್ಜೆಯ ಪ್ರಶಸ್ತಿಗೆ ಇವರಿಬ್ಬರು ಆಸೆ ಪಡಲು ಕಾರಣವೇನೆಂದು ಅನುಮಾನ ಮೂಡುವುದು ಸಹಜ. ಅದರ ಹಿಂದಿರುವ ಕಾರಣಗಳನ್ನು ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಓದಿ.
ಖೇಲ್‌ರತ್ನ ಪ್ರಶಸ್ತಿಯೊಂದಿಗೆ 7.5 ಲಕ್ಷ ರೂ. ಪದಕ ಮತ್ತು ಪ್ರಮಾಣ ಪತ್ರವಷ್ಟೇ ಲಭಿಸುತ್ತದೆ. ಅದೇ ಅರ್ಜುನ ಪ್ರಶಸ್ತಿ ಪುರಸ್ಕೃತರಿಗೆ 5 ಲಕ್ಷ ರೂ. ಪ್ರತಿಮೆ ಮತ್ತು ಪ್ರಮಾಣಪತ್ರದ ಜತೆಗೆ ಉಚಿತ ರೈಲ್ವೇ ಪ್ರಯಾಣ, ದೇಶೀಯ ವಿಮಾನದಲ್ಲಿ ವರ್ಷಕ್ಕೆ 6 ಬಾರಿ ಉಚಿತ ಪ್ರಯಾಣದ ಅವಕಾಶ ಲಭಿಸುತ್ತದೆ. ಅರ್ಜುನ ಪ್ರಶಸ್ತಿ ಪುರಸ್ಕೃತರಿಗೆ ಜೀವಮಾನವಿಡೀ ಎಸಿ ದರ್ಜೆಯಲ್ಲೂ ಉಚಿತ ಪ್ರಯಾಣ ಮತ್ತು ಅವರಿಗೆ 65 ವರ್ಷ ಮೇಲ್ಪಟ್ಟ ಬಳಿಕ ಜತೆಗಾರರೊಬ್ಬರಿಗೂ ಉಚಿತ ಪ್ರಯಾಣದ ಅನುಕೂಲವನ್ನು ರೈಲ್ವೇ ಸಚಿವಾಲಯ ನೀಡಿದೆ. ಅರ್ಜುನ ಪುರಸ್ಕೃತರಿಗೆ ನೀಡುವ ಈ ವಿಶೇಷ ಸೌಲಭ್ಯವೇ ಸಾಕ್ಷಿ, ಮೀರಾಬಾಯಿ ಇದರತ್ತ ಆಸಕ್ತಿ ತೋರಲು ಕಾರಣವಾಗಿರಬಹುದು ಎನ್ನಲಾಗುತ್ತಿದೆ.
ಇಕ್ಕಟ್ಟಿನಲ್ಲಿ ಕ್ರೀಡಾ ಸಚಿವಾಲಯ
ಸಾಕ್ಷಿ ಮಲಿಕ್, ಮೀರಾಬಾಯಿ ಚಾನು ಅವರ ಒತ್ತಾಸೆಯಂತೆ ಕುಸ್ತಿ ಮತ್ತು ವೇಟ್‌ಲಿಫ್ಟಿಂಗ್ ಕ್ರೀಡಾ ಸಂಸ್ಥೆಗಳು ಅರ್ಜುನ ಪ್ರಶಸ್ತಿಗೆ ಶಿಫಾರಸು ಸಲ್ಲಿಸಿರುವುದರಿಂದ ಈಗ ಕ್ರೀಡಾ ಸಚಿವಾಲಯ ಇಕ್ಕಟ್ಟಿಗೆ ಸಿಲುಕಿದೆ. ‘ಹಿಂದೆಂದೂ ಈ ರೀತಿ ಖೇಲ್‌ರತ್ನ ಪುರಸ್ಕೃತರ ಹೆಸರು ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡಿರಲಿಲ್ಲ. ಈ ಬೆಳವಣಿಗೆ ನಮಗೆ ಅಚ್ಚರಿ ತಂದಿದೆ. ಯಾವ ರೀತಿಯ ನಿರ್ಧಾರ ಕೈಗೊಳ್ಳಬೇಕೆಂದು ಪರಿಶೀಲಿಸಲಿದ್ದೇವೆ’ ಎಂದು ಕ್ರೀಡಾ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ಅರ್ಜುನಕ್ಕೆ ಧೋನಿ ಆಸೆ ಪಟ್ಟಿರಲಿಲ್ಲ
ಇದುವರೆಗೆ 38 ಕ್ರೀಡಾಪಟುಗಳು ಖೇಲ್‌ರತ್ನ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದು, ಈ ಪೈಕಿ ಸಾಕ್ಷಿ, ಮೀರಾಬಾಯಿ ಹೊರತಾಗಿ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮಾತ್ರ ಅರ್ಜುನ ಪಡೆಯದೆ ಖೇಲ್‌ರತ್ನ ಪ್ರಶಸ್ತಿ ಪುರಸ್ಕತರಾಗಿದ್ದರು. ಧೋನಿ 2007ರಲ್ಲೇ ಖೇಲ್‌ರತ್ನ ಪಡೆದಿದ್ದರೂ, ಬಳಿಕ ಎಂದೂ ಅರ್ಜುನಕ್ಕೆ ಅರ್ಜಿ ಸಲ್ಲಿಸಿರಲಿಲ್ಲ.
