ಬಿಳಿ ಬಣ್ಣದ ನಾಗರಹಾವು ಪತ್ತೆ; ಆಶ್ಚರ್ಯಗೊಂಡ ಜನರು!

white cobra
Published on

ತಮಿಳುನಾಡು: ಕೊಯಮತ್ತೂರಿನ ವಸತಿ ಪ್ರದೇಶದಲ್ಲಿ ಅಪರೂಪದ ಬಿಳಿ ನಾಗರಹಾವು ಪತ್ತೆಯಾಗಿದೆ. ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣಾ ಟ್ರಸ್ಟ್​ನ ಸ್ವಯಂಸೇವಕರು ಬಿಳಿ ನಾಗರಹಾವನ್ನು ಸಂರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಸುರಕ್ಷಿತವಾಗಿ ರಕ್ಷಣೆ

ಕುರಿಚಿ ಎಂಬಲ್ಲಿ ಬಿಳಿ ನಾಗರಹಾವು ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಸ್ಥಳೀಯ ನಿವಾಸಿಗಳು ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣಾ ಟ್ರಸ್ಟ್‌ನ ಸ್ವಯಂಸೇವಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸ್ವಯಂಸೇವಕರು ಬಿಳಿ ನಾಗರಹಾವನ್ನು ರಕ್ಷಿಸಿದ್ದಾರೆ. ಬಳಿಕ ಅರಣ್ಯಿ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿ, ಸುರಕ್ಷಿತವಾಗಿ ಕಾಡಿಗೆ ಬಿಡುವಂತೆ ಒತ್ತಾಯಿಸಿದ್ದಾರೆ.

ಬಿಳಿ ನಾಗರಹಾವು ಅತ್ಯಂತ ಅಪರೂಪ

ಬಿಳಿ ನಾಗರಹಾವು ಅತ್ಯಂತ ಅಪರೂಪದ್ದಾಗಿದೆ. ಅನುವಂಶಿಕ ರೂಪಾಂತರದಿಂದ ಕೆಲವೇ ಕೆಲವು ನಾಗರಹಾವುಗಳಲ್ಲಿ ಬಿಳಿ ಬಣ್ಣ ಕಂಡು ಬರುತ್ತದೆ. ಇದನ್ನು ಅಲ್ಬಿನೋಸ್ ಎಂದು ಕರೆಯಲಾಗುತ್ತದೆ. ಬಿಳಿ ನಾಗರಹಾವಿನಲ್ಲೂ ವಿಷದ ಅಂಶ ಇದ್ದು, ಮನುಷ್ಯರಿಗೆ ಕಚ್ಚಿದಲ್ಲಿ ಜೀವಕ್ಕೆ ಆಪತ್ತು ಎದುರಾಗಬಹುದು ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net