

ಮುಂಬೈ: ಬಾಲಿವುಡ್ ಖ್ಯಾತ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ( Karan Johar ) ಅವರು 'ಕಾಫಿ ವಿತ್ ಕರಣ್' ಹೆಸರಿನಲ್ಲಿ ಬಹಳ ಜನಪ್ರಿಯ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಸಿನಿಮಾ, ಕ್ರೀಡೆ ಹಾಗೂ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಶಾರುಖ್, ಸಲ್ಮಾನ್, ಆಮೀರ್ ಹಾಗೂ ಅಕ್ಷಯ್ ಸೇರಿದಂತೆ ಬಾಲಿವುಡ್ ದಿಗ್ಗಜರೇ ಈ ಶೋನಲ್ಲಿ ಭಾಗವಹಿಸಿದ್ದಾರೆ. ವೀರೇಂದ್ರ ಸೆಹ್ವಾಗ್, ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ರಂತಹ ಖ್ಯಾತ ಕ್ರಿಕೆಟಿಗರು ಕೂಡ ಇದರಲ್ಲಿ ಭಾಗವಹಿಸಿದ್ದಾರೆ.
ಘಟಾನುಘಟಿಗಳೇ ಈ ಶೋನಲ್ಲಿ ಭಾಗವಹಿಸಿರುವಾಗ ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತರಾದ ವಿರಾಟ್ ಕೊಹ್ಲಿ ( Virat Kohli ) ಮಾತ್ರ ಏಕೆ ಶೋನಲ್ಲಿ ಭಾಗಿಯಾಗಿಲ್ಲ ಎಂಬ ಪ್ರಶ್ನೆ ಇದೆ. ವಿರಾಟ್ ಕೊಹ್ಲಿ... ಈ ಹೆಸರೇ ಸಾಕು ಯಾವುದೇ ಕಾರ್ಯಕ್ರಮ ಹಿಟ್ ಆಗಲು. ಕೊಹ್ಲಿ ಎಲ್ಲೇ ಹೋದರು ಅಲ್ಲಿ ಜನ ಸಾಗರವೇ ಹರಿದು ಬರುತ್ತದೆ. ಕ್ರೀಸ್ಗೆ ಬಂದರೆ ಇಡೀ ಮೈದಾನದಲ್ಲಿ ಕೊಹ್ಲಿ ಜಪ ಶುರುವಾಗುತ್ತದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಕೊಹ್ಲಿಗೆ ವಿಶೇಷ ಅಭಿಮಾನ ಬಳಗವಿದೆ. ಹೀಗಿರುವಾಗ ಕೊಹ್ಲಿ ಮಾತ್ರ ಏಕೆ ಈ ಶೋನಲ್ಲಿ ಭಾಗವಹಿಸುತ್ತಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಆ ಪ್ರಶ್ನೆಗೆ ಕೊನೆಗೂ ಕರಣ್ ಜೋಹರ್ ಅವರೇ ಉತ್ತರ ನೀಡಿದ್ದಾರೆ.
ಅಂದಹಾಗೆ, ವಿರಾಟ್ ಕೊಹ್ಲಿ ಅವರ ಧರ್ಮಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರೇ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹಲವಾರು ಬಾರಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಆದರೆ, ಕೊಹ್ಲಿ ಮಾತ್ರ ಏಕೆ ಅತಿಥಿಯಾಗಿ ಬಂದಿಲ್ಲ? ಈ ಕುರಿತು ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ತಮ್ಮ ಪಾಡ್ಕಾಸ್ಟ್ನಲ್ಲಿ ಕರಣ್ ಜೋಹರ್ ಅವರಿಗೆ ಪ್ರಶ್ನೆ ಮಾಡಿದರು. ಇದಕ್ಕೆ ಕರಣ್ ಏನು ಉತ್ತರ ಕೊಟ್ಟರು ಅನ್ನೋದನ್ನು ಮುಂದೆ ನೋಡೋಣ.
2019 ರಲ್ಲಿ ನಡೆದ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅತಿಥಿಗಳಾಗಿ ಕಾಣಿಸಿಕೊಂಡರು. ಈ ಶೋ ಬಳಿಕ ಅನೇಕ ಟೀಕೆಗಳು ಬಂದವು. ಈ ಟೀಕೆಗಳೇ ವಿರಾಟ್ ಕೊಹ್ಲಿ ಗೈರುಹಾಜರಿಗೆ ಮುಖ್ಯ ಕಾರಣ ಎಂದು ಕರಣ್ ಬಹಿರಂಗಪಡಿಸಿದ್ದಾರೆ. ಆ ಘಟನೆ ನಡೆದ ಬಳಿಕ ವಿರಾಟ್ ಅವರನ್ನು ಶೋನಲ್ಲಿ ಭಾಗವಹಿಸುವಂತೆ ನಾನೆಂದಿಗೂ ಕೇಳಿಲ್ಲ ಮತ್ತು ಯಾವುದೇ ಕ್ರಿಕೆಟಿಗನನ್ನು ಸಂದರ್ಶನಕ್ಕೆ ಹಾಜರಾಗುವಂತೆ ಮನವಿ ಮಾಡಲಿಲ್ಲ ಎಂದು ಕರಣ್ ತಿಳಿಸಿದರು.
2019 ರಲ್ಲಿ ಕೆ.ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಶೋನಲ್ಲಿ ಭಾಗವಹಿಸಿದ್ದರು. ಅಲ್ಲಿ ಹಾರ್ದಿಕ್ ಮಹಿಳೆಯರ ಬಗ್ಗೆ ಲಿಂಗಭೇದ ಹೇಳಿಕೆಗಳನ್ನು ನೀಡಿದ್ದರು. ಇದರಿಂದ ದೊಡ್ಡ ವಿವಾದ ಸೃಷ್ಟಿಯಾಗಿ ಬಿಸಿಸಿಐ ಇಬ್ಬರನ್ನೂ ಆಸ್ಟ್ರೇಲಿಯಾ ಸೀರೀಸ್ನಿಂದ ಅಮಾನತುಗೊಳಿಸಿತ್ತು. ಈ ಬಗ್ಗೆ ಕೆ.ಎಲ್. ರಾಹುಲ್ ಇತ್ತೀಚೆಗೆ ಪ್ರತಿಕ್ರಿಯೆ ನೀಡಿ, ಈ ಘಟನೆ ನನ್ನನ್ನು ತೀವ್ರವಾಗಿ ಗಾಯಗೊಳಿಸಿತು ಎಂದರು. ಇನ್ನು ಈ ಘಟನೆಯ ನಂತರ, ಕರಣ್ ಜೋಹರ್ ಕೂಡ ಕ್ರಿಕೆಟಿಗರನ್ನು ಶೋಗೆ ಆಹ್ವಾನಿಸುವುದನ್ನು ನಿಲ್ಲಿಸಿದರು. (ಏಜೆನ್ಸೀಸ್)