ಪಿಎಚ್‌ಡಿ ನಂತರ ಪದವಿ ಬೇಕೇ?
ಸಾಕ್ಷಿ ಮಲಿಕ್ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಬೆನ್ನಲ್ಲಿಯೇ ಖೇಲ್‌ರತ್ನ ಗೌರವ ಪಡೆದಿದ್ದರೆ, ಮೀರಾಬಾಯಿ 2017ರಲ್ಲಿ ವಿಶ್ವ ಚಾಂಪಿಯನ್‌ಷಿಪ್ ಸ್ವರ್ಣ ಜಯಿಸಿದ ಬಳಿಕ 2018ರಲ್ಲಿ ಖೇಲ್‌ರತ್ನ ಪಡೆದಿದ್ದರು. ಮೀರಾಬಾಯಿ ಅರ್ಜುನ ಪ್ರಶಸ್ತಿಯ ಕನಸು ಹಂಚಿಕೊಂಡ ಕಾರಣ ಅವರ ಹೆಸರನ್ನು ಶಿಫಾರಸು ಮಾಡದಿರಲಾಗಲಿಲ್ಲ ಎಂದು ವೇಟ್‌ಲಿಫ್ಟಿಂಗ್ ಫೆಡರೇಷನ್ ಕಾರ್ಯದರ್ಶಿ ಸಹದೇವ್ ಯಾದವ್ ತಿಳಿಸಿದ್ದಾರೆ. ಇನ್ನು ಸಾಕ್ಷಿ ಹೆಸರನ್ನೂ ಅವರ ಆಸೆಯಂತೆ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಶಿಫಾರಸು ಮಾಡಿದೆ. ‘ಇದು ವಿಷಯವೊಂದರಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ ಬಳಿಕ ಮತ್ತೆ ಅದೇ ವಿಷಯದಲ್ಲಿ ಪದವಿಗೆ ಅರ್ಜಿ ಸಲ್ಲಿಸಿದಂತಾಗಿದೆ. ರಿಯೋ ಒಲಿಂಪಿಕ್ಸ್‌ಗೆ ಮುನ್ನ ಸಾಕ್ಷಿ ಹೆಚ್ಚಿನ ಸಾಧನೆ ಮಾಡಿರಲಿಲ್ಲ. ಹೀಗಾಗಿ ಆಕೆಯ ಹೆಸರು ಅರ್ಜುನಕ್ಕೆ ಶಿಫಾರಸು ಮಾಡಿರಲಿಲ್ಲ. ರಿಯೋ ಬಳಿಕವೂ ಹೆಚ್ಚಿನ ಸಾಧನೆ ತೋರದಿದ್ದರೂ ಅರ್ಜುನ ಪ್ರಶಸ್ತಿಯನ್ನು ಬಯಸಿದ್ದಾರೆ’ ಎಂದು ಡಬ್ಲ್ಯುಎಫ್ಐ ಅಧಿಕಾರಿಯೊಬ್ಬರು ಹೇಳಿದ್ದಾರೆ.