ಲಿಯಾಂಡರ್ ಪೇಸ್ 2024ರವರೆಗೆ ಕಾಯಲ್ವಂತೆ!

web2
Published on

ನವದೆಹಲಿ: ಈ ವರ್ಷವೇ ವೃತ್ತಿಜೀವನವನ್ನು ಕೊನೆಗೊಳಿಸಲು ಸಜ್ಜಾಗಿದ್ದ ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್, ಕರೊನಾ ಹಾವಳಿಯಿಂದಾಗಿ ಒಲಿಂಪಿಕ್ಸ್ ಮುಂದೂಡಿಕೆ ಆಗಿರುವುದರಿಂದ ಮುಂದಿನ ವರ್ಷದವರೆಗೂ ಆಡುವ ಬಗ್ಗೆ ಈಗಾಗಲೆ ಸುಳಿವು ನೀಡಿದ್ದಾರೆ. ಇದರ ಬೆನ್ನಲ್ಲೇ, 2021ರಲ್ಲಿ ಒಲಿಂಪಿಕ್ಸ್ ನಡೆಯದಿದ್ದರೆ 2024ರ ಒಲಿಂಪಿಕ್ಸ್‌ವರೆಗೆ ಕಾಯುವುದಿಲ್ಲ ಎಂದೂ 46 ವರ್ಷದ ಪೇಸ್ ಸ್ಪಷ್ಟಪಡಿಸಿದ್ದಾರೆ.

ಇದುವರೆಗೆ 7 ಒಲಿಂಪಿಕ್ಸ್‌ಗಳಲ್ಲಿ ಆಡಿರುವ ಪೇಸ್, ಇನ್ನೊಂದು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದರೆ ಗರಿಷ್ಠ 8 ಬಾರಿ ಆಡಿದ ಟೆನಿಸ್ ಆಟಗಾರನೆಂಬ ವಿಶ್ವದಾಖಲೆ ಬರೆಯಲಿದ್ದಾರೆ. ‘ಟೋಕಿಯೊ ಒಲಿಂಪಿಕ್ಸ್ ರದ್ದುಗೊಂಡರೆ ಆಗ ರಿಯೋದಲ್ಲೇ ನನ್ನ ಕೊನೆಯ ಒಲಿಂಪಿಕ್ಸ್ ಆಡಿದ್ದೇನೆ ಎಂದು ತಿಳಿದುಕೊಳ್ಳಿ. 2024ರ ಮುಂದಿನ ಒಲಿಂಪಿಕ್ಸ್‌ವರೆಗೆ ಕಾಯಲಾರೆ’ ಎಂದು ಪೇಸ್, ಪೂರವ್ ರಾಜಾ ಜತೆಗಿನ ಇನ್‌ಸ್ಟಾಗ್ರಾಂ ಮಾತುಕತೆಯಲ್ಲಿ ತಿಳಿಸಿದ್ದಾರೆ.

18 ಗ್ರಾಂಡ್ ಸ್ಲಾಂಗಳ (8 ಡಬಲ್ಸ್, 10 ಮಿಶ್ರ ಡಬಲ್ಸ್) ಒಡೆಯ ಪೇಸ್ ಇನ್ನು 3 ಗ್ರಾಂಡ್ ಸ್ಲಾಂಗಳಲ್ಲಿ ಆಡಿದರೆ, 100 ಗ್ರಾಂಡ್ ಸ್ಲಾಂಗಳಲ್ಲಿ ಆಡಿದ ದಾಖಲೆಯನ್ನೂ ಬರೆಯಲಿದ್ದಾರೆ. 1996ರ ಅಟ್ಲಾಂಟ ಒಲಿಂಪಿಕ್ಸ್‌ನ ಸಿಂಗಲ್ಸ್ ಕಂಚು ವಿಜೇತರೂ ಆಗಿದ್ದಾರೆ. 1992ರಲ್ಲಿ ಅವರು ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